ಸಕಲ ಸರ್ಕಾರಿ ಗೌರವಗಳೊಂದಿಗೆ ಅಪ್ಪುವಿಗೆ ಬೀಳ್ಕೊಡುಗೆ
ಲಕ್ಷಾಂತರ ಅಭಿಮಾನಿಗಳ ಆಕ್ರಂದನದ ನಡುವೆ ನಟ ಪುನೀತ್ ರಾಜ್‌ಕುಮಾರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮಣ್ಣು ಸೇರಿದ್ದಾರೆ.
Recommended Video
ಸಕಲ ಸರ್ಕಾರಿ ಗೌರವಗಳೊಂದಿಗೆ ಅಪ್ಪು ಅಂತ್ಯ ಸಂಸ್ಕಾರ ನೆರವೇರಿತು. ಕುಟುಂಬಸ್ಥರು, ಚಿತ್ರರಂಗದ ಗಣ್ಯಾತಿಗಣ್ಯರು ಕಂಠೀರವ ಸ್ಟುಡಿಯೋದಲ್ಲಿ ಅಪ್ಪುವಿನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಈಡಿಗ ಸಂಪ್ರದಾಯದ ಪ್ರಕಾರ ಅಪ್ಪುವಿನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕಂಠೀರವ ಸ್ಟುಡಿಯೋದ ಒಳಗೆ ಕುಟುಂಬಸ್ಥರು ಆಪ್ತೇಷ್ಟರಿಗೆ ಬಿಟ್ಟು ಹೆಚ್ಚಿನ ಜನರಿಗೆ ಅವಕಾಶ ಇರಲಿಲ್ಲವಾದರೂ ಆಪ್ತೇಷ್ಟರು, ಕುಟುಂಬ ವರ್ಗದ ಜನರೇ ನೂರಾರು ಮಂದಿ ಆಗಿದ್ದರು. ಎಲ್ಲರ ಅಳುವಿನ ನಡುವೆ ಪುನೀತ್ ಅವರನ್ನು ಮಣ್ಣಿಗಿರಿಸಲಾಯಿತು. ಅಪ್ಪುವನ್ನು ಕಳಿಸಿಕೊಡಲು ಕಂಠೀರವ ಸ್ಟುಡಿಯೋದ ಹೊರಗೆ ಈಗಲೂ ಸಾವಿರಾರು ಮಂದಿ ಅಭಿಮಾನಿಗಳು ನೆರೆದಿದ್ದಾರೆ.
ಅಪ್ಪುವಿನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಜೊತೆಗೆ ನೂರಾರು ಮಂದಿ ಪೊಲೀಸರು ಹಾದಿಯುದ್ದಕ್ಕೂ ಪುನೀತ್ ಅವರಿಗೆ ಭದ್ರತೆ ಒದಗಿಸಿ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋಕ್ಕೆ ತಲುಪಿಸಿದರು.

ಅಂತಿಮ ಕಾರ್ಯ ನಡೆಸಿದ ವಿನಯ್ ರಾಜ್‌ಕುಮಾರ್
ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ಶಿವಣ್ಣ, ಅತ್ತಿಗೆ ಗೀತಕ್ಕ, ರಾಘವೇಂದ್ರ ರಾಜ್‌ಕುಮಾರ್, ಅವರ ಮಕ್ಕಳು, ನಟರಾದ ಯಶ್, ಗಣೇಶ್, ಜಗ್ಗೇಶ್, ದುನಿಯಾ ವಿಜಯ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ, ರಾಕ್‌ಲೈನ್ ವೆಂಕಟೇಶ್, ಸುದೀಪ್, ಶ್ರುತಿ, ತಾರಾ, ಸುಧಾರಾಣಿ ಇನ್ನೂ ಹಲವು ನಟರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಕುಟುಂಬಸ್ಥರು ಕಣ್ಣೀರು ಹಾಕಿಕೊಂಡೆ ಪೂಜಾ ವಿಧಿಗಳನ್ನು ಪೂರೈಸಿದರು. ಪುನೀತ್‌ಗೆ ಗಂಡು ಮಕ್ಕಳಿಲ್ಲದ ಕಾರಣ ರಾಘವೇಂದ್ರ ರಾಜ್‌ಕುಮಾರ್ ಪ್ರಥಮ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿ-ವಿಧಾನಗಳನ್ನು ಮಾಡಿದರು. ಆ ನಂತರ ಹತ್ತಿರದ ಕುಟುಂಬಸ್ಥರು ಗುಂಡಿಯೊಳಕ್ಕೆ ಅರಿಶಿಣ-ಕುಂಕುಮ ಚೆಲ್ಲಿದರು. ನಂತರ ಎಲ್ಲರೂ ಹಿಡಿ ಮಣ್ಣು ಹಾಕಿ ಅಪ್ಪುವನ್ನು ಕಳುಹಿಸಿಕೊಟ್ಟರು.

ಅಪ್ಪ-ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಪುನೀತ್
ಅಪ್ಪು ಮಣ್ಣಾದ ಮೇಲೆಯೂ ಅಶ್ವಿನಿ, ಮಕ್ಕಳ ಅಳು ನಿಂತಿಲ್ಲ. ಶಿವಣ್ಣ ಸೇರಿದಂತೆ ಕುಟುಂಬಸ್ಥರೆಲ್ಲರೂ ಅಪ್ಪುವನ್ನು ಮಣ್ಣು ಮಾಡಿದ ಜಾಗದ ಪಕ್ಕದಲ್ಲೇ ಮುಮ್ಮಲರಾಗಿ ಕುಳಿತುಬಿಟ್ಟಿದ್ದಾರೆ. ಎಲ್ಲರೂ ಮೌನವಾಗಿ ಅಪ್ಪುವನ್ನು ಮಣ್ಣು ಮಾಡಿದ ಜಾಗದ ಕಡೆಗೇ ನೋಡುತ್ತಿದ್ದಾರೆ. ರಾಜ್‌ಕುಮಾರ್ ಸಮಾಧಿಯಿಂದ ಸುಮಾರು 15 ಅಡಿ, ಅಮ್ಮ ಪಾರ್ವತಮ್ಮನವರ ಸಮಾಧಿಯಿಂದ ಸುಮಾರು 45 ಅಡಿ ಅಂತರದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಮಣ್ಣು ಮಾಡಲಾಗಿದೆ.

ಹಣೆಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ
ಅಂತಿಮ ಸಂಸ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಡಿಕೆ ಶಿವಕುಮಾರ್, ಸಚಿವರುಗಳಾದ ಸುಧಾಕರ್, ಅಶ್ವತ್ಥ್ ನಾರಾಯಣ್, ಮುನಿಯರತ್ನ, ಭೈತರಿ ಬಸವರಾಜ್ ಇನ್ನೂ ಅನೇಕ ರಾಜಕಾರಣಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಅಪ್ಪುವಿನ ಪಾರ್ಥಿವ ಶರೀರದ ಮೇಲೆ ಹೂ ಚೆಲ್ಲಿ ಕೈಮುಗಿದು ಬೀಳ್ಕೊಟ್ಟರು. ಸಿಎಂ ಬಸವರಾಜು ಅಪ್ಪುವಿನ ಹಣೆಗೆ ಮುತ್ತಿಟ್ಟು ಕೈಮುಗಿದರು.

ಸರ್ಕಾರಿ ಗೌರವದೊಂದಿಗೆ ಅಂತಿಮ ಕ್ರಿಯೆ
ಪುನೀತ್ ಅವರನ್ನು ಮಣ್ಣು ಮಾಡುವ ಮುನ್ನ ಅವರ ಮೃತ ದೇಹದ ಮೇಲೆ ಭಾರತ ಧ್ವಜವನ್ನು ಹೊದಿಸಿ, ಗೌರವಾರ್ಥ ಬಂದೂಕು ಸಿಡಿಸಿ ಪೊಲೀಸರು ವಂದನೆ ಸಲ್ಲಿಸಿದರು. ಪಾರ್ಥಿವ ಶರೀರದ ಮೇಲೆ ಹೊದಿಸಿದ ಧ್ವಜವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಅಶ್ವಿನಿಯವರಿಗೆ ಹಸ್ತಾಂತರಿಸಿದ ಸಂದರ್ಭ ಭಾವುಕವಾಗಿತ್ತು.

ನಿಗದಿಗಿಂತಲೂ ಬೇಗನೇ ಅಂತಿಮ ಸಂಸ್ಕಾರ
ಅಪ್ಪು ಅಗಲಿ ಮೂರು ದಿನಗಳಾಗಿವೆ. ಮೂರು ದಿನದಿಂದಲೂ ಅಂತಿಮ ದರ್ಶನ ನಡೆಯುತ್ತಲೇ ಇತ್ತು. ಈ ವರೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಅಪ್ಪುವಿನ ಅಂತಿಮ ದರ್ಶನ ಪಡೆದಿದ್ದರಾದರೂ ಜನಗಳ ಸಂಖ್ಯೆ ಕಡಿಮೆ ಆಗಿರಲಿಲ್ಲ. ತಡವಾದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಬಹುದು ಪೊಲೀಸರ ಮೇಲೆ ಒತ್ತಡ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಪುನೀತ್ ರಾಜ್‌ಕುಮಾರ್ ಅಂತಿಮ ಯಾತ್ರೆ ಹಾಗೂ ಸಂಸ್ಕಾರ ಮಾಡಲಾಯಿತು.


Click it and Unblock the Notifications











