ಅಪ್ಪು ಇಲ್ಲದೆ ಎರಡು ತಿಂಗಳು ಕಳೆಯಿತು: ಮನೆಯಲ್ಲಿ ಒಬ್ಬರಿಗೆ ಮಾತ್ರ ಇನ್ನೂ ಇದು ಗೊತ್ತಿಲ್ಲ!
ಕನ್ನಡದ ನಟ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಇಲ್ಲವಾಗಿ ಎರಡು ತಿಂಗಳು ಕಳೆದಿದೆ. ಆದರೆ ಅವರನ್ನು ಯಾರೂ ಮರೆತಿಲ್ಲ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ಆಗಿರುತ್ತಾರೆ. ಇದು ಈಗಾಗಲೇ ಸಾಬೀತಾಗಿದೆ. ನಿತ್ಯವು ಅಪ್ಪು ಬಗ್ಗೆ ಒಂದಲ್ಲ ಒಂದು ವಿಚಾರ ಹರಿದಾಡುತ್ತಿರುತ್ತದೆ. ಜೊತೆಗೆ ಅಪ್ಪು ಕುರಿತು ಒಂದಲ್ಲಾ ಒಂದು ಕಾರ್ಯಕ್ರಮ ನಡೆಯುತ್ತಿರುತ್ತದೆ.
ಪುನೀತ್ ರಾಜ್‌ಕುಮಾರ್ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಅಪ್ಪು ಇಲ್ಲವಾದ ಬಳಿ ದೇಶದ ಗಡಿ ದಾಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇಡೀ ಜಗತ್ತಿಗೆ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿರುವ ವಿಚಾರ ಗೊತ್ತಾಗಿದೆ. ಆದರೆ ಒಬ್ಬರಿಗೆ ಮಾತ್ರ ಈ ವಿಚಾರ ಗೊತ್ತಾಗಿಲ್ಲ. ಈ ವಿಚಾರವನ್ನು ನಂಬಲು ಕೊಂಚ ಕಷ್ಟವೇ, ಆದರೂ ಅದು ಸತ್ಯ.
ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಪುನೀತ್ ರಾಜ್‌ಕುಮಾರ್ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ಕುಮಾರ್ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ಗೊತ್ತಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ.

ಅಪ್ಪು ನಿಧನದ ವಿಚಾರ ಸೋದರ ಅತ್ತೆ ನಾಗಮ್ಮನಿಗೆ ಗೊತ್ತೇ ಇಲ್ಲ!
ಹೌದು ಇಡೀ ಜಗತ್ತಿಗೆ ಗೊತ್ತಿರುವ ಈ ವಿಚಾರ, ಪುನೀತ್ ರಾಜ್‌ಕುಮಾರ್ ಅವರ ಸೋದರ ಅತ್ತೆ ನಾಗಮ್ಮ ಅವರಿಗೆ ಗೊತ್ತಿಲ್ಲ. ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿ ಎರಡು ತಿಂಗಳುಗಳು ಕಳೆದಿವೆ. ಕುಟುಂಬಸ್ಥರು ಎರಡನೇ ತಿಂಗಳ ಪೂಜೆಯನ್ನೂ ಮಾಡಿ ಮುಗಿಸಿದ್ದಾರೆ. ಆದರೆ ಈ ವಿಚಾರ ಅವರ ಮನೆಯಲ್ಲಿ, ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ.

ನಾಗಮ್ಮ ಅವರಿಗೆ ವಯಸ್ಸಾಗಿದೆ: ಅಪ್ಪು ಇನ್ನಿಲ್ಲ ಎನ್ನುವ ವಿಚಾರ ತಡೆಯಲಾರರು!
ಅವರಿಂದ ಈ ವಿಚಾರವನ್ನು ಮುಚ್ಚಿಡಲು ಪ್ರಮುಖ ಕಾರಣ ಅವರಿಗೆ ವಯಸ್ಸಾಗಿದೆ. ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಅವರಿಗೆ ಪುನೀತ್ ರಾಜ್‌ಕುಮಾರ್ ಇಲ್ಲ ಎನ್ನುವ ವಿಚಾರ ತಿಳಿಸದೇ ಇರುವುದು ಸೂಕ್ತ ಎಂದು ಕುಟುಂಬಸ್ಥರು ನಾಗಮ್ಮ ಅವರಿಗೆ ಈ ವಿಚಾರವನ್ನು ಇನ್ನೂ ತಿಳಿಸಿಲ್ಲ. ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಲಘು ಹೃದಯಾಘಾತ ಆದಾಗ, ನಾಗಮ್ಮ ಅವರಿಗೆ ದೊಡ್ಡ ಆಘಾತ ಆಗಿತ್ತಂತೆ. ಇನ್ನು ಅಪ್ಪು ವಿಚಾರ ಕೇಳಿದರೆ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗುವ ಸಾದ್ಯತೆ ಕೂಡ ಹಾಗಾಗಿ ಈ ವಿಚಾರವನ್ನು ಮುಚ್ಚಿಡಲಾಗಿದೆ. ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.

ಮನೆಯಲ್ಲಿ ಅಪ್ಪು ಫೋಟೊಗೆ ಹಾರ ಹಾಕಿಲ್ಲ: ನ್ಯೂಸ್ ಚಾನೆಲ್ ಹಾಕೋದಿಲ್ಲ!
ನಾಗಮ್ಮ ಅವರು ಸದ್ಯ ಗಾಜನೂರಿನಲ್ಲಿ ವಾಸವಿದ್ದಾರೆ. ಮಗ ಮತ್ತು ಸೊಸೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ.ರಾಜ್‌ಕುಮಾರ್ ಕುಟುಂಬದಲ್ಲಿ ಈಕೆಯೆ ಹಿರಿಯ ಜೀವ. ಹಾಗಾಗಿ ಅವರ ಆರೋಗ್ಯ ಕಾಪಾಡುವುದು ಮನೆಯ ಎಲ್ಲರಿಗೂ ಬಹಳ ಮುಖ್ಯ ಆಗಿದೆ. ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಅವರಿಗೆ ತಿಳಿಯದಂತೆ ಮನೆಯವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮನೆಯಲ್ಲಿರುವ ಪುನೀತ್ ರಾಜ್‌ಕುಮಾರ್ ಫೋಟೊಗೆ ಹಾರ ಹಾಕಿ ಪೂಜೆ ಮಾಡಲ್ಲ, ನ್ಯೂಸ್ ಚಾನೆಲ್‌ಗಳನ್ನು ಹಾಕುವುದಿಲ್ಲ, ಊರಿನವರು ಮನೆಗೆ ಬಂದರೆ, ನಾಗಮ್ಮ ಅವರನ್ನು ಭೇಟಿ ಮಾಡಲು ಬಿಡುವುದಿಲ್ಲ. ಹೀಗೆ ಅವರಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಕುಟುಂಬಸ್ಥರು.

ಗಾಜನೂರು ಅಂದರೆ ಅಪ್ಪುಗೆ ಅಚ್ಚು-ಮೆಚ್ಚು!
ಪುನೀತ್ ರಾಜಕುಮಾರ್ ಅವರಿಗೆ ಗಾಜನೂರು ಎಂದರೆ ಬಹಳ ಅಚ್ಚು ಮೆಚ್ಚು. ಅವರು ಸಮಯ ಸಿಕ್ಕಾಗಲೆಲ್ಲಾ ಗಾಜನೂರಿಗೆ ಹೋಗಿ ಕಾಲ ಕಳೆಯುತ್ತಿದ್ದರು. ಈ ಹಿಂದೆ ಅಲ್ಲಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅಪ್ಪು ಫೋಟೊಗಳನ್ನು ಹಂಚಿಕೊಂಡಿದ್ದರು. ಗಾಜನೂರಿಗೆ ಹೋಗುವುದು, ಅಲ್ಲಿ ಸುತ್ತಾಡುವುದು ಎಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಅಲ್ಲೇ ಇರುವ ಅತ್ತೆ ನಾಗಮ್ಮನ ಜೊತೆಗೆ ಅಪ್ಪ ಕಾಲ ಕಳೆಯುತ್ತಿದ್ದರು. ಆದರೆ ಪ್ರೀತಿಯ ಅಪ್ಪು, ಮನೆಯ ಕಿರಿಮಗ ಇಲ್ಲ ಅಂದರೆ ಹಿರಿಯ ಜೀವಕ್ಕೆ ತಡೆಯಲಾಗದ ನೋವು ಆಗುತ್ತದೆ. ಹಾಗಾಗೆ ಈ ವಿಚಾರವನ್ನು ಕುಟುಂಬಸ್ಥರು ಅವರಿಂದ ಮುಚ್ಚಿಟ್ಟಿದ್ದಾರೆ.


Click it and Unblock the Notifications











