ಪುನೀತ್ ಸಮಾಧಿಗೆ ನಮನ ಸಲ್ಲಿಸಲು ಅಭಿಮಾನಿಗಳಿಗೆ ಅವಕಾಶ
ನಟಸಾರ್ವಭೌಮ ಪುನೀತ್ ನಮ್ಮನ್ನೆಲ್ಲ ಅಗಲಿ ಇಂದಿಗೆ 6ನೇ ದಿನ. ಈಗಲೂ ಕೂಡ ಪುನೀತ್ ಅವರು ನಮ್ಮೊಂದಿಗೆ ಇಲ್ಲ ಅಂತ ಊಹಿಸಿಕೊಳ್ಳೊಕು ಸಾಧ್ಯವಾಗುತ್ತಿಲ್ಲ. ಎಷ್ಟೇ ದಿನ, ವರುಷ ಕಳೆದರು
ಅವರ ಸಿನಿಮಾಗಳು, ಅವರ ಹಾಡುಗಳು, ನಗುಮೊಗ ಪುನೀತ್‌ರನ್ನು ನೆನಪಿಸುತ್ತಲ್ಲೇ ಇರುತ್ತವೆ. ಅಭಿಮಾನಿಗಳು, ಕುಟುಂಬ ಸದಸ್ಯರು ಇನ್ನೂ ಪುನೀತ್ ಅಗಲಿಕೆಯ ನೋವಿನಲ್ಲೆ ದಿನದೂಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ಅಂತಿಮ ದರ್ಶನ ಪಡೆದಿದ್ದರೂ ಕೂಡ ಪುನೀತ್ ಸಮಾಧಿ ಬಳಿ ತೆರಳಬೇಕು ಅಂತ ಅದೆಷ್ಟೊ ಮಂದಿ ಕಾದು ಕುಳಿತ್ತಿದ್ದಾರೆ. ನೆನ್ನೆಯಷ್ಟೆ ಕುಟುಂಬ ಸದಸ್ಯರು ಪುನೀತ್ ಅವರು ಸಾವನ್ನಪ್ಪಿ 5ನೇ ದಿನಕ್ಕೆ ಹಾಲು ತುಪ್ಪ ಕಾರ್ಯವನ್ನು ನೆರವೇರಿಸಿದ್ದಾರೆ. ಹೀಗಾಗಿ ಇಂದಿನಿಂದ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತಿದೆ.
ಪುನೀತ್ ಅವರ ಅಂತಿಮ ದರ್ಶನವನ್ನು 25 ಲಕ್ಷಕ್ಕೂ ಹೆಚ್ಚು ಮಂದಿ ಪಡೆದಿದ್ದರು. ಇನ್ನೂ ಅದೆಷ್ಟೊ ಲಕ್ಷ ಮಂದಿಗೆ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸಮಾಧಿ ಬಳಿಯಾದರು ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಲು ಕಾದುಕುಳಿತ್ತಿದ್ದರು. ಆದರೆ ಸಮಾಧಿ ಬಳಿ 144 ಸೆಕ್ಷನ್ ಜಾರಿ ಗೊಳಿಸಲಾಗಿತ್ತು. ಇಂದಿನಿಂದ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತು ಅಭಿಮಾನಿಗಳು ಪುನೀತ್ ಅವರ ಸಮಾಧಿಗೆ ನಮನ ಸಲ್ಲಿಸಲು ಆಗಮಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯದಿಂದಲೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೇ ಇದ್ದವರು, ಸಮಾಧಿಗೆ ತೆರಳಿ ಆದರೂ ಒಂದು ಬಾರಿ ನೊಡಬೇಕು ಅಂದುಕೊಂಡವರು ಅದೆಷ್ಟೊ ಮಂದಿ ಕಾದು ಕುಳಿತ್ತಿದ್ದರು. ಇಂದು ಅದು ಸಾಧ್ಯವಾಗಿದ್ದು, ಶಾಂತ ರೀತಿಯಲ್ಲಿ ಅಭಿಮಾನಿಗಳು ಪುನೀತ್ ಅವರಿಗೆ ನಮನ ಸಲ್ಲಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯಸ್ಸಾದವರು ಹೀಗೆ ಸಾಕಷ್ಟು ಮಂದಿ ಇವತ್ತು ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೂ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಾರೆ. ಕಾದು ಕಾದು 6ನೇ ದಿನ ಅವಕಾಶ ಸಿಕ್ಕಿರೋದಕ್ಕೆ ಅದೆಷ್ಟೊ ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ. ಪುನೀತ್ ರನ್ನು ನೋಡಲು ಅವಕಾಶಕ್ಕಾಗಿ ಕಾದಿದ್ದ ಅವರು ಇವತ್ತು ನಮನ ಸಲ್ಲಿಸಲು ಅವಕಾಶ ಸಿಕ್ಕಿರೋದಕ್ಕೆ ಖುಷಿಯಾಗಿದ್ದಾರೆ. ಊಟ ನಿದ್ದೆ ಬಿಟ್ಟು ಕಾದಿದ್ದ ಅದೆಷ್ಟೋ ಮಂದಿ ಇವತ್ತು ನಿಟ್ಟುಸಿರು ಬಿಟ್ಟಿದ್ದಾರೆ. ಕೊನೆಗೂ ದರ್ಶನಕ್ಕೆ ಅವಕಾಶ ಸಿಕ್ಕಿದೆ ಎಂದು ಸಮಾಧಾನ ಗೊಂಡಿದ್ದಾರೆ.

ಇನ್ನು ಕಂಠೀರವ ಸ್ಟುಡಿಯೋದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವುದರಿಂದ, ಏನೂ ತೊಂದರೆ ಆಗಬಾರದು, ಹಾಗೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಪೊಲೀಸ್ ಪಡೆ ನಿಯೋಜನೆಗೊಂಡಿದೆ. 3 ಕೆಎಸ್‌ಆರ್‌ಪಿ ತುಕಡಿ, 500ಕ್ಕು ಹೆಚ್ಚು ಪೊಲೀಸ್ ಪಡೆ, ರ್‍ಯಾಪಿಡ್ ಫೋರ್ಸ್ ಕೂಡ ಅಲ್ಲಿ ನಿಯೋಜನೆ ಆಗಿದೆ. ಬರುವ ಅಭಿಮಾನಿಗಳಿಗೆ ವೆಸ್ಟ್ ಗೇಟ್‌ನಲ್ಲಿ ಆಗಮಿಸಲು ಅವಕಾಶ ನೀಡಲಾಗಿದ್ದು, ಗಣ್ಯವ್ಯಕ್ತಿಗಳಿಗೆ ಮೈನ್ ಗೇಟ್‌ನಲ್ಲಿ ಎಂಟ್ರಿಗೆ ಅವಕಾಶ ನೀಡಲಾಗಿದೆ.
ಪುನೀತ್ ನಿಧನರಾಗಿ 5ನೇ ದಿನಕ್ಕೆ ಕುಟುಂಬ ಸದಸ್ಯರು ಹಾಲು ತುಪ್ಪು ಕಾರ್ಯ ಮಾಡಿದ್ದು, ಕೇವಲ ಕುಟುಂಬ ಸದಸ್ಯರು , ಆಪ್ತರು ಹಾಗೇ ಕೆಲ ಗಣ್ಯರಷ್ಟೆ ಪಾಲ್ಗೊಂಡಿದ್ದರು.


Click it and Unblock the Notifications










