ಬೆಣ್ಣೆನಗರಿಯಲ್ಲಿ 'ಗಂಧದ ಗುಡಿ' ಹೌಸ್ ಫುಲ್: ಅಪ್ಪುವನ್ನು ಕಂಡು ಅಭಿಮಾನಿಗಳು ಭಾವುಕ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ 'ಗಂಧದ ಗುಡಿ' ಚಿತ್ರಕ್ಕೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಭಾವಪೂರ್ಣವಾಗಿ ಬರಮಾಡಿಕೊಂಡರಲ್ಲದೇ, ಪರದೆ ಮೇಲೆ ಪರಮಾತ್ಮನನ್ನು ನೋಡಿ ಕಣ್ತುಂಬಿಕೊಂಡು ಭಾವುಕರಾದರು ಅಭಿಮಾನಿಗಳು.
ನಗರದ ವಸಂತ ಚಿತ್ರಮಂದಿರಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಟಿಕೆಟ್ ಗಾಗಿ ಮುಗಿಬಿದ್ದರು. ಮೊದಲ ಶೋ ವೀಕ್ಷಿಸಲು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಟಿಕೆಟ್ ಪಡೆಯಲು ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದರು.
ಚಿತ್ರಮಂದಿರದ ಆವರಣದಲ್ಲಿ ಪುನೀತ್ ರಾಜಕುಮಾರ್ ಅವರ ಬೃಹತ್ ಕಟೌಟ್ ಹಾಕಲಾಗಿತ್ತು. ಎಲ್ಲೆಲ್ಲೂ ಅಪ್ಪು ಫೋಟೋಗಳು, ಗಂಧದ ಗುಡಿ ಸಿನಿಮಾದ ಭಾವಚಿತ್ರಗಳು ರಾರಾಜಿಸಿದವು.
ಅಪ್ಪು ಅಗಲಿ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ಚತವಾಗಿ ನೆಲೆಸಿದ್ದಾರೆ ಎಂಬುದು ಅಭಿಮಾನಿಗಳೋತ್ಸಾಹ ಕಂಡಾಗ ಅನಿಸುತಿತ್ತು. ಪವರ್ ಸ್ಟಾರ್ ಪರದೆ ಮೇಲೆ ಬರುತ್ತಿದ್ದಂತೆ ಅಪ್ಪು.. ಅಪ್ಪು.. ಮತ್ತೆ ಹುಟ್ಟಿಬನ್ನಿ... ಅಪ್ಪು ಅಮರ ಸೇರಿದಂತೆ ಹಲವು ಘೋಷಣೆಗಳು ಮೊಳಗಿದವು.

ಅದ್ಭುತವಾಗಿವೆ ಸಿನಿಮಾದ ದೃಶ್ಯಗಳು
ಕಾಡಿನ ಸಂಪೂರ್ಣ ವೈಭವ ನೋಡಿದ ಅಭಿಮಾನಿಗಳು ಪುಳಕಗೊಂಡರು. ಕೊನೆಯ ಸಿನಿಮಾದಲ್ಲಿ ಪರಿಸರ, ಪ್ರಾಣಿ, ಬುಡಕಟ್ಟು ಜನರ ಸಂಪ್ರದಾಯ, ನೃತ್ಯ, ಸಮುದ್ರ, ನೀರಿನಲ್ಲಿ ಅಪ್ಪು ಹೋಗುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಖುಷಿಗೆ ಕಾರಣವಾಯಿತು.

ಭಾವುಕರಾದ ಅಭಿಮಾನಿಗಳು
ಅಪ್ಪು ತೆರೆ ಮೇಲೆ ಬಂದಾಗಲಂತೂ ಅಭಿಮಾನಿಗಳ ಅಭಿಮಾನ ಎಲ್ಲೆ ಮೀರಿತ್ತು. ಅಪ್ಪುವನ್ನು ತೆರೆಯ ಮೇಲೆ ಕಂಡು ಹಲವರು ಭಾವುಕರಾದರು. ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಆದ ಕಾರಣ ಮೊದಲನೇ ದಿನದ ಟಿಕೆಟ್ ಬುಕ್ಕಿಂಗ್ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಸಿನಿಮಾ ನಾಳೆ ನೋಡಬೇಕು ಎಂಬ ಬೇಸರದಲ್ಲಿಯೇ ಕೆಲವರು ತೆರಳಿದರು.

ಅಪ್ಪು ಭಾವಚಿತ್ರಕ್ಕೆ ಪೂಜೆ
ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜಕುಮಾರ್ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಅವರ ನೇತೃತ್ವದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದರು. ಚಿತ್ರ ನೋಡಿ ಬಂದ ಎಲ್ಲರೂ ಭಾವುಕರಾಗಿದ್ದರು. ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಅಪ್ಪು ಅವರ ಅಂತಿಮ ಸಿನಿಮಾ ಆದ ಕಾರಣ ಜನರು ಥಿಯೇಟರ್ ತಂಡೋಪತಂಡವಾಗಿ ಜನ ಬರುತ್ತಿದ್ದಾರೆ. ಟಿಕೆಟ್ ಸೋಲ್ಡ್ ಔಟ್ ಎಂಬ ಮಾತು ಥಿಯೇಟರ್ ನವರಿಂದ ಕೇಳಿ ಬರುತ್ತಿದೆ.

ಅಪ್ಪು ಅಗಲಿಕೆ ಅಭಿಮಾನಿಗಳಲ್ಲಿ ದುಃಖ ತಂದಿದೆ
ಒಟ್ಟಿನಲ್ಲಿ ಅಪ್ಪು ಅಗಲಿಕೆ ಅಭಿಮಾನಿಗಳಲ್ಲಿ ದುಃಖ ತಂದಿದೆ. ಹಬ್ಬದ ರೀತಿಯಲ್ಲಿ ಗಂಧದ ಗುಡಿ ಸಿನಿಮಾ ಬಿಡುಗಡೆ ವಾತಾವರಣ ಸೃಷ್ಟಿಸಿದೆ. ಗಂಧದ ಗುಡಿ ಪ್ರತಿಯೊಬ್ಬರೂ ನೋಡಬೇಕು. ಪುನೀತ್ ರಾಜಕುಮಾರ್ ಅವರ ಸಹಜವಾದ ನಗು ಮತ್ತೆಮತ್ತೆ ಕಾಡುತ್ತೆ. ಕಾಡಿನ ಸುಂದರ ವಿಹಂಗಮ ನೋಟ ಬಣ್ಣಿಸಲು ಆಗದು. ಪುನೀತ್ ರಾಜಕುಮಾರ್ ಶ್ರೀಗಂಧದ ನಾಡಿಗೆ 'ಗಂಧದ ಗುಡಿ' ಎಂಬ ಅನರ್ಘ್ಯ ರತ್ನ ಕೊಟ್ಟು ಹೋಗಿದ್ದಾರೆ ಎಂದು ಅಭಿಮಾನಿಗಳು ಹೇಳಿದರು.


Click it and Unblock the Notifications











