Puneeth Rajkumar: ವಾಹನಗಳ ಮೇಲೆ ಅಪ್ಪು ಚಿತ್ರ; ಯಾವತ್ತಿಗೂ ಅರ್ಥವಾಗದ ಪ್ರೀತಿ ಎಂದ ಚೈತ್ರಾ ಜೆ ಆಚಾರ್
2019ರಲ್ಲಿ ಬಿಡುಗಡೆಗೊಂಡ ಮಹಿರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಬಳಿಕ ಆ ದೃಶ್ಯ, ತಲೆದಂಡ ಹಾಗೂ ಸ್ಟ್ರಾಬೆರಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಚೈತ್ರಾ ಜೆ ಆಚಾರ್ ಸದ್ಯ ಬಹು ನಿರೀಕ್ಚಿತ ಸಿನಿಮಾಗಳಾದ ಸಪ್ತ ಸಾಗರದಾಚೆ ಎಲ್ಲೋ ಹಾಗೂ ಟೋಬಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹೀಗೆ ತಮ್ಮ ಎರಡು ದೊಡ್ಡ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಚೈತ್ರಾ ಜೆ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಆಗಾಗ ತಮ್ಮ ಈ ಚಿತ್ರಗಳ ಕುರಿತಾದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸದ್ಯ ಚೈತ್ರಾ ಜೆ ಆಚಾರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಇದು ನೆಟ್ಟಿಗರ ಮನ ಗೆದ್ದಿದೆ. ಹೌದು, ಅಭಿಮಾನಿಗಳ ಪುನೀತ್ ರಾಜ್‌ಕುಮಾರ್ ಮೇಲೆ ಇಟ್ಟಿರುವ ಹಾಗೂ ತೋರಿಸುತ್ತಿರುವ ಪ್ರೀತಿ ಹಾಗೂ ಅಭಿಮಾನದ ಕುರಿತಾಗಿ ಚೈತ್ರಾ ಆಚಾರ್ ಬರೆದುಕೊಂಡಿದ್ದಾರೆ. ಕೆಲ ಬೇರೆ ನಟಿಯರ ಹಾಗೆ ಇಂಗ್ಲಿಷಿನಲ್ಲಿ ಪೋಸ್ಟ್ ಹಂಚಿಕೊಳ್ಳದೇ ಕನ್ನಡದಲ್ಲಿಯೇ ಬರೆದುಕೊಂಡಿರುವ ಚೈತ್ರಾ ಆಚಾರ್ ಆಟೋ ಚಾಲಕನೋರ್ವ ತನ್ನ ಆಟೋ ಹಿಂಭಾಗ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಹಾಕಿಸಿಕೊಂಡಿರುವುದರ ಕುರಿತು ಬರೆದುಕೊಂಡಿದ್ದಾರೆ.

"ತಾವು ದುಡ್ಡು ಕೊಟ್ಟು ತಗೊಂಡಿರೋ ಅವರ ಗಾಡಿಗೆ ತೆರೆಯ ಮೇಲೆ ನೋಡಿ ಅಭಿಮಾನ ಬೆಳೆಸಿಕೊಂಡಿರೊ ವ್ಯಕ್ತಿಯ ಭಾವಚಿತ್ರ ಅಥವಾ ಹೆಸರು ಹಾಕ್ಕೊಳೋ ಪ್ರೀತಿ ಯಾವತ್ತಿಗೂ ಅರ್ಥಆಗದೆ ಇರುವಂಥದ್ದು. ಅದು ಕಲೆಯನ್ನು ಆರಾಧಿಸುವವರಿಂದ ಮಾತ್ರ ಸಾಧ್ಯವೇನೋ?" ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಿನಿಮಾವೊಂದರಲ್ಲಿ ಕಂಡ ನಟನನ್ನು ಸಿನಿ ರಸಿಕರು ಇಷ್ಟರ ಮಟ್ಟಿಗೆ ಆರಾಧಿಸುವುದು ಎಂದಿಗೂ ಅರ್ಥವಾಗದ ಪ್ರೀತಿ, ಅದು ಕಲೆಯನ್ನು ಆರಾಧಿಸುವವರಿಗೆ ಮಾತ್ರ ಸಾಧ್ಯ ಎಂದು ಚೈತ್ರಾ ಆಚಾರ್ ಹೊಗಳಿದ್ದಾರೆ.


Click it and Unblock the Notifications