3ನೇ ದಿನ 'ಜಾಕಿ' ಆರ್ಭಟ ಹೇಗಿದೆ? ಡಿಜೆ, ಬೈಕ್ ರ್ಯಾಲಿ, ಪುನೀತೋತ್ಸವ ಜೋರು
ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಶುಕ್ರವಾರ ಮತ್ತೆ ತೆರೆಕಂಡ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಸಿನಿಮಾ 1 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. 100ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿತ್ತು. ಶನಿವಾರವೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡು 3ನೇ ದಿನಕ್ಕೆ ಕಾಲಿಟ್ಟಿದೆ.
ಇಂದು(ಮಾರ್ಚ್ 17) ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಎಲ್ಲೆಲ್ಲೂ ಅಪ್ಪು ಜನ್ಮದಿನದ ಸಂಭ್ರಮಾಚರಣೆ ಜೋರಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಪ್ಪು ಹುಟ್ಟುಹಬ್ಬದ ಜೊತೆಗೆ ಭಾನುವಾರವೂ ಆಗಿರುವುದರಿಂದ 'ಜಾಕಿ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ನವರಂಗ್, ಸಿನಿಪೊಲೀಸ್, ವಿಕ್ಟರಿ ಸಿನಿಮಾಸ್ ಸೇರಿದಂತೆ ಹಲವೆಡೆ ಶೋಗಳು ಹೌಸ್‌ಫುಲ್ ಆಗುತ್ತಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಬರೀ ಬೆಂಗಳೂರಿನಲ್ಲಿ 30ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿ ಸಂಘಗಳಿಂದ ಪುನೀತೋತ್ಸವ ಕಳೆಕಟ್ಟಿದೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಶಿವು ಅಡ್ಡಾ ಹಾಗೂ ಶಿವು ಸೈನ್ಯ ಅಭಿಮಾನಿಗಳ ಸಂಘಗಳಿಂದ ನರ್ತಕಿ ಚಿತ್ರಮಂದಿರದಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೂ ಈ ಕಾರ್ಯಕ್ರಮ ನಡೆಯಲಿದೆ.
ಇನ್ನು 'ಜಾಕಿ' ಸಿನಿಮಾ ಮರುಬಿಡುಗಡೆ ಹಿನ್ನೆಲೆಯಲ್ಲಿ ಬೆಳಗ್ಗೆ 10.30ಕ್ಕೆ ರಾಜ್‌ಕುಮಾರ್ ಪುಣ್ಯಭೂಮಿಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ಅಭಿಮಾನಿಗಳು ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಶಿವು ಅಡ್ಡಾ, ಪುನೀತ್ ಅಭಿಮಾನಿಗಳ ಜೊತೆಗೆ ಅಪ್ಪು ಹುಡುಗಿಯರ ಸಂಘ ಕೂಡ ಇದರಲ್ಲಿ ಭಾಗಿ ಆಗಿತ್ತು.
ಮಧ್ಯಾಹ್ನ 12 ಗಂಟೆಗೆ ಪ್ರಸನ್ನ ಚಿತ್ರಮಂದಿರದಲ್ಲಿ ಅಪ್ಪು ಅಕಾಡೆಮಿ ಮಕ್ಕಳಿಂದ ಫ್ಲಾಶ್ ಮಾಬ್ ಪ್ರದರ್ಶನ, ಡ್ಯಾನ್ಸ್, ಡಿಜೆ ಸೆಷನ್ ಕೂಡ ಇದೆ. ಸಿಹಿ ವಿತರಣೆ ಸೇರಿದಂತೆ 101 ತೆಂಗಿನಕಾಯಿ ಸೇವೆಯನ್ನು ಅಭಿಮಾನಿಗಳು ಸಲ್ಲಿಸುತ್ತಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆ ಸೇರಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಜಾಕಿ' ಸಿನಿಮಾ ರೀ ರಿಲೀಸ್ ಮಾಡಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷ ಪುನೀತ್ ಹುಟ್ಟುಹಬ್ಬಕ್ಕೆ ಅವರ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡಲು ಲೆಕ್ಕಾಚಾರ ನಡೀತಿದೆ. 'ಜಾಕಿ' ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಸಿನಿಮಾ ವಿತರಣೆ ಮಾಡಿರುವ ಕೆಆರ್‌ಜಿ ಸಂಸ್ಥೆ ಖುಷಿಯಾಗಿದೆ.
ಮುಂದಿನ ವರ್ಷ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಅದನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಆಚರಿಸಲು ಈಗಿನಿಂದಲೇ ಸಿದ್ಧತೆ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುವುದಾಗಿ ಕೆಆರ್‌ಜಿ ಘೋಷಿಸಿದೆ. ಪುನೀತ್ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ 'ಅಪ್ಪು' 22 ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿತ್ತು.
ಇನ್ನು ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಎಲ್ಲರಿಗೂ ಅಭಿಮಾನಿಗಳಿಂದ ಬಿರಿಯಾನಿ ಊಟದ ವ್ಯವಸ್ಥೆ ಆಗಿದೆ. 50 ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದು ಬೆಳಗ್ಗೆ 10 ಗಂಟೆಯಿಂದ ಸತತವಾಗಿ ಬಿರಿಯಾನಿ ಹಂಚಲಾಗುತ್ತಿದೆ. ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಇದೆ. ಪುನೀತ್ ಸಹೋದರಿ ಲಕ್ಷ್ಮೀ ಕೇಕ್ ತಂದು ಸಮಾಧಿ ಬಳಿ ಕಟ್ ಮಾಡಿದ್ದಾರೆ.


Click it and Unblock the Notifications











