ರಾಜ್ಯದ ಹಲೆವೆಡೆ ಅಪ್ಪು ಸ್ಮರಣೆ: ನೆಚ್ಚಿನ ನಟನ ನೆನಪಿಸಿಕೊಂಡ ಅಭಿಮಾನಿಗಳು
ಪುನೀತ್ ರಾಜ್‌ಕುಮಾರ್ ಅಗಲಿ 11 ದಿನಗಳಾದವು. ಇಂದಿಗೂ ಅಪ್ಪುವಿನ ಕೋಟ್ಯಂತರ ಅಭಿಮಾನಿಗಳಿಗೆ ಈ ಕಹಿ ಘಟನೆಯನ್ನು ಅರಗಿಸಿಕೊಳ್ಳಲಾಗಿಲ್ಲ.
ಅಪ್ಪು ಕೇವಲ ನಟರಾಗಿರಲಿಲ್ಲ ಬದಲಿಗೆ ಮನೆ ಮಗನಂತೆ ರಾಜ್ಯದ ಜನರಿಗೆ ಆಪ್ತರಾಗಿದ್ದರು. ಹಾಗಾಗಿಯೇ ಅವರು ತೀರಿ ಹೋದ ನಂತರದ ಕಾರ್ಯವನ್ನು ರಾಜ್ಯದೆಲ್ಲೆಡೆ ಮಾಡಲಾಗುತ್ತಿದೆ. ಇಂದು ಅಪ್ಪು ನಿಧನದ 11ನೇ ದಿನದ ಕಾರ್ಯವನ್ನು ರಾಜ್ಯದ ಹಲವೆಡೆ ಅಭಿಮಾನಿಗಳು ಆಚರಿಸಿದ್ದಾರೆ.
ಕೋಲಾರದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅನ್ನ ಸಂತರ್ಪಣೆ ಮಾಡಿದ್ದಾರೆ. ಹತ್ತೂರು ಹೋಬಳಿಯ ತಂಬಳ್ಳಿ ಗೇಟ್‌ನಲ್ಲಿ ಅಭಿಮಾನಿಗಳು ಅಪ್ಪುಗಾಗಿ ಕೆಲ ಕಾಲ ಮೌನಾಚರಣೆ ಮಾಡಿ ಆ ನಂತರ ಅನ್ನ ಸಂತರ್ಪಣೆ ಮಾಡಿದರು.

ರಾಮನಗರ ಜಿಲ್ಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಪುನೀತ್ 11ನೇ ದಿನದ ಪುಣ್ಯ ಸ್ಮರಣೆ ಮಾಡಲಾಯಿತು. ನಿನ್ನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಅಪ್ಪು ಸ್ಮರಣೆ ನಮಾಡಲಾಯಿತು. ಅಗಲಿದ ಚಿತ್ರನಟನಿಗೆ ಇಡೀ ಗ್ರಾಮಸ್ಥರಿಂದ ಅಂತಿಮ ಸಲ್ಲಿಕೆಯಾಯ್ತು. ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರು ಕಂಬನಿ ಮಿಡಿದರು. ಅಪ್ಪುರವರ ನೆಚ್ಚಿನ ಬಿರಿಯಾನಿ ನೈವೇದ್ಯ ಇಡಲಾಗಿತ್ತು. ಜೊತೆಗೆ ಸಾವಿರಾರು ಮಂದಿಗೆ ಬಿರಿಯಾನಿಯನ್ನು ವಿತರಿಸಲಾಯ್ತು. ಪುನೀತ್ ಅಪ್ಪಟ ಅಭಿಮಾನಿ ಬಾಬು ( ಜೋಗಿ) ಕೇಶಮುಂಡನ ಮಾಡಿಸಿಕೊಂಡು ನೆಚ್ಚಿನ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ.
ಚನ್ನಪಟ್ಟಣದ ವಾಲೆತೋಪು ಗ್ರಾಮದಲ್ಲಿ ಸಹ ಪುನಿತ್ ಅವರ ತಿಥಿ ಕಾರ್ಯವನ್ನು ಭಾನುವಾರ ಮಾಡಲಾಯಿತು. ನಾಟಿಕೋಳಿ ಸಾರು, ಬಿರಿಯಾನಿ ಮಾಡಿಸಿ ಪುನೀತ್ ರಾಜ್‌ಕುಮಾರ್‌ಗೆ ನೈವೇದ್ಯ ಇಟ್ಟು ಗ್ರಾಮದ ಜನರು ಹಾಗೂ ಪುನೀತ್ ಫ್ಯಾನ್ಸ್ ಗೆ ಬಿರಿಯಾನಿ ವಿತರಣೆ ಮಾಡಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ 'ವಿಜಯಪುರ ಹುಡುಗರು' ತಂಡವು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜಿಸಿತ್ತು. ದೇವನಹಳ್ಳಿಯಲ್ಲಿಯೂ ಸಹ ಪುನೀತ್ ಅಭಿಮಾನಿಗಳು ಮೌನಾಚರಣೆ ಮಾಡಿ ಅನ್ನದಾನ ಮಾಡಿದರು.
ಬಳ್ಳಾರಿಯ ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮದಲ್ಲಿ ಅಪ್ಪು ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರ ಪತ್ನಿ, ಶಾಸಕ ಸೋಮಶೇಖರ ರೆಡ್ಡಿ ಇನ್ನೂ ಹಲವರು ಭಾಗವಹಿಸಿದ್ದರು.
ಇನ್ನು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು ಪುನೀತ್‌ರ 11ನೇ ದಿನದ ಕಾರ್ಯವನ್ನು ನೆರವೇರಿಸಿದರು. ರಾಘವೇಂದ್ರ ರಾಜ್‌ಕುಮಾರ್ ಮತ್ತು ಕುಟುಂಬ, ಶಿವರಾಜ್ ಕುಮಾರ್ ಕುಟುಂಬ, ಪುನೀತ್ ಪತ್ನಿ, ಮಕ್ಕಳು, ಶ್ರೀಮುರಳಿ, ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡ, ಗಾಜನೂರಿನ ಆಗಮಿಸಿದ್ದ ಸಂಬಂಧಿಗಳು, ಪುನೀತ್ ಆತ್ಮೀಯರು, ಗೆಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುನೀತ್‌ಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯ್ತು.


Click it and Unblock the Notifications











