"ನಾನು ಆರಾಮಾಗಿದ್ದೀನಿ, ಯಾವುದೇ ಆತಂಕ ಬೇಡ"; ಅಪ್ಪು ಹಳೇ ಪೋಸ್ಟ್ ವೈರಲ್
ಕರ್ನಾಟಕರತ್ನ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಅಭಿಮಾನಿಗಳು ಕಾಡುತ್ತಲೇ ಇದೆ. ಇವತ್ತಿಗೂ ಪ್ರತಿದಿನ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರ ಸಿನಿಮಾ, ಸರಳ ಸಜ್ಜನ ವ್ಯಕ್ತಿತ್ವವನ್ನು ಅಭಿಮಾನಿಗಳು ಮರೆಯೋಕೆ ಸಾಧ್ಯವಿಲ್ಲ. ಅಕ್ಟೋಬರ್ 29, 2021ರಂದು ಅಪ್ಪು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಸದ್ಯ ದಿಢೀರನೆ ಪುನೀತ್ ರಾಜ್‌ಕುಮಾರ್ ಮಾಡಿದ್ದ ಹಳೇ ಪೋಸ್ಟ್ ವೈರಲ್ ಆಗುತ್ತಿದೆ. ಅಂದು ಕೂಡ ತಮ್ಮ ಯೋಗಕ್ಷೇಮದ ಬಗ್ಗೆ ಅಪ್ಪು ಮಾಹಿತಿ ನೀಡಿದ್ದರು. ಅದಕ್ಕೆ ಕಾರಣ ಕೂಡ ಇತ್ತು. ಪುನೀತ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿತ್ತು. ಅಭಿಮಾನಿಗಳಲ್ಲಿ ಗೊಂದಲ ಆತಂಕ ಬೇಡ ಎಂದು ತಾವೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು.

ಅಂದು ಬಳ್ಳಾರಿಯಲ್ಲಿ 'ನಟ ಸಾರ್ವಭೌಮ' ಸಿನಿಮಾ ಚಿತ್ರೀಕರಣ ಮುಗಿಸಿ ಅಪ್ಪು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿತ್ತು. ಕಾರಿನ ಟೈರ್ ಬರ್ಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಏನೇನೊ ಸುದ್ದಿ ಹರಡುವುದು ಬೇಡ ಎಂದು ಖುದ್ದು ಪುನೀತ್ ಪೋಸ್ಟ್ ಮಾಡಿದ್ದರು.
"ನಾನು ಆರಾಮಾಗಿ ಇದ್ದೀನಿ. ಆತಂಕಪಡುವ ಅವಶ್ಯಕತೆ ಇಲ್ಲ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ" ಎಂದು ಅಪ್ಪು ತಮ್ಮ ಫೇಸ್‌ಬುಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. 7 ಜೂನ್ 2018ರಂದು ಈ ಘಟನೆ ನಡೆದಿತ್ತು. ಅಂದರೆ ಸರಿಯಾಗಿ 7 ವರ್ಷಗಳ ಹಿಂದೆ. ಹಾಗಾಗಿ ಅಭಿಮಾನಿಗಳು ಈ ಪೋಸ್ಟ್ ಅನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಇವತ್ತಿಗೂ ಅವರ ಸೋಶಿಯಲ್ ಮೀಡಿಯಾ ಖಾತೆಗಳು ಆಕ್ಟೀವ್ ಆಗಿದೆ.
4 ವರ್ಷಗಳ ಹಿಂದೆ ಕೂಡ ಪುನೀತ್ ರಾಜ್‌ಕುಮಾರ್ ಅವರಿಗೆ ಹೃದಯಾಘಾತ ಎಂದಾಗ ಬೇಗ ಚೇತರಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಮೊದಲಿಗೆ ಅಪ್ಪು ಆರೋಗ್ಯದಲ್ಲಿ ಏರುಪೇರಾಗಿದೆ, ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಬಳಿಕ ಲಘು ಹೃದಯಾಘಾತ ಎನ್ನಲಾಗಿತ್ತು. ಬೆಳಗ್ಗೆ ವ್ಯಾಯಾಮ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಮನೆ ಬಳಿಯ ಕ್ಲಿನಿಕ್‌ಗೆ ಹೋಗಿದ್ದರು. ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಫ್ಯಾಮಿಲಿ ವೈದ್ಯ ಡಾ. ರಮಣರಾವ್ ಸಲಹೆ ನೀಡಿದ್ದರು.
ಆಸ್ಪತ್ರೆ ತಲುಪುವ ಮುನ್ನವೇ ಪುನೀತ್ ರಾಜ್‌ಕುಮಾರ್ ಅವರಿಗೆ ಹೃದಯಾಘಾತವಾಗಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂದು ಕೂಡ ಇದೇ ರೀತಿ ಅಪ್ಪು ಆರೋಗ್ಯದ ಬಗ್ಗೆ ಅಪ್‌ಡೇಟ್ ಬರುತ್ತದೆ. ಅವರು ಕ್ಷೇಮವಾಗಿದ್ದಾರೆ ಎನ್ನುವ ಸುದ್ದಿ ಸಿಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ.


Click it and Unblock the Notifications











