Puneeth Rajkumar: "ಹಬ್ಬ ಯಾವ್ದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ನಾನು ಒಬ್ಬ": ಶಿವಣ್ಣ
ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಇನ್ನು ಕರಗಿಲ್ಲ. ಕರುನಾಡಿನ ಮನೆ ಮಗನಂತಿದ್ದ ಅಪ್ಪು ಇಲ್ಲದ ನೋವನ್ನು ಯಾರೊಬ್ಬರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ದೊಡ್ಮನೆಯ ಸದಸ್ಯರಿಗೆ ಇದಕ್ಕಿಂತ ನೂರುಪಟ್ಟು ನೋವಿದೆ. ತಮ್ಮನನ್ನು ಚಿಕ್ಕಂದಿನಿಂದ ಎತ್ತಿ ಆಡಿಸಿದ ಶಿವಣ್ಣ, ರಾಘಣ್ಣ ಅದೇ ನೋವಿನಲ್ಲಿ ದಿನದೂಡುತ್ತಿದ್ದಾರೆ. ಇಂದು ಅಪ್ಪು ಹುಟ್ಟುಹಬ್ಬದ ದಿನ ಸಹೋದರನನ್ನು ನೆನೆದಿದ್ದಾರೆ.
ಸಹೋದರ ಪುನೀತ್ ರಾಜ್‌ಕುಮಾರ್ ಜನ್ಮದಿನೋತ್ಸವದ ದಿನ ಶಿವರಾಜ್‌ಕುಮಾರ್ ಸುದೀರ್ಘ ಪತ್ರ ಬರೆದು ಸಹೋದರನನ್ನು ನೆನೆದಿದ್ದಾರೆ. ಹುಟ್ಟುಹಬ್ಬ ಶುಭ ಹಾರೈಸಿದ್ದಾರೆ. "ಅಪ್ಪು, ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೆ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ."

"ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ,
ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವ್ದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ - ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು" ಎಂದು ಶಿವಣ್ಣ ಬರೆದುಕೊಂಡಿದ್ದಾರೆ. ಅಪ್ಪು ಜೊತೆಗಿನ ಸ್ಪೆಷಲ್ ಫೋಟೊವನ್ನು ಸೋಶಿಯಲ್ ಮೀಡಿಯಾ ಪೇಜ್ ಡಿಪಿಗಳಲ್ಲಿ ಹಾಕಿಕೊಂಡಿದ್ದಾರೆ.
ಅಪ್ಪು ಅಗಲಿಕೆಯ ನಂತರ ಶಿವಣ್ಣ, ರಾಘಣ್ಣ ಇಬ್ಬರು ಬಹಳ ಕುಗ್ಗಿ ಹೋಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ. "ಎಲ್ಲಾ ಅಭಿಮಾನಿಗಳಿಗೆ ಸ್ಫೂರ್ತಿ ದಿನದ ಶುಭಾಶಯಗಳು. ಒಂದ್ಕಡೆ ಅವನು ಇಲ್ಲ ಎನಿಸುತ್ತಿದ್ದರೆ ಮತ್ತೊಂದು ಕಡೆ ಅವನು ಎಲ್ಲಾ ಕಡೆ ಇದ್ದಾನೆ ಎನಿಸುತ್ತದೆ. ನಿಮ್ಮಲ್ಲಿ ಇದ್ದಾನೆ. ನಮ್ಮಲ್ಲಿ ಇದ್ದಾನೆ. ಈ ಪ್ರಕೃತಿಯಲ್ಲಿ ಇದ್ದಾನೆ ಅನ್ನಿಸ್ತಿದೆ. ನೀವೆಲ್ಲಾ ಅವನನ್ನು ಇನ್ನು ಜೀವಂತವಾಗಿ ಇಟ್ಟಿದ್ದೀರಾ. ಅವನು ಹೋಗಿದ್ದಾನೆ ಎಂದು ನನಗೆ ಅನ್ನಿಸಲೇ ಇಲ್ಲ."
"ಪುನೀತ್ ಮತ್ತೆ ಮತ್ತೆ ಹುಟ್ಟಿ ಹುಟ್ಟಿ ಬರ್ತಿದ್ದಾನೆ. ನನ್ನನ್ನು ಕೇಳಿದರೆ 17 ಮಾರ್ಚ್ 1975 ಅವನು ಹುಟ್ಟಿದ ದಿನ ಅಂತಾರೆ. ಆದರೆ 2 ಹುಟ್ಟಿದ ದಿನ ಇದೆ. 29 ಅಕ್ಟೋಬರ್ 2021ರಂದು ಅವನು ಸತ್ತ ದಿನ ಅಲ್ಲ. ಅದು ಅವನು ಹುಟ್ಟಿದ ದಿನ. ಒಂದು ವ್ಯಕ್ತಿ ಹೋಗಿ ಒಂದು ಶಕ್ತಿ ಹುಟ್ಟಿದ ದಿನ. ಈ ಶಕ್ತಿಗೆ ಸಾವೇ ಇಲ್ಲ. ಅದಕ್ಕೆ ಇಷ್ಟು ಜನ ಬರ್ತಿದ್ದಾರೆ. ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ನಿಮಗೆಲ್ಲಾ ಸ್ಪೂರ್ತಿ ಕೊಡಲು ಈ ಶಕ್ತಿ ಬಂದಿದೆ. ನಿಮ್ಮನೆಲ್ಲಾ ರಂಜಸಿಲು ಒಮ್ಮೆ ಜನ್ಮ ಎತ್ತಿ ಬಂದ. ಅವನನ್ನು ಹೂತಿಲ್ಲ, ಬಿತ್ತಿದ್ದೇವೆ ಎಂದು ಸದಾ ಹೇಳುತ್ತಿರುತ್ತೇನೆ. ಪವರ್ ಸ್ಟಾರ್ ಎಲ್ಲೂ ಹೋಗಿಲ್ಲ. ಸ್ಟಾರ್ ಮಾತ್ರ ಮೇಲೆ ಹೋಗಿದ್ದು, ಪವರ್ ಇಲ್ಲದೇ ಇದೆ"

"ಈ ಪವರ್ ಎಲ್ಲಾ ಸೇರಿ ಇನ್ನೊಬ್ಬರ ಬದುಕಿಗೆ ಬೆಳಕು ಕೊಡಬೇಕು. ಅಭಿಮಾನಿ ದೇವರುಗಳಿಂದ ಅವನು ಇನ್ನು ಬೆಳೆಯುತ್ತಿದ್ದಾನೆ. ನಾವು ಈ ನಾಡಿಗಾಗಿ ಏನಾದರೂ ಮಾಡಬೇಕು. ಅದನ್ನು ಹೇಳೋದಕ್ಕೆ ಅಪ್ಪು ಬಂದಿದ್ದ. ಅದನ್ನು ಮಾಡಿದರೆ ಅವನು ನಮ್ಮೊಟ್ಟಿಗೆ ಇರ್ತಾನೆ. ರಾಜ್ಯೋತ್ಸವಕ್ಕೆ ಅಪ್ಪು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ತಡವಾಗುತ್ತಿದೆ. ಶೀಘ್ರದಲ್ಲೇ ಅಪ್ಪು, ಅಪ್ಪ, ಅಮ್ಮ ಮೂವರಿಗೆ ಸೇರಿ ಸ್ಮಾರಕ ನಿರ್ಮಾಣ ಆಗಲಿದೆ. ಇಷ್ಟು ಮಾಡಿದವರು ಸ್ಮಾರಕ ಕೂಡ ಮಾಡುತ್ತಾರೆ." ಎಂದು ರಾಘಣ್ಣ ಹೇಳಿದ್ದಾರೆ.


Click it and Unblock the Notifications











