ಪುನೀತ್ ರಾಜ್‌ಕುಮಾರ್ ಅಂತ್ಯ ಯಾತ್ರೆ: ಹಾದಿ, ಸಮಯ ಇತ್ಯಾದಿ
ನಟ ಪುನೀತ್ ರಾಜ್‌ಕುಮಾರ್ ಅಂತಿಮ ಸಂಸ್ಕಾರ ನಾಳೆ (ಭಾನುವಾರ) ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.
ನಿನ್ನೆ (ಶುಕ್ರವಾರ) ಸಂಜೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಾರಂಭವಾಗಿರುವ ಅಂತಿಮ ದರ್ಶನ ಈವರೆಗೆ ನಡೆಯುತ್ತಲೇ ಇದ್ದು, ದೇಶದ ಹಲವು ಮೂಲೆಗಳಿಂದ ಆಗಮಿಸಿದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಮಯ ಕಳೆದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇಂದು ಸಂಜೆಯೇ ಅಂತಿಮ ಸಂಸ್ಕಾರ ಮಾಡಲು ಯೋಜಿಸಲಾಗಿತ್ತು ಆದರೆ ಅಭಿಮಾಣಿಗಳ ಸಂದಣಿ ಹೆಚ್ಚಾಗುತ್ತಲೇ ಸಾಗಿದ್ದರಿಂದ ಅಂತಿಮ ಸಂಸ್ಕಾರವನ್ನು ನಾಳೆ ಮುಂದೂಡಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಸಮಾಧಿ ಮಾಡಲು ಸಕಲ ಸಿದ್ಧತೆ ಮುಗಿದಿದೆ.

ನಾಳೆ (ಭಾನುವಾರ) ಬೆಳಿಗ್ಗೆ 6 ಗಂಟೆಗೆ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ಮೆರವಣಿ ಮೂಲಕ ಕಂಠೀರವ ಸ್ಟುಡಿಯೋಗೆ ಕರೆದುಕೊಂಡು ಹೋಗಲಾಗುತ್ತದೆ. ಮೆರವಣಿಗೆ ಸಾಗುವ ಹಾದಿಯನ್ನು ಪೊಲೀಸ್ ಇಲಾಖೆ ಈಗಾಗಲೇ ಪ್ರಕಟಿಸಿದ್ದು, ಅದು ಇಂತಿದೆ.
ಕಂಠೀರವ ಸ್ಟೇಡಿಯಂನ ಹಿಂದಿನ ಗೇಟ್‌ನಿಂದ ಮೆರವಣಿ ಪ್ರಾರಂಭವಾಗಿ ಆರ್‌ಆರ್‌ಎಂಆರ್ ರಸ್ತೆ ಮೂಲಕ ಹಡ್ಸನ್ ವೃತ್ತ ಅಲ್ಲಿಂದ ಪೊಲೀಸ್ ಕಾರ್ನರ್, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್‌ನಲ್ಲಿ ಎಡತಿರುವು ಪಡೆದು ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೆ ಹೈಗ್ರೌಂಡ್ಸ್ ವೃತ್ತ ದಲ್ಲಿ ಎಡ ತಿರುವು ಪಡೆದು ಟಿ ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ರ್ಯಾಂಪ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಎಡತಿರುವು, ಭಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ಬಲ ತಿರುವು ಪಡೆದು, ಮಾರಮ್ಮ ವೃತ್ತ, ಬಿಎಚ್‌ಇಎಲ್ ಸರ್ವೀಸ್ ರಸ್ತೆ, ಬಿಎಚ್‌ಇಎಲ್ ವೃತ್ತದಿಂದ ಯಶವಂತಪುರ ವೃತ್ತ, ಮಾರಪ್ಪನ ಪಾಳ್ಯ, ಗೋವರ್ಧನ ಚಿತ್ರಮಂದಿರ ಜಂಕ್ಷನ್, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‌ಟಿಐ ಕಚೇರಿ ಹಾದು ಕಂಠೀರವ ಸ್ಟುಡಿಯೋ ಪ್ರವೇಶಿಸಲಿದೆ ಪುನೀತ್ ಪಾರ್ಥಿವ ಶರೀರದ ಮೆರವಣಿಗೆ.
ನಾಳೆ ಬೆಳಿಗ್ಗೆ 10:30 ರ ಒಳಗಾಗಿ ಅಂತಿಮ ವಿಧಿ ವಿಧಾನವನ್ನು ನೆರವೇರಿಸುವ ಇರಾದೆ ಪುನೀತ್ ಕುಟುಂಬದವರಿಗೆ ಹಾಗೂ ಸರ್ಕಾರಕ್ಕೆ ಇದೆ. ಈ ಬಗ್ಗೆ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ, ಶಿವರಾಜ್ ಕುಮಾರ್, ಪೊಲೀಸ್ ಕಮೀಷನರ್ ಕಮಲ್ ಪಂಥ್ ಅವರುಗಳು ಚರ್ಚೆ ನಡೆಸಿದ್ದಾರೆ.
ನಾಳೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವದ ಮೂಲಕ ಪುನೀತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಅಂತಿಮ ಸಂಸ್ಕಾರದ ವೇಳೆ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ಇರಲಿದೆ.
ನಾಳೆ ಬೆಳಿಗ್ಗೆ 5 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ರಾಜ್‌ಕುಮಾರ್ ಕುಟುಂಬ ಸದಸ್ಯರೆಲ್ಲ ಸೇರಲಿದ್ದಾರೆ. ಬೆಳಿಗ್ಗಿನಿಂದಲೇ ಕೆಲವು ಪೂಜಾ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ.


Click it and Unblock the Notifications











