ಅಪ್ಪು ಅಗಲಿ ವರ್ಷ: ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ
ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಒಂದು ವರ್ಷ. ಇಡೀ ದೊಡ್ಮನೆ ಕುಟುಂಬ ಇಂದು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡಿದೆ.
ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ, ಶಿವರಾಜ್ ಕುಮಾರ್, ಗೀತ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಇನ್ನೂ ಹಲವು ಕುಟುಂಬ ಸದಸ್ಯರು ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಮಾಡಿ ನಮಿಸಿದರು. ಗಾಜನೂರಿನಿಂದಲೂ ಅನೇಕ ಬಂಧುಗಳು ಆಗಮಿಸಿ ಸಮಾಧಿಗೆ ಭೇಟಿ ನೀಡಿದ್ದಾರೆ. ಅಪ್ಪುಗಾಗಿ ಅವರಿಷ್ಟದ ತಿಂಡಿ-ತಿನಿಸುಗಳನ್ನು ಇಟ್ಟು ನಮಿಸಲಾಯಿತು.
ಮುಂಜಾನೆಯೇ ಶಿವಣ್ಣ-ಗೀತಕ್ಕ ಅವರು ಅಪ್ಪು ನಿವಾಸಕ್ಕೆ ಭೇಟಿ ನೀಡಿ, ಪೂಜಾ ಕಾರ್ಯದ ಬಗ್ಗೆ ಚರ್ಚಿಸಿ, ಗಾಜನೂರಿನಿಂದ ಬಂದಿದ್ದ ಬಂಧುಗಳನ್ನು ಮಾತನಾಡಿ ಆ ಬಳಿಕ ಸಮಾಧಿಗೆ ತೆರಳಿ ಪೂಜೆ ನೆರವೇರಿಸಿದರು.

ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಕಣ್ಣೀರು ಹಾಕಿದರು. ಬಳಿಕ ಅನ್ನಸಂತರ್ಪಣೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ರಾತ್ರಿಯಿಂದಲೇ ನಡೆಯುತ್ತಿರುವ ಅಪ್ಪು ಗೀತನಮನ ಕಾರ್ಯಕ್ರಮದಲ್ಲಿ ಶಿವಣ್ಣ ಎರಡು ಹಾಡುಗಳನ್ನು ಹಾಡಿದರು.
ರಾಜ್ಯದ ಮೂಲೆ-ಮೂಲೆಗಳಿಂದ ಜನ ಆಗಮಿಸಿದ್ದು, ಪುನೀತ್ ಸಮಾಧಿಗೆ ನಮಿಸುತ್ತಲೇ ಇದ್ದಾರೆ. ಭಾರಿ ಸಂಖ್ಯೆಯ ಜನ ಸಮಾಧಿಯ ಬಳಿ ಸೇರಿದ್ದು, ಅಪ್ಪುಗಾಗಿ ಹಾರಗಳು, ಅವರಿಗಿಷ್ಟದ ತಿಂಡಿ-ತಿನಿಸುಗಳನ್ನು ಜನ ತಂದಿದ್ದಾರೆ.


Click it and Unblock the Notifications











