ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದರೆ 'ಯುವರತ್ನ' ಅಪ್ಪು ಅಭಿನಯದ 43ನೇ ಸಿನಿಮಾ. ನಿಮಗೆ ಗೊತ್ತಿರುವ ಹಾಗೆ ಪುನೀತ್ ರಾಜ್ ಕುಮಾರ್ ಬಾಲಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತೀರ ಚಿಕ್ಕವಯಸ್ಸಿನಲ್ಲಿಯೆ ಅಂದರೆ ಆಗಿನ್ನು ಪುನೀತ್ ಗೆ ಒಂದು ವರ್ಷನು ಆಗಿರಲಿಲ್ಲ, ಆಗಲೆ ಪುನೀತ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಪುನೀತ್ ಚಿತ್ರರಂಗಕ್ಕೆ ಬಂದು 44 ವರ್ಷಗಳು ಕಳೆದಿವೆ. 44 ವರ್ಷದ ಪೂರೈಸಿದ ಅಪ್ಪುಗೆ ಅಭಿಮಾನಿಗಳು ಶುಭಾಶಯತಿಳಿಸುತ್ತಿದ್ದಾರೆ. 'ಪ್ರೇಮದ ಕಾಣಿಕೆ' ಸಿನಿಮಾದ ಮೂಲಕ ಪುನೀತ್ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಡಾ.ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾ 1976 ಫೆಬ್ರವರಿ 28ರಂದು ಸಿನಿಮಾ ತೆರೆಕಂಡಿತ್ತು.
ವಿ. ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಜೊತೆ ನಾಯಕಿಯರಾಗಿ ಆರತಿ ಮತ್ತು ಜಯಮಾಲಾ ಅಭಿನಯಿಸಿದ್ದರು. ಈ ಸಿನಿಮಾ ಅದ್ಧೂರಿ ಯಶಸ್ವಿಕಂಡಿತ್ತು. ಚಿತ್ರದಲ್ಲಿ ಡಾ.ರಾಜ್ ಕುಮಾರ್ ಮಗನ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದರು.

ಆ ನಂತರ ಪುನೀತ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ ಸೇರಿದಂತೆ ಸುಮಾರು 14 ಸಿನಿಮಾಗಳಲ್ಲಿ ಬಾಲಕಲಾವಿದನಾಗಿ ಮಿಂಚಿದ್ದಾರೆ. 1985ರಲ್ಲಿತೆರೆಗೆ ಬಂದ ಬೆಟ್ಟದ ಹೂವು ಸಿನಿಮಾದಲ್ಲಿ ಅದ್ಭುತ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನು 2002ರಲ್ಲಿ ಅಂದರೆ 13 ವರ್ಷದ ಬಳಿಕ 'ಅಪ್ಪು' ಸಿನಿಮಾದ ಮೂಲಕ ನಾಯಕನಾಗಿ ಅಭಿಮಾನಿಗಳ ಮುಂದೆ ಬರುತ್ತಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರುವ ಅಪ್ಪು ಚಿತ್ರರಂಗದಲ್ಲಿ ಯಶಸ್ವಿ 44 ವರ್ಷಗಳನ್ನು ಪೂರೈಸಿದ್ದಾರೆ.

ಅಭಿನಯದ ಜೊತೆಗೆ ಗಾಯಕನಾಗಿ, ನಿರ್ಮಾಪಕನಾಗಿಯೂ ಖ್ಯಾತಿಗಳಿಸಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಕೂಡ ಹತ್ತಿರ ಬರುತ್ತಿದೆ. ಮಾರ್ಚ್ 17ಕ್ಕೆ ಪವರ್ ಸ್ಟಾರ್ 45ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಯುವರತ್ನ ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್ ಏಪ್ರಿಲ್ ನಲ್ಲಿ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದೆ.


Click it and Unblock the Notifications










