'ಲಕ್ಕಿ ಮ್ಯಾನ್'ನಲ್ಲಿ ಪುನೀತ್‌ರಾಜ್‌ಕುಮಾರ್ ದೇವರ ರೂಪ!
ಪುನೀತ್ ರಾಜ್‌ಕುಮಾರ್ ಅವರು ಇಲ್ಲದೆ ಚಿತ್ರರಂಗ ಬಡವಾಗಿದೆ. ಆದರೆ ಅವರ ನೆನಪು ಅಷ್ಟು ಸುಲಭವಾಗಿ ಮಾಸುವ ನೆನಪಲ್ಲ. ಚಿತ್ರ ರಂಗದಲ್ಲಿ ಅಭಿಮಾನಿ ಬಳಗದಲ್ಲಿ ಅಪ್ಪು ಎಂದಿಗೂ ಅಜರಾಮರ. ಅಪ್ಪುಗಾಗಿ ಒಂದಲ್ಲಾ ಒಂದು ಕಾರ್ಯಕ್ರಮ ನಡೆಯುತ್ತಿವೆ.
ನಟ ಪುನೀತ್ ರಾಜ್‌ಕುಮಾರ್ ಅವರು ಜೇಮ್ಸ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅದು ಅವರು ಹೀರೋ ಆಗಿ ಅಭಿಸಿರುವ ಕೊನೆಯ ಚಿತ್ರ. ಜೇಮ್ಸ್ ಜೊತೆಗೆ ಪುನೀತ್ ರಾಜ್‌ಕುಮಾರ್ ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ 'ಲಕ್ಕಿ ಮ್ಯಾನ್' ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.
ಸದ್ಯ ಲಕ್ಕಿ ಮ್ಯಾನ್ ಚಿತ್ರದ ಸಣ್ಣ ವಿಡಿಯೋ ತುಣುಕು ಒಂದನ್ನು ನಟ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಂಡು ಅಪ್ಪು ಅಭಿಮಾನಿಗಳು ಭಾವುಕ ಆಗಿದದ್ದಾರೆ.
ಲಕ್ಕಿ ಮ್ಯಾನ್ ಚಿತ್ರದ ವಿಶೇಷ ಪಾತ್ರದಲ್ಲಿ ಅಪ್ಪು!
ಲಕ್ಕಿ ಮ್ಯಾನ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟ ಆದರೆ ನಾಯಕನ ಪಾತ್ರಕ್ಕಿಂತಲೂ ಮುಖ್ಯವಾದ ವಿಶೇಷ ಪಾತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದಾರೆ. 'ಲಕ್ಕಿ ಮ್ಯಾನ್' ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿದೆ. ಸದ್ಯ ಸಿನಿಮಾದ ಡಬ್ಬಿಂಗ್ ಕೆಲಸಗಳು ಆರಂಭ ಆಗಿವೆ. ಡಬ್ಬಿಂಗ್ ಮಾಡುತ್ತಿರುವ ಅನುಭವವನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಇದೇ ವೇಳೆ ಅಪ್ಪು ಅವರು ಇದ್ದ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ಮಾಡೋದೇ ಕಷ್ಟ ಆಗಿತ್ತು: ಕೃಷ್ಣ!
ಡಬ್ಬಿಂಗ್ ಅನುಭವದ ಬಗ್ಗೆ ನಟ ಕೃಷ್ಣ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. "ಲಕ್ಕಿಮ್ಯಾನ್ ಸಿನಿಮಾಗೆ ಡಬ್ಬಿಂಗ್ ಶುರು ಮಾಡಿದೆ. ಈ ದೃಶ್ಯಗಳನ್ನು ಡಬ್ಬಿಂಗ್ ಮಾಡುವುದು ಅತ್ಯಂತ ಕಷ್ಟಕರವಾದ ಭಾಗವಾಗಿತ್ತು. ಅಪ್ಪು ಸರ್ ಜೊತೆಗಿನ ಈ ಚಿತ್ರದ ಶೂಟಿಂಗ್ ತುಂಬಾ ವಿಶೇಷವಾಗಿತ್ತು. ಮತ್ತು ಇದು ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ" ಎಂದು ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ. ಇದರೊಂದಿಗೆ ಅಪ್ಪು ಇರುವ ಸಣ್ಣ ವಿಡಿಯೋ ಕ್ಲಿಪ್ ಕೂಡ ಪೋಸ್ಟ್ ಮಾಡಿದ್ದಾರೆ.

'ಲಕ್ಕಿ ಮ್ಯಾನ್'ಗಾಗಿ ಅಪ್ಪು ದೇವರ ರೂಪ!
'ಲಕ್ಕಿ ಮ್ಯಾನ್' ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ 'ಓ ಮೈ ಕಡವಳೆ' ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ 'ದೇವರ' ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರಭುದೇವ ಜೊತೆಗೆ ಅಪ್ಪು ಡಾನ್ಸ್!
ಪರ್ಸಾ ಪಿಕ್ಚರ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್ ಕೆಲಸಗಳು ಸಾಧು ಕೋಕಿಲ ಅವರ ಸ್ಟುಡಿಯೋದಲ್ಲಿ ನಡೆಯುತ್ತಿವೆ. 'ಲಕ್ಕಿ ಮ್ಯಾನ್' ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್‌ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್‌ಕುಮಾರ್ ಅವರ ಕುರಿತಾಗಿ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್ ಮಾಡಿದ್ದಾರೆ.
'ಲಕ್ಕಿ ಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











