Appu Birth Anniversary: ನಗುವಿನ ಒಡೆಯ ಅಪ್ಪು ನೆನೆದ ತಾರೆಯರು, ರಾಜಕೀಯ ಗಣ್ಯರು
ಪುನೀತ್ ರಾಜ್‌ಕುಮಾರ್ ಅಗಲಿ ಒಂದೂವರೆ ವರ್ಷ ಕಳೆದಿದೆ. ಅಭಿಮಾನಿಗಳು ಇಂದಿಗೂ ಅಪ್ಪು ನೆನಪಿನಲ್ಲೇ ದಿನ ದೂಡುತ್ತಿದ್ದಾರೆ. ಇವತ್ತು ಪುನೀತ್ ಜನ್ಮದಿನೋತ್ಸವ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಮುಖಂಡರು ಕೂಡ ದೊಡ್ಮನೆ ಹುಡುಗನನ್ನು ನೆನೆಯುತ್ತಿದ್ದಾರೆ.
ಅಪ್ಪು ಸಮಾಧಿ ಮುಂದೆ ಮಗಳು ವಂದಿತಾ ತಂದೆಗೆ ಇಷ್ಟವಾದ ತಿಂಡಿ ತಿನಿಸು ತಂದಿಟ್ಟು ನಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ ಸದಸ್ಯರು ಅಪ್ಪು ಸಮಾಧಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಜಾತಶತ್ರುವಾಗಿದ್ದಾರೆ. ಅಪಾರ ಸ್ನೇಹಿತರ ಬಳಗವನ್ನು ಸಂಪಾದಿಸಿದ್ದರು. ಚಿತ್ರರಂಗದ ಹೊರಗೂ ಅಪ್ಪು ಸ್ನೇಹಿತರ ಬಹಗ ದೊಡ್ಡದಿತ್ತು.

ಕಿಚ್ಚ ಸುದೀಪ್, ಧ್ರುವ ಸರ್ಜಾ, ಸುಮಲತಾ ಅಂಬರೀಶ್ ಸೇರಿದಂತೆ ಸಾಕಷ್ಟು ಜನ ತಾರೆಯರು, ರಾಜಕೀಯ ಮುಖಂಡರು ಟ್ವೀಟ್ ಮಾಡಿ ಅಪ್ಪುನ ನೆನೆಯುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ "ಪುನೀತ್ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ ಇದು ಬಹಳ ವಿಶೇಷವಾದ ದಿನ. ಅಪ್ಪುನ ಸದಾ ಸಂಭ್ರಮಿಸೋಣ" ಎಂದು ಬರೆದುಕೊಂಡಿದ್ದಾರೆ. ಧ್ರುವ ಸರ್ಜಾ ಟ್ವೀಟ್ ಮಾಡಿ "ಸ್ವರ್ಗ ಒಂದು ಸುಂದರವಾದ ಸ್ಥಳ ಎಂದು ಗೊತ್ತು. ಯಾಕೆಂದರೆ ನಿಮ್ಮನ್ನು ಪಡೆದಿದ್ದಾರೆ. ದಿ ಲೆಜೆಂಡ್ ಪುನೀತ್ ರಾಜ್‌ಕುಮಾರ್" ಎಂದು ಬರೆದು ವಿಡಿಯೋ ಮಾಡಿ ಶುಭ ಕೋರಿದ್ದಾರೆ.
ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ "ಅಪ್ಪು ಕೇವಲ ವ್ಯಕ್ತಿಯಾಗಿರಲಿಲ್ಲ, ಅವರೊಬ್ಬರು ಶಕ್ತಿಯಾಗಿದ್ದರು. ಶಕ್ತಿಗೆ ಯಾವತ್ತೂ ಸಾವಿಲ್ಲ, ಪ್ರತಿ ನಿತ್ಯ ನಮ್ಮೊಳಗೆ ಹುಟ್ಟುತ್ತಲೇ ಇರುತ್ತಾರೆ. ಹುಟ್ಟು ಹಬ್ಬದ ಶುಭಾಶಯಗಳು ಪುನೀತ್ ರಾಜ್‍ಕುಮಾರ್. ಮತ್ತೆ ಹುಟ್ಟಿದ್ದೀರಿ ನೀವು, ನಮ್ಮ ಸುತ್ತಲೇ ಇದ್ದೀರಿ" ಎಂದು ಶುಭ ಕೋರಿದ್ದಾರೆ. ನಟ ಉಪೇಂದ್ರ "ನಗುವಿನ ಸರದಾರ, ನಿಷ್ಕಲ್ಮಶ ಮನಸಿನ ರಾಜಕುಮಾರ, ಪರಮಾತ್ಮ, Power Star ಪ್ರೀತಿಯ ಅಪ್ಪು .... ಕಬ್ಸ ಚಿತ್ರದಲ್ಲಿ ನಮ್ಮ ಜೊತೆ ಕಟೌಟ್ ನಲ್ಲಿ ಸೇರಿದ್ದೀರಿ.... ಹಾಗೇ ಇಡೀ ಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳೂ ಪರಸ್ಪರ ಪ್ರೀತಿಯಿಂದ ಗೌರವಿಸುವಂತೆ ಹರಸಿ. ಮತ್ತೊಮ್ಮೆ ಹುಟ್ಟಿ ಬನ್ನಿ" ಎಂದು ಬರೆದುಕೊಂಡಿದ್ದಾರೆ. ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಬ್ಜ' ಚಿತ್ರ ತೆರೆಕಂಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ "ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. "ಅಪ್ಪು ಸದಾ ಅಜರಾಮರ" ಎಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ "ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ ಕೋಟ್ಯಂತರ ಜನರ ಮನಸ್ಸಿಗೆ ಮುದ ನೀಡಿದ, ಸರಳತೆ, ಸಜ್ಜನಿಕೆ ಮತ್ತು ಮಾನವೀಯತೆಗೆ ಮತ್ತೊಂದು ಹೆಸರಾಗಿದ್ದ ಕನ್ನಡಿಗರೆಲ್ಲರ ಮನೆ ಮಗ ಪ್ರೀತಿಯ ಅಪ್ಪು ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯುತ್ತೇನೆ." ಎಂದು ಬರೆದುಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ "ನೀ ಪುನೀತ. ನೀ ನಮ್ಮ ಸ್ವಂತ. ಕರುನಾಡಿನ ಯುವರತ್ನ, ನಗುವಿನ ರಾಜಕುಮಾರನ ಜನ್ಮದಿನವಿಂದು ನಮ್ಮೆಲ್ಲರಿಗೂ ಸ್ಫೂರ್ತಿದಿನ" ಎಂದು ಬರೆದುಕೊಂಡಿದೆ.


Click it and Unblock the Notifications











