ಪುನೀತ್ ಜೊತೆ ಸಿನಿಮಾ ಯಾವಾಗ? ಶಿವರಾಜ್ ಕುಮಾರ್ ಕೊಟ್ಟರು ಉತ್ತರ
ಶಿವರಾಜ್ ಕುಮಾರ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ 'ಓಂ' ಸಿನಿಮಾ ಬಿಡುಗಡೆ ಆಗಿ ಇಂದಿಗೆ 25 ವರ್ಷವಾಯಿತು.
Recommended Video
ಆ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲೆಂದು ಇಂದು ಶಿವರಾಜ್ ಕುಮಾರ್ ಹಾಗೂ ಓಂ ಸಿನಿಮಾ ನಿರ್ದೇಶಕ ಉಪೇಂದ್ರ ಒಟ್ಟಿಗೆ ಫೇಸ್‌ಬುಕ್ ಲೈವ್ ಆಗಮಿಸುವವರಿದ್ದರು.
ಆದರೆ ತಾಂತ್ರಿಕ ಕಾರಣದಿಂದ ಉಪೇಂದ್ರ ಅವರು ಶಿವರಾಜ್ ಕುಮಾರ್ ಅವರ ಜೊತೆ ಲೈವ್ ಗೆ ಸೇರಿಕೊಳ್ಳಲಾಗಲಿಲ್ಲ. ಬದಲಿಗೆ ಶಿವರಾಜ್ ಕುಮಾರ್ ಒಬ್ಬರೇ ಲೈವ್ ನಡೆಸಿಕೊಟ್ಟರು. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಅದರಲ್ಲಿ ಒಂದು ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಯಾವಾಗ? ಎಂಬುದು.

ಹಲವಾರು ಬಾರಿ ಎದುರಿಸಿರುವ ಪ್ರಶ್ನೆ ಇದು
ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಸಹ ಈ ಪ್ರಶ್ನೆಯನ್ನು ಹಲವಾರು ಭಾರಿ ಎದುರಿಸಿದ್ದಾರೆ. ಇಂದೂ ಸಹ ಲೈವ್ ನಲ್ಲಿ ಕೆಲವರು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಯಾವಾಗ ಮಾಡ್ತೀರ? ಎಂದು ಪ್ರಶ್ನೆ ಕೇಳಿದರು.

ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್
ಇದಕ್ಕೆ ಉತ್ತರಿಸಿದ ಶಿವರಾಜ್ ಕುಮಾರ್, 100% ನಾನು ಮತ್ತು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡ್ತೀವಿ. ಒಳ್ಳೆ ಕತೆಗಾಗಿ ಕಾಯುತ್ತಿದ್ದೀವಿ. ಕತೆ ಸಿಕ್ಕ ಕೂಡಲೆ ಒಟ್ಟಿಗೆ ಸಿನಿಮಾ ಮಾಡ್ತೀವಿ, ಅದನ್ನು ನಮ್ಮ ಹೋಮ್ ಪ್ರೊಡಕ್ಷನ್ (ವಜ್ರೇಶ್ವರಿ ಕಂಬೈನ್ಸ್) ಮೂಲಕವೇ ಮಾಡ್ತೀವಿ ಎಂದರು.

ಓಂ 2 ಮಾಡಿ ಎಂಬ ಒತ್ತಾಯವೂ ಬಂತು
ಲೈವ್ ನಲ್ಲಿ ಮತ್ತೆ-ಮತ್ತೆ ಕೇಳಿ ಬಂದ ಮತ್ತೊಂದು ಪ್ರಶ್ನೆಯೆಂದರೆ, ಓಂ 2 ಮಾಡಿ ಎಂಬುದು. ಇದಕ್ಕೂ ಶೀವರಾಜ್ ಧನಾತ್ಮಕವಾಗಿಯೇ ಉತ್ತರಿಸಿದರು. ಉಪೇಂದ್ರ ಅವರ ನಿರ್ದೇಶನದಲ್ಲಿ ನಟಿಸಲು ಆಸಕ್ತಿ ಇದೆ, ಖಂಡಿತ ಅವರೊಟ್ಟಿಗೆ ಸಿನಿಮಾ ಮಾಡ್ತೀನಿ ಎಂದರು ಶಿವಣ್ಣ.

'ದರ್ಶನ್ ಅವರೊಟ್ಟಿಗೂ ಸಿನಿಮಾ ಮಾಡ್ತೀನಿ'
ದರ್ಶನ್ ಅವರೊಟ್ಟಿಗೆ ಸಿನಿಮಾ ಮಾಡಿ ಎಂಬ ಬೇಡಿಕೆ ಕೆಲವರು ಇಟ್ಟರು, ಅದಕ್ಕೂ ಒಪ್ಪಿಗೆ ಸೂಚಿಸಿದ ಶಿವರಾಜ್ ಕುಮಾರ್, ದರ್ಶನ್ ಒಬ್ಬ ಒಳ್ಳೆಯ ನಟ, ಅವಕಾಶ ಸಿಕ್ಕರೆ ಅವರೊಟ್ಟಿಗೂ ಸಿನಿಮಾ ಮಾಡ್ತೀನಿ. ಯಾರೊಂದಿಗೂ ಸಿನಿಮಾ ಮಾಡಬಾರದು ಎಂಬುದು ನನ್ನ ನಿಲುವಲ್ಲ ಎಂದರು ಶಿವರಾಜ್ ಕುಮಾರ್.

ಸುದೀಪ್ ಜೊತೆ ಮತ್ತೊಂದು ಸಿನಿಮಾ?
ಸುದೀಪ್ ಅವರೊಟ್ಟಿಗೆ ಮತ್ತೊಂದು ಸಿನಿಮಾ ಮಾಡಿ ಎಂದು ಕೆಲವರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಿವರಾಜ್ ಕುಮಾರ್, ಸುದೀಪ್ ಅವರೊಟ್ಟಿಗೆ ಕೆಲಸ ಮಾಡುವುದು ಖುಷಿಯ ವಿಚಾರ, ಈಗ ಒಂದು ಸಿನಿಮಾ ಅವರೊಟ್ಟಿಗೆ ಮಾಡಿದ್ದೇನೆ. ಅವಕಾಶ ಸಿಕ್ಕರೆ ಮತ್ತೊಂದು ಸಿನಿಮಾ ಮಾಡ್ತೀನಿ ಎಂದರು.


Click it and Unblock the Notifications











