ಅಣ್ಣಾವ್ರ ಆ ಸೂಪರ್ ಹಿಟ್ ಚಿತ್ರ ಪುನೀತ್‌ಗೆ ಇಷ್ಟ ಆಗಿರಲಿಲ್ಲವಂತೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ 'ಕಸ್ತೂರಿ ನಿವಾಸ' ಸಿನಿಮಾ ಇಷ್ಟ ಆಗಿರಲಿಲ್ಲವಂತೆ. 'ಆರಂಭದಲ್ಲಿ ಈ ಸಿನಿಮಾ ನೋಡಿದಾಗ ಇಷ್ಟ ಆಗ್ತಿರಲಿಲ್ಲ. ಏಕಂದ್ರೆ ಅಪ್ಪಾಜಿ ಅವರು ಬಹಳ ಕಷ್ಟ ಎದುರಿಸುವ ದೃಶ್ಯಗಳು ಈ ಚಿತ್ರದಲ್ಲಿತ್ತು. ಅದು ನನಗೆ ಇಷ್ಟ ಆಗಿರಲಿಲ್ಲ'' ಎಂದು ಪುನೀತ್ ಹೇಳಿಕೊಂಡಿದ್ದಾರೆ.
''ಆದರೆ, 90ರ ದಶಕದ ನಂತರ ಕಸ್ತೂರಿ ನಿವಾಸ ನೋಡಿದಾಗ ಬಹಳ ಇಷ್ಟ ಪಟ್ಟಿದ್ದೇನೆ'' ಎಂದು ಪುನೀತ್ ತಿಳಿಸಿದ್ದಾರೆ. ಡಾ ರಾಜ್ ಕುಮಾರ್ ಅವರ 15 ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿ ಭೇಟಿ ನೀಡಿದ್ದ ಪುನೀತ್ ರಾಜ್ ಕುಮಾರ್ ಕುಟುಂಬ ಅಣ್ಣಾವ್ರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ''15 ವರ್ಷ ಕಳೆದು ಹೋಯ್ತು. ಅವರಿಲ್ಲ ಎನ್ನುವ ಫೀಲಿಂಗ್ ಬಂದಿಲ್ಲ. ಅವರು ನಮಗೆ ಬಿಟ್ಟು ಹೋದ ಪ್ರೀತಿ ವಿಶ್ವಾಸ. ಅವರು ಕೊಟ್ಟು ಹೋಗಿರುವ ಭಾವನೆಗಳಿಗೆ ತುಂಬಾ ಹೆಮ್ಮೆಪಡ್ತಿನಿ'' ಎಂದರು

'ಕಸ್ತೂರಿ ನಿವಾಸ' ಚಿತ್ರ ಬಿಡುಗಡೆಯಾಗಿ 50 ವರ್ಷ ಕಳೆದಿದೆ. ದೊರೆ-ಭಗವಾನ್ ಈ ಚಿತ್ರ ನಿರ್ದೇಶಿಸಿದ್ದರು. ಕೆಸಿಎನ್ ಗೌಡ ಅವರು ನಿರ್ಮಾಣ ಮಾಡಿದ್ದರು. ರಾಜ್ ಕುಮಾರ್, ಜಯಂತಿ, ಆರತಿ, ರಾಜಾ ಶಂಕರ್, ನರಸಿಂಹ ರಾಜು, ಬಾಲಕೃಷ್ಣ, ಕೆಎಸ್ ಅಶ್ವಥ್, ವಿಜಯಶ್ರೀ ಸೇರಿದಂತೆ ಹಲವರು ನಟಿಸಿದ್ದರು.
'ಕಸ್ತೂರಿ ನಿವಾಸ' ಸಿನಿಮಾ ಬಿಡುಗಡೆಯಾದಾಗ ಪುನೀತ್ ರಾಜ್ ಕುಮಾರ್ ಹುಟ್ಟಿರಲಿಲ್ಲ. ಅಪ್ಪು 1975ರಲ್ಲಿ ಜನಿಸಿದರು. ಕಸ್ತೂರಿ ನಿವಾಸ 1971 ಜನವರಿ ತಿಂಗಳಲ್ಲಿ ತೆರೆಗೆ ಬಂದಿತ್ತು.

ಅಂದ್ಹಾಗೆ, ಕಸ್ತೂರಿ ನಿವಾಸ ಸಿನಿಮಾ ಕಪ್ಪು ಬಿಳಪು ತಂತ್ರಜ್ಞಾನದಲ್ಲಿ ತಯಾರಾಗಿತ್ತು. ಈ ಚಿತ್ರವನ್ನು ಕಲರ್‌ನಲ್ಲಿ ತೋರಿಸಬೇಕು ಉದ್ದೇಶದಿಂದ ತಂತ್ರಜ್ಞಾನದ ಸಹಾಯದಿಂದ ಕಲರ್ ಸ್ಕೋಪ್‌ನಲ್ಲಿ ಸಿದ್ದಪಡಿಸಿ ಆರು ವರ್ಷದ ಹಿಂದೆ ಮರುಬಿಡುಗಡೆ ಮಾಡಲಾಯಿತು.


Click it and Unblock the Notifications











