ಕಂಠೀರವ ಸ್ಟುಡಿಯೋ ಸುತ್ತ ನಿಷೇಧಾಜ್ಞೆ, ಮೂರು ದಿನ ಪ್ರವೇಶ ಇಲ್ಲ
ನಟ ಪುನೀತ್ ರಾಜ್‌ಕುಮಾರ್ ಕಂಠೀರವ ಸ್ಟುಡಿಯೋದಲ್ಲಿ ಮಣ್ಣಾಗಿದ್ದಾರೆ. ಕುಟುಂಬಸ್ಥರು, ಆಪ್ತೇಷ್ಟರು, ಚಿತ್ರರಂಗದ ಗೆಳೆಯರು ಎಲ್ಲರೂ ಸೇರಿ ಪುನೀತ್ ಅವರನ್ನು ಬಾರದ ಲೋಕಕ್ಕೆ ಕಳುಹಿಸಿಕೊಟ್ಟಿದ್ದಾರೆ.
Recommended Video
ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜ್‌ಕುಮಾರ್ ಅಂತಿಮ ಸಂಸ್ಕಾರ ನಡೆದಿದೆ. ಅಂತಿಮ ವಿಧಿ-ವಿಧಾನಗಳನ್ನು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಡೆಸಿಕೊಟ್ಟಿದ್ದಾರೆ.
ಅಂತಿಮ ಸಂಸ್ಕಾರ ಕಾರ್ಯ ಪೂರ್ಣಗೊಂಡಿದ್ದು, ಹಾಲು-ತುಪ್ಪ ಕಾರ್ಯಕ್ರಮವನ್ನು ಮೂರು ದಿನಗಳ ನಂತರ ಅಂದರೆ ಮಂಗಳವಾರ ನಡೆಸಲಿದೆ ದೊಡ್ಮನೆ ಕುಟುಂಬ. ಅಲ್ಲಿಯವರೆಗೆ ಕಂಠೀರವ ಸ್ಟುಡಿಯೋಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧೀಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಂಜುನಾಥ್, ''ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ವಿಧಿಸಲಾಗಿದೆ. ಮೂರು ದಿನಗಳ ಬಳಿಕ ಹಾಲು-ತುಪ್ಪ ಕಾರ್ಯ ಮುಗಿದ ಬಳಿಕವಷ್ಟೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು'' ಎಂದಿದ್ದಾರೆ.
ಕಾರ್ಯ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ಎಲ್ಲ ಅಭಿಮಾನಿಗಳೂ ಶಾಂತಿಯಿಂದ ವರ್ತಿಸಿ ಅಪ್ಪುವನ್ನು ಶಾಂತಿಯಿಂದ ಕಳಿಸಿಕೊಟ್ಟಿದ್ದಾರೆ ಅವರಿಗೆ ಸಾಷ್ಟಾಂಗ ನಮಸ್ಕಾರಗಳು'' ಎಂದು ಅಭಿಮಾನಿಗಳಿಗೆ ಕೈಮುಗಿದರು.
''ಅಪ್ಪುವನ್ನು ಕಳಿಸಿಕೊಟ್ಟ ಭಾರ ನಮ್ಮ ಕೊನೆ ಉಸಿರಿರುವವರೆಗೆ ಇರುತ್ತದೆ. ಅಪ್ಪು ನಮಗಿಂತಲೂ ಹೆಚ್ಚು ಅಪ್ಪ-ಅಮ್ಮನನ್ನು ಇಷ್ಟಪಡುತ್ತಿದ್ದ ಎನಿಸುತ್ತದೆ ಹಾಗಾಗಿ ಅವನು ನಮಗಿಂತ ಬೇಗ ಹೋಗಿಬಿಟ್ಟ'' ಎಂದು ಭಾವುಕರಾದರು ರಾಘವೇಂದ್ರ ರಾಜ್‌ಕುಮಾರ್.
ನಿಗದಿತ ಸಮಯಕ್ಕಿಂತಲೂ ಬೇಗನೇ ಅಂತಿಮ ಕಾರ್ಯ ಮಾಡಿದ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ನಾವು ಕುಟುಂಬಸ್ಥರು ಜೊತೆಗೆ ಪ್ರಜೆಗಳು ಸಹ. ಅಪ್ಪಾಜಿಯವರ ಅಂತಿಮ ಸಂಸ್ಕಾರದ ಸಮಯದಲ್ಲಿ ಏನಾಯ್ತು ಎಂಬುದನ್ನು ನೀವು ನೋಡಿದ್ದೀರಿ. ಮತ್ತೆ ಅದೇ ಸ್ಥಿತಿ ಮರುಕಳಿಸಬಾರದು ಎಂಬ ಭಯದಿಂದ ಹೀಗೆ ಮಾಡಬೇಕಾಯ್ತು. ಪರವಾಗಿಲ್ಲ. ಲಕ್ಷಾಂತರ ಜನ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದಾರೆ. ಮಾಧ್ಯಮಗಳ ಮೂಲಕ ಅಂತಿಮ ಸಂಸ್ಕಾರವನ್ನು ವೀಕ್ಷಿಸಿದ್ದಾರೆ'' ಎಂದರು ರಾಘವೇಂದ್ರ ರಾಜ್‌ಕುಮಾರ್.
''ಮೂರು ದಿನಗಳ ಬಳಿಕ ಹಾಲು-ತುಪ್ಪ ಕಾರ್ಯ ನೆರವೇರಿಸಲಾಗುತ್ತದೆ. ಅಲ್ಲಿಯ ವರೆಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಏಕೆಂದರೆ ಅಭಿಮಾನಿಗಳು ತಾವೇ ಮೊದಲು ಹಾಲು ತುಪ್ಪ ಬಿಡಬೇಕು ಎಂದು ಬರುತ್ತಾರೆ. ಕುಟುಂಬವೇ ಮೊದಲು ಹಾಲು-ತುಪ್ಪ ಅರ್ಪಿಸಬೇಕು. ಅಪ್ಪಾಜಿಯವರದ್ದು ಹಾಗೆಯೇ ಆಗಿತ್ತು, ಹಲವು ಅಭಿಮಾನಿಗಳು ಹಾಲು-ತುಪ್ಪ ನೀಡಿದ್ದರು. ಕೆಲವರು ಮಣ್ಣು ತೋಡುವ ಕೆಲಸವನ್ನೂ ಮಾಡಿಬಿಟ್ಟಿದ್ದರು'' ಎಂದರು ರಾಘವೇಂದ್ರ ರಾಜ್‌ಕುಮಾರ್.
''ಸಮಾಧಿ ಬಳಿ ಇನ್ನಷ್ಟು ಕೆಲಗಳನ್ನು ಮಾಡುವುದಿದೆ. ಅಲ್ಲಿ ಜನರಿಗೆ ಓಡಾಡಲು, ದರ್ಶನ ಮಾಡಲು ಸುಲಭವಾಗುವಂತೆ ವ್ಯವಸ್ಥೆ ಮಾಡಬೇಕಿದೆ. ಮಳೆ ಬಂದರೆ ಅಲ್ಲೆಲ್ಲ ಕೆಸರಾಗುತ್ತದೆ ಅದನ್ನೆಲ್ಲ ಸರಿ ಮಾಡಿಸಬೇಕು. ಅದಾದ ಬಳಿಕ ಸಾರ್ವಜನಿಕರಿಗೆ ನೋಡಲು ಬಿಟ್ಟರೆ ಅನುಕೂಲ ಎಂದು ರಾಘಣ್ಣ, ''ಮೊದಲು ಇಲ್ಲಿಗೆ ಬಂದಾಗ ಅಪ್ಪಾಜಿ-ಅಮ್ಮನಿಗೆ ಕೈ ಮುಗಿಯುತ್ತಿದ್ದೆವು, ಇನ್ನು ಮೇಲೆ ತಮ್ಮನಿಗೂ ಕೈ ಮುಗಿದು ಹೋಗಬೇಕಿದೆ'' ಎಂದು ಭಾರವಾದ ಮನಸ್ಸಿನಿಂದ ಮಾತು ಮುಗಿಸಿದರು.


Click it and Unblock the Notifications











