ಶಿವಣ್ಣನ ಸಿನಿಮಾವನ್ನು ನಿರ್ದೇಶಿಸಲು ಕಾಲ ಕೂಡಿ ಬಂದಿದೆ: ಪುನೀತ್
'ಸಲಗ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ದಂಡೇ ಸೇರಿತ್ತು. ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಉಪೇಂದ್ರ, ದುನಿಯಾ ವಿಜಯ್, ಡಾಲಿ ಧನಂಜಯ್ ಇನ್ನೂ ಹಲವು ಸೆಲೆಬ್ರಿಟಿಗಳು ಒಟ್ಟಾಗಿದ್ದರು.
ವೇದಿಕೆ ಮೇಲೆರಿ ಮಾತನಾಡಿದ ಸ್ಟಾರ್ ನಟರು ಒಬ್ಬೊಬ್ಬರು ಒಂದೊಂದು ಖುಷಿಯ ವಿಚಾರಗಳನ್ನು ಹಂಚಿಕೊಂಡರು. ಅದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಹಂಚಿಕೊಂಡ ವಿಚಾರ ಕನ್ನಡ ಸಿನಿ ಪ್ರೇಮಿಗಳಿಗೆ ಖುಷಿ ತರುವಂಥಹುದ್ದು.
ನಟ ಪುನೀತ್ ರಾಜ್‌ಕುಮಾರ್ ನಿರ್ದೇಶಕ ಆಗಲಿದ್ದಾರಂತೆ. ಸಿನಿಮಾ ನಿರ್ದೇಶನ ಮಾಡುವುದು ನನ್ನ ಬಹುದಿನಗಳ ಕನಸು, ಅದನ್ನು ನನಸು ಮಾಡಿಕೊಳ್ಳುತ್ತೇನೆ ಎಂದ ಪುನೀತ್ ರಾಜ್‌ಕುಮಾರ್, ಶಿವಣ್ಣನ ಸಿನಿಮಾವನ್ನು ನಿರ್ದೇಶಿಸಬೇಕೆಂಬ ಆಸೆ ಇದೆ ಎಂದು ಗುಟ್ಟು ರಟ್ಟು ಮಾಡಿದರು.

ನಿರ್ದೇಶನ ಮಾಡಬೇಕೆಂಬ ಆಸೆಯಿತ್ತು: ಪುನೀತ್
ದುನಿಯಾ ವಿಜಯ್ ನಿರ್ದೇಶಕ ಆದಾಗ ಆಶ್ಚರ್ಯವಾಯಿತು. ನಾನು ಬಹಳ ವರ್ಷ ಹಿಂದೆ ಯೋಚನೆ ಮಾಡಿದ್ದೆ ಸಿನಿಮಾ ನಿರ್ದೇಶನ ಮಾಡಬೇಕೆಂದು. ಅದರಲ್ಲೂ ಶಿವರಾಜ್ ಕುಮಾರ್ ಅವರ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ಈಗ ಇವರನ್ನೆಲ್ಲಾ ನೋಡುತ್ತಿದ್ದರೆ ನಾನು ಆ ಕನಸಿಗೆ ಮರು ಜೀವ ಕೊಡಬೇಕು ಎನಿಸುತ್ತಿದೆ ಎಂದರು ಪುನೀತ್ ರಾಜ್‌ಕುಮಾರ್.

ಸಹಾಯ ಮಾಡಲು ಘಟಾನುಘಟಿಗಳೇ ಇದ್ದಾರೆ: ಪುನೀತ್
ಪುನೀತ್ ಈ ವಿಷಯ ಹೇಳುತ್ತಿದ್ದಂತೆ ಎದುರು ಕೂತಿದ್ದ ಉಪೇಂದ್ರ, ಪುನೀತ್‌ಗೆ ನಾನು ಸಹಾಯಕ ನಿರ್ದೇಶಕನಾಗುತ್ತೀನಿ ಎಂದರು. ಇನ್ನು ಕೆಲವರು ನಾವೂ ಸಹಾಯ ಮಾಡುತ್ತೀನಿ ಎಂದು ಕೈ ಎತ್ತಿದರು. ಅದಕ್ಕೆ ಪ್ರತಿಕ್ರಿಯಿಸಿದ ಪುನೀತ್, ನಿರ್ದೇಶಕ ಸಂತೋಶ್ ಇದ್ದಾರೆ, ಚೇತನ್ ಇದ್ದಾರೆ, ನಾನು ನಿರ್ದೇಶನ ಮಾಡುತ್ತೀನೆಂದರೆ ಇವರೆಲ್ಲ ಸಹಾಯ ಮಾಡುತ್ತಾರೆ, ನಾನು ಚೇರ್ ಮೇಲೆ ಆರಾಮವಾಗಿ ಕುಳಿತು ಆಕ್ಷನ್ ಕಟ್ ಹೇಳುತ್ತೀನಿ ಅಷ್ಟೆ ಎಂದು ನಕ್ಕರು ಪುನೀತ್.

ಉಪೇಂದ್ರ ನನಗೆ ಸ್ಪೂರ್ತಿ: ಪುನೀತ್
''ಉಪೇಂದ್ರ ನಿರ್ದೇಶಿಸಿರುವ ಎಲ್ಲ ಸಿನಿಮಾಗಳು ನನಗೆ ಬಹಳ ಇಷ್ಟ. ಅದರಲ್ಲೂ ಅವರ ಮೊದಲನೇ ಸಿನಿಮಾ 'ತರ್ಲೆ ನನ್ ಮಗ' ಅನ್ನು ನಾನು ನೂರಾರು ಬಾರಿ ನೋಡಿದ್ದೇನೆ. ನಮ್ಮ ಬ್ಯಾನರ್‌ಗೆ 'ಓಂ', 'ಸ್ವಸ್ತಿಕ್' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ನನಗೆ ಸ್ಪೂರ್ತಿ, ದುನಿಯಾ ವಿಜಯ್ ಸಹ ಈಗ ಸಿನಿಮಾ ಮಾಡಿದ್ದಾರೆ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಾನೂ ಸಿನಿಮಾ ಮಾಡುವ ಮನಸ್ಸು ಮಾಡುತ್ತೇನೆ'' ಎಂದು ಘೋಷಿಸಿದರು ಪುನೀತ್.

ವೇದಿಕೆ ಮೇಲೆಯೇ ಅಭಿನಯಿಸಿದರು ಶಿವಣ್ಣ
ಶಿವಣ್ಣ ಅವರಿಗಾಗಿ ಯಾವ ರೀತಿಯ ಸಿನಿಮಾ ಮಾಡಲು ಬಯಸುತ್ತೀರಿ? ಎಂದು ನಿರೂಪಕಿ ಅನುಶ್ರೀ ಪ್ರಶ್ನೆಗೆ ಗಂಭೀರವಾಗಿಯೇ ಉತ್ತರಿಸಿದ ಪುನೀತ್, ಎಲ್ಲರೂ ಸೀಟಿನ ಅಂಚಿನಲ್ಲಿ ಕೂತು ನೋಡಬೇಕಾದ ಥ್ರಿಲ್ಲಿಂಗ್ ಸಿನಿಮಾವನ್ನೇ ನಿರ್ದೇಶನ ಮಾಡುತ್ತೀನಿ'' ಎಂದರು. ಕೂಡಲೇ ಶಿವರಾಜ್ ಕುಮಾರ್ ವೇದಿಕೆ ಏರಿದರು, ಪುನೀತ್ 'ಲೈಟ್ಸ್, ಸೌಂಡ್, ಆಕ್ಷನ್' ಎಂದರು, ಶಿವಣ್ಣ ತಮ್ಮ ಮಾಸ್ ಶೈಲಿಯಲ್ಲಿ ನಡೆಯುತ್ತಾ ಬಂದು, ''ಐ ಲವ್ ಯೂ, ಯೂ ಮಸ್ಟ್ ಲವ್ ಮಿ' ಎನ್ನುತ್ತಾ ಅಭಿನಯಿಸಿಯೇ ಬಿಟ್ಟರು.

ಮೊದಲಿಗರಾಗಲಿದ್ದಾರೆ ಪುನೀತ್
ಒಂದೊಮ್ಮೆ ಪುನೀತ್ ರಾಜ್‌ಕುಮಾರ್ ನಿರ್ದೇಶನ ಮಾಡಿದರೆ ಅದು ದಾಖಲೆಯೇ ಆಗುತ್ತದೆ. ಅರ್ಧ ಶತಕಕ್ಕೂ ಮಿಗಿಲಾಗಿ ಚಿತ್ರರಂಗದಲ್ಲಿರುವ ದೊಡ್ಮನೆ ಕುಟುಂಬದ ಯಾವೊಬ್ಬರೂ ನಿರ್ದೇಶನಕ್ಕೆ ಕೈ ಹಾಕಿದ್ದಿಲ್ಲ. ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ದೇಶನ ಮಾಡಿದರೆ ಅವರು ಮೊದಲಿಗರಾಗಲಿದ್ದಾರೆ. ಪುನೀತ್ ರಾಜ್‌ಕುಮಾರ್ ಈಗಾಗಲೇ ನಿರ್ಮಾಣ ಸಂಸ್ಥೆ ಹೊಂದಿದ್ದು, ಕೆಲವು ಗುಣಮಟ್ಟದ ಸಿನಿಮಾಗಳನ್ನು ಕನ್ನಡಕ್ಕೆ ನೀಡುತ್ತಿದ್ದಾರೆ. ಹಲವು ಹೊಸ ಪ್ರತಿಭೆಗಳಿಗೆ ಅವಕಾಶವನ್ನೂ ನೀಡುತ್ತಿದ್ದಾರೆ.


Click it and Unblock the Notifications











