'ಸಿಪಾಯಿ ರಾಮು' ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಸಿಪಾಯಿ ರಾಮು' ಗೊತ್ತಲ್ವಾ...1972 ರಲ್ಲಿ ತೆರೆಕಂಡ 'ಸಿಪಾಯಿ ರಾಮು' ಕನ್ನಡ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನ ಸೃಷ್ಟಿಸಿತು.
ಅಪ್ಪಟ ದೇಶಭಕ್ತ 'ಸಿಪಾಯಿ'ಯಾಗಿ ನಂತ್ರ ಅನಿವಾರ್ಯವಾಗಿ ಡಕಾಯಿತನಾಗುವ 'ರಾಮು' ಪಾತ್ರದಲ್ಲಿ ಡಾ.ರಾಜ್ ಕುಮಾರ್ ನೀಡಿದ ಅಭಿನಯ ಅಮೋಘ. ಇದೀಗ ಅದೇ 'ಸಿಪಾಯಿ ರಾಮು' ಕನ್ನಡ ಬೆಳ್ಳಿತೆರೆಯ ಮೇಲೆ ಆರ್ಭಟಿಸಲಿದ್ದಾನೆ.
ಹಾಗಂತ 'ಸಿಪಾಯಿ ರಾಮು' ಚಿತ್ರ ರೀ ರಿಲೀಸ್ ಆಗುತ್ತಿಲ್ಲ. ಬದಲಾಗಿ ''ಸಿಪಾಯಿ ರಾಮು'' ಆಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಳ್ಳಿತೆರೆಮೇಲೆ ಮಿಂಚಲಿದ್ದಾರೆ.

ಹೌದು, ಗಾಂಧಿನಗರದಿಂದ ಬಂದಿರುವ ಖಾಸ್ ಖಬರ್ ಅಂದ್ರೆ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಸಿಪಾಯಿ ರಾಮು' ಆಗಿದ್ದಾರೆ! ಅಂದ ಮಾತ್ರಕ್ಕೆ, ಅಪ್ಪು ತಮ್ಮ ತಂದೆಯ ಸೂಪರ್ ಹಿಟ್ 'ಸಿಪಾಯಿ ರಾಮು' ಚಿತ್ರವನ್ನ ರೀಮೇಕ್ ಮಾಡ್ತಿಲ್ಲ.
ಅದರ ಬದಲು 'ಮೈತ್ರಿ' ಸಿನಿಮಾದಲ್ಲಿ ಕೆಲ ಕಾಲ 'ಸಿಪಾಯಿ ರಾಮು' ಆಗಿ ನಿಮ್ಮೆಲ್ಲರನ್ನ ರಂಜಿಸಲಿದ್ದಾರೆ ಪವರ್ ಸ್ಟಾರ್. ಮಾಲಿವುಡ್ ನ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಪುನೀತ್ ಅಭಿನಯಿಸುತ್ತಿರುವ ಚಿತ್ರವೇ 'ಮೈತ್ರಿ'. [ಕನ್ನಡ ಪವರ್ ಸ್ಟಾರ್ ಜೊತೆ ಸೂಪರ್ ಸ್ಟಾರ್ ಚಿತ್ರ]
'ಮೈತ್ರಿ' ಸಿನಿಮಾದಲ್ಲಿ 'ಸ್ಟಾರ್ ಪುನೀತ್ ರಾಜ್ ಕುಮಾರ್' ಆಗಿ 'ರಿಯಲ್' ಆಗೇ ರೀಲ್ ಮೇಲೆ ಅಪ್ಪು ಕಾಣಿಸಿಕೊಳ್ಳುತ್ತಾರೆ ಅನ್ನುವ ಸಂಗತಿ ಈ ಮೊದಲು ಬಯಲಾಗಿತ್ತು. ಅದರಂತೆ ಅಪ್ಪು 'ಕನ್ನಡದ ಕೋಟ್ಯಾಧಿಪತಿ'ಯಾಗಿ ಕೆಲ ಸೀನ್ ಗಳನ್ನ ಚಿತ್ರೀಕರಿಸಿದ್ರು ಕೂಡ.
ಇದೀಗ ರಿಲೀಸ್ ಆಗಿರುವ 'ಮೈತ್ರಿ' ಚಿತ್ರದ ಹೊಚ್ಚ ಹೊಸ ಸ್ಟಿಲ್ಸ್ ನಲ್ಲಿ 'ಅಪ್ಪು' ವೀರ ಯೋಧನ ಗೆಟಪ್ ಹಾಕಿದ್ದಾರೆ. ಒಮ್ಮೆ 'ಕೋಟ್ಯಾಧಿಪತಿ' ಮತ್ತೊಮ್ಮೆ 'ಯೋಧ', ಇಬ್ಬರಿಗೂ 'ಅಪ್ಪು ಸ್ಟಾರ್ ವಾಲ್ಯೂ'ಗೂ ಹೇಗೆ ಲಿಂಕು ಅಂದ್ರೆ ನಿರ್ದೇಶಕ ಗಿರಿರಾಜ್, 'ಅಪ್ಪು, ಸಿಪಾಯಿ ರಾಮು' ಅನ್ನುವ ಗುಟ್ಟನ್ನ ಬಿಟ್ಟುಕೊಟ್ಟರು.

'ರಿಯಲ್ ಲೈಫ್ ಪುನೀತ್' ಆಗೇ ತೆರೆಮೇಲೆ ಕಾಣಿಸಿಕೊಳ್ಳುವ ಅಪ್ಪು, 'ಮೈತ್ರಿ' ಚಿತ್ರದಲ್ಲಿ 'ಸಿಪಾಯಿ ರಾಮು' ಪಾತ್ರವನ್ನೂ ನಿರ್ವಹಿಸಲಿದ್ದಾರೆ. ಹಾಗಾದ್ರೆ, ಅದು ಅನುಕರಣೆಯೋ, ಇಲ್ಲಾ, ಚಿತ್ರಕ್ಕೆ ಸಿಗುವ ಹೊಸ ತಿರುವೋ ಅನ್ನುವ ಪ್ರಶ್ನೆಗೆ ಗಿರಿರಾಜ್ 'ಸದ್ಯಕ್ಕೆ ಸಸ್ಪೆನ್ಸ್' ಅಂದಿದ್ದಾರೆ.
ಅಪ್ಪು ಜೊತೆ ಮಲ್ಲು ಕುಟ್ಟಿ ಭಾವನ ಮತ್ತೊಮ್ಮೆ ಇಲ್ಲಿ ಜೋಡಿಯಾಗಿರುವುದು ಮತ್ತೊಂದು ವಿಶೇಷ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಾಗಿದೆ. ಚೆನ್ನೈನಲ್ಲಿ ಚಿತ್ರದ ಡಿ.ಟಿ.ಎಸ್ ಕಾರ್ಯ ಭರದಿಂದ ಸಾಗ್ತಿದೆ. [ಸದ್ದಿಲ್ಲದಂತೆ ಶೂಟಿಂಗ್ ನಡೆಸಿದ ಪುನೀತ್ 'ಮೈತ್ರಿ']
ಮೋಹನ್ ಲಾಲ್ ಮತ್ತು ಪುನೀತ್ ಕಾಂಬಿನೇಷನ್, ಇಬ್ಬರ ಮಧ್ಯೆ ಇಳಯರಾಜ ಸಂಗೀತ ಸುಧೆ, ಇಷ್ಟೆಲ್ಲಾ ಸ್ಪೆಷಾಲಿಟೀಸ್ ಇರುವ 'ಮೈತ್ರಿ' ಇದೀಗ 'ಸಿಪಾಯಿ ರಾಮು' ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ. ಅದಕ್ಕೆ ತೆರೆಬೀಳೋದು ಸಂಕ್ರಾಂತಿ ಹಬ್ಬದಂದು. ಯಾಕಂದ್ರೆ, 'ಮೈತ್ರಿ' ಟೀಸರ್ ರಿಲೀಸ್ ಆಗುವುದು ಅವತ್ತೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











