ಕೊರಿಯಾದಲ್ಲೂ ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ
ಪುನೀತ್ ರಾಜ್‌ಕುಮಾರ್ ಅನ್ನು ಎಲ್ಲರೂ 'ಡೌನ್ ಟು ಅರ್ತ್' ವ್ಯಕ್ತಿ ಎನ್ನುತ್ತಿದ್ದರು. ಸ್ಟಾರ್ ಪಟ್ಟವಿದ್ದರೂ ಎಲ್ಲರೊಟ್ಟಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದ ಮನುಷ್ಯ ಆದರೆ ಅವರ ಕೀರ್ತಿ ಮಾತ್ರ ದೇಶ ದಾಟಿ ವಿದೇಶಗಳಲ್ಲಿಯೂ ಹರಡಿತ್ತು.
ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶದ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿದೆ. ಕರ್ನಾಟಕದ ಚಾನೆಲ್‌ಗಳಲ್ಲಿಯಂತೂ ಸತತ ಮೂರು ದಿನದಿಂದಲೂ ಅಪ್ಪುವಿನದ್ದೇ ಮಾತು. ಆದರೆ ವಿದೇಶದಲ್ಲೂ ಅಪ್ಪುವಿನ ಸಾವಿನ ಸುದ್ದಿ ಬಿತ್ತರವಾಗಿದೆ.
ಬಿಬಿಸಿ ಚಾನೆಲ್‌ನಲ್ಲಿ ಅಪ್ಪು ನಿಧನದ ಸುದ್ದಿ ಬಿತ್ತರವಾದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಕೋರಿಯನ್ ನ್ಯೂಸ್ ಚಾನೆಲ್ ಒಂದು ಅಪ್ಪು ನಿಧನದ ಸುದ್ದಿಯನ್ನು ಪ್ರಕಟಿಸಿದೆ.

ದಕ್ಷಿಣ ಕೊರಿಯಾದ ಯೊನ್ಹಾಪ್ ನ್ಯೂಸ್ ಹೆಸರಿನ ಚಾನೆಲ್ ಒಂದು ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯನ್ನು ಪ್ರಕಟಿಸಿದೆ. ಪುನೀತ್ ರಾಜ್‌ಕುಮಾರ್, ನರೇಂದ್ರ ಮೋದಿ ಅವರೊಟ್ಟಿಗೆ ನಿಂತಿರುವ ಚಿತ್ರವನ್ನು ವಿಡಿಯೋದಲ್ಲಿ ಪ್ರಕಟಿಸಿರುವ ಸುದ್ದಿ ವಾಹಿನಿ, ಪುನೀತ್ ಅಂತಿಮ ದರ್ಶನ ಪಡೆಯಲು ಸೇರಿದ್ದ ಜನಸಮೂಹದ ಚಿತ್ರವನ್ನು ಪ್ರಕಟಿಸಿದೆ. ಅಭಿಮಾನಿಗಳು ಕಂಬನಿ ಮಿಡಿಯುತ್ತಿರುವುದಾಗಿ ಸುದ್ದಿ ವಾಹಿನಿ ಹೇಳಿದೆ. ಸುದ್ದಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಬಿಸಿ ನ್ಯೂಸ್ ಮೊನ್ನೆಯೇ ಪುನೀತ್ ನಿಧನದ ಸುದ್ದಿಯನ್ನು ಪ್ರಕಟಿಸಿತ್ತು, ಬಿಬಿಸಿ ವರ್ಲ್ಡ್ ಚಾನೆಲ್‌ನ ಲಂಡನ್ ವರದಿಗಾರ್ತಿ, ಸಿನಿಮಾ ವಿಮರ್ಶಕಿ ಶಾಂತಿ ಓಂಕಾರ್ ಬಿಬಿಸಿ ವರ್ಲ್ಡ್ ಜೊತೆ ಮಾತನಾಡಿ, ''ನಾನು ಅವರ ಅಣ್ಣ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದೆ ಸ್ವತಃ ಅವರೂ ಸಹ ದೊಡ್ಡ ಸ್ಟಾರ್. ನಾನು ಸೇರಿದಂತೆ ಎಲ್ಲರೂ ಆಘಾತಕ್ಕೆ ಒಳಗಾಗಿದ್ದೇವೆ. ನಿನ್ನೆಯಷ್ಟೆ ಪುನೀತ್ ವೇದಿಕೆಯ ಮೇಲೆ ಅವರ ಅಣ್ಣನೊಂದಿಗೆ ಮತ್ತು ನಟ ಯಶ್ ಜೊತೆ ಸೇರಿ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಪುನೀತ್ ಸಾವಿನ ಸುದ್ದಿ ಅಪ್ಪಳಿಸಿರುವುದು ತೀವ್ರ ಆಘಾತಕ್ಕೆ ಕಾರಣವಾಗಿದೆ'' ಎನ್ನುತ್ತಾರೆ.

''ಪುನೀತ್‌ಗೆ ಕೇವಲ 46 ವರ್ಷ ಅಷ್ಟೆ ವಯಸ್ಸಾಗಿತ್ತು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಅವರ ಸಾವಿಗೆ ಸಾವಿರಾರು ಮಂದಿ ಕಂಬನಿ ಸುರಿಸುತ್ತಿದ್ದಾರೆ. ಹಲವು ದೃಶ್ಯಗಳು ಕರ್ನಾಟಕದಿಂದ ಬರುತ್ತಿವೆ. ಸಾವಿರಾರು ಜನ ಪುನೀತ್ ಅವರನ್ನು ನೋಡಲು ಬರುತ್ತಿದ್ದಾರೆ. ಪುನೀತ್ ಸಣ್ಣ ಹುಡುಗನಾಗಿದ್ದಾನಿಂದಲೂ ಕರ್ನಾಟಕದ ಜನ ಅವರನ್ನು ನೋಡಿದ್ದಾರೆ. ಆತ ಬೆಳೆದು ದೊಡ್ಡವನಾದುದ್ದನ್ನು ನೋಡಿದ್ದಾರೆ. ತಂದೆಯ ಜೊತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ'' ಎಂದಿದ್ದಾರೆ ಶಾಂತಿ ಓಂಕಾರ್.
''ಡಾ.ರಾಜ್‌ಕುಮಾರ್ ಒಬ್ಬ ಅದ್ಭುತ ವ್ಯಕ್ತಿ, ನಟ, ಹಾಗಾಗಿಯೇ ಅಭಿಮಾನಿಗಳಿಗೆ ಪುನೀತ್ ಸಾವಿನ ಸುದ್ದಿ ತೀವ್ರ ಆಘಾತ ತಂದಿದೆ. ಪುನೀತ್ ಕೇವಲ ನಟನಾಗಿ ಮಾತ್ರವೇ ಗುರುತಿಸಿಕೊಂಡಿಲ್ಲ ಬದಲಿಗೆ ಶಿಕ್ಷಣದ ಸೇವೆಯಿಂದ. ಉದ್ಯಮಗಳಿಂದ ಗುರುತಿಸಿಕೊಂಡಿದ್ದರು. ತಂದೆಯಂತೆಯೇ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಕುಟುಂಬವೇ ಒಂದು ಮಹತ್ತರವಾದ ವ್ಯಕ್ತಿತ್ವವುಳ್ಳ ಕುಟುಂಬ. ಅವರ ಬಗ್ಗೆ ಮಾತನಾಡುತ್ತಿದ್ದರೆ ಸ್ವತಃ ನನಗೆ ಕಣ್ಣೀರು ಬರುತ್ತಿದೆ'' ಎಂದು ಬಿಬಿಸಿ ಜೊತೆ ಮಾತನಾಡುತ್ತಾರೆ ಭಾವುಕರಾಗಿದ್ದಾರೆ ಓಂಕಾರ್.
''ನರೇಂದ್ರ ಮೋದಿ ಹೇಳಿರುವುದು ನಿಜ, ಇದು ವಿಧಿಯ ಕ್ರೂರ ಆಟ. ಕೆಲವು ಗಂಟೆಗಳ ಹಿಂದೆ ಆತ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದ, ಆದರೆ ಈಗ ಆತ ಇಲ್ಲ ಎನ್ನುವುದು ಊಹಿಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿಲ್ಲ'' ಎಂದಿದ್ದಾರೆ ಶಾಂತಿ ಓಂಕಾರ್.
ನಟ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಪುನೀತ್ ರಾಜ್‌ಕುಮಾರ್ ಅವರ ಅಂತಿಮ ಸಂಸ್ಕಾರ ಇಂದಷ್ಟೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಎರಡು ದಿನಗಳ ಕಾಲ ಅವರ ಅಂತಿಮ ದರ್ಶನ ಪಡೆದಿದ್ದು, ಸುಮಾರು 25 ಲಕ್ಷಕ್ಕೂ ಅಧಿಕ ಜನ ಪುನೀತ್ ಅವರ ಅಂತಿಮ ದರ್ಶನ ಪಡೆದರು.


Click it and Unblock the Notifications











