ಗಂಧದ ಗುಡಿ ಫಸ್ಟ್ ಡೇ ಕಲೆಕ್ಷನ್ ಎಷ್ಟು? 'ಕಾಂತಾರ'ದ ವಿಶ್ವ ದಾಖಲೆ ಮುರಿಯುವತ್ತ ಅಪ್ಪು ಕೊನೆ ಸಿನಿಮಾ!
ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದಗುಡಿ ನಿನ್ನೆಯಷ್ಟೆ ( ಅಕ್ಟೋಬರ್ 28 ) ಚಿತ್ರಮಂದಿರದ ಅಂಗಳಕ್ಕೆ ಕಾಲಿಟ್ಟಿದೆ. ಪುನೀತ್ ನಿಧನ ಹೊಂದಿದ ನಂತರ ಬಿಡುಗಡೆಗೊಳ್ಳುತ್ತಿರುವ ಮೂರನೇ ಹಾಗೂ ಅಂತಿಮ ಚಿತ್ರವಾದ ಗಂಧದ ಗುಡಿಗೆ ವಿಶೇಷ ಹಾಗೂ ಅದ್ದೂರಿ ಸ್ವಾಗತ ದೊರಕಿದೆ.
ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಜೇಮ್ಸ್ ಅಭಿಮಾನಿಗಳಿಗೆ ಡಾನ್ಸ್ ಮತ್ತು ಫೈಟ್ ರಸದೌತಣ ಬಡಿಸಿತ್ತು. ನಂತರ ಬಂದ ಲಕ್ಕಿ ಮ್ಯಾನ್ ಚಿತ್ರ ಕೂಡ ಮನರಂಜನೆ ನೀಡಿತ್ತು. ಆದರೆ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ದನಿ ಇರಲಿಲ್ಲ ಮತ್ತು ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ಸಂಪೂರ್ಣವಾಗಿ ಇರಲಿಲ್ಲ ಹಾಗೂ ಕೆಲವು ಕಡೆ ಅಪ್ಪು ದನಿ ಮಿಸ್ ಆಗಿತ್ತು. ಹೀಗೆ ಈ 2 ಚಿತ್ರಗಳಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಂತಹ ಪುನೀತ್ ರಾಜ್ ಕುಮಾರ್ ಅವರ ವಾಯ್ಸ್ ಗಂಧದಗುಡಿ ಚಿತ್ರದಲ್ಲಿದೆ, ಅದು ಸಹ ಸ್ಪಷ್ಟವಾಗಿ.
ಇನ್ನು ವಾಯ್ಸ್ ವಿಚಾರ ಮಾತ್ರವಲ್ಲ ಇಡೀ ಚಿತ್ರ ಅಪ್ಪು ಅಭಿಮಾನಿಗಳಿಗೆ ಸಂಪೂರ್ಣ ತೃಪ್ತಿ ನೀಡಿದೆ. ಫ್ಯಾನ್ಸ್ ಮಾತ್ರವಲ್ಲದೆ ಒಂದೊಳ್ಳೆ ಚಿತ್ರ ನೋಡಬೇಕು ಎಂದು ಹರಸಿ ಚಿತ್ರಮಂದಿರಕ್ಕೆ ಬರುವ ಸಿನಿಪ್ರೇಕ್ಷಕರಿಗೆ ಗಂಧದ ಗುಡಿ ಅಚ್ಚುಮೆಚ್ಚಿನ ಚಿತ್ರವಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಒಂದೂವರೆ ಗಂಟೆಗಳ ಕಾಲ ಪುನೀತ್ ರಾಜ್ ಕುಮಾರ್ ಅವರ ಜತೆ ಕರ್ನಾಟಕದ ಕಾಡುಗಳನ್ನು ಸುತ್ತುವ ಅನುಭವವನ್ನು ಚಿತ್ರ ನೀಡಲಿದ್ದು, ಬೆಳಗಿನ ಪ್ರದರ್ಶನಗಳು ಮುಗಿಯುತ್ತಿದ್ದಂತೆ ಸಿನಿಮಾ ಸೂಪರ್ ಹಿಟ್ ಎಂಬ ಫಲಿತಾಂಶ ಹೊರಬಿತ್ತು. ಹೀಗಾಗಿಯೇ ರಾಜ್ಯದ ವಿವಿಧ ನಗರಗಳ ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಪ್ರದರ್ಶನಗಳು ಬಹುತೇಕ ಸೋಲ್ಡ್ ಔಟ್ ಆಗಿದ್ದವು. ಹೀಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನು ಪಡೆದುಕೊಂಡ ಗಂಧದ ಗುಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಗಂಧದಗುಡಿ ಮೊದಲ ದಿನ ಕಲೆಹಾಕಿದ್ದೆಷ್ಟು?
ಗಂಧದಗುಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಬಾಕ್ಸ್ ಆಫೀಸ್ ಪರಿಣಿತರ ಪ್ರಕಾರ ಗಂಧದಗುಡಿ ಚಿತ್ರ ರಾಜ್ಯಾದ್ಯಂತ ಮೊದಲ ದಿನ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ದೇಶದಾದ್ಯಂತ ಮೊದಲನೇ ದಿನ ಗಂಧದ ಗುಡಿ ಚಿತ್ರದ 62.77% ಟಿಕೆಟ್ ಮಾರಾಟವಾಗಿದೆ. ಇನ್ನು ಮೊದಲ ದಿನಕ್ಕಿಂತ ಎರಡನೇ ದಿನದ ಬುಕ್ಕಿಂಗ್ ಭರ್ಜರಿಯಾಗಿದ್ದು, ಎರಡನೇ ದಿನವೂ ಗಂಧದಗುಡಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುವ ಸಾಧ್ಯತೆಯಿದೆ.

ಮುಂಗಡ ಬುಕಿಂಗ್ ಮೂಲಕವೇ ಕೋಟಿ ಗಳಿಕೆ, ಪ್ರೀಮಿಯರ್ ಶೋನಲ್ಲೂ ಉತ್ತಮ ಗಳಿಕೆ
ಇನ್ನು ಮೊದಲನೇ ದಿನ ಗಂಧದಗುಡಿ ಮುಂಗಡ ಬುಕಿಂಗ್ ಮೂಲಕವೇ 1.72 ಕೋಟಿ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಒಟ್ಟಾರೆ 5 ಕೋಟಿ ( ಮುಂಗಡ ಬುಕಿಂಗ್ ಸೇರಿ ) ಕಲೆಕ್ಷನ್ ಮಾಡಿದೆ. ಬಿಡುಗಡೆ ಹಿಂದಿನ ದಿನ ನಡೆದ ಪ್ರೀಮಿಯರ್ ಪ್ರದರ್ಶನಗಳಲ್ಲಿಯೂ ಗಂಧದಗುಡಿ ಗಲ್ಲಾಪೆಟ್ಟಿಗೆಯನ್ನು ದೋಚಿದೆ. ಗುರುವಾರ ಸಂಜೆ ಹಾಗೂ ರಾತ್ರಿ ರಾಜ್ಯಾದ್ಯಂತ ನಡೆದ ಒಟ್ಟಾರೆ ಪ್ರಿಮಿಯರ್ ಶೋಗಳ ಪೈಕಿ ಗಂಧದ ಗುಡಿ 28 ಲಕ್ಷ ಕಲೆಕ್ಷನ್ ಮಾಡಿದೆ. ಈ ಮೂಲಕ ಗಂಧದಗುಡಿ ಪ್ರೀಮಿಯರ್ ಪ್ರದರ್ಶನಗಳು ಹಾಗೂ ಮೊದಲ ದಿನ ಸೇರಿ ಒಟ್ಟಾರೆ 5.28 ಕೋಟಿ ಕಲೆಕ್ಷನ್ ಮಾಡಿದಂತಾಗಿದೆ.

ಕಾಂತಾರ ರೇಟಿಂಗ್ ದಾಖಲೆ ಮುರಿಯುವತ್ತ ಚಿತ್ತ
ಇನ್ನು ಗಂಧದಗುಡಿ ಮೊದಲನೇ ದಿನ ಮುಕ್ತಾಯದ ಹಂತಕ್ಕೆ 4300 ಮತಗಳನ್ನು ಬುಕ್ ಮೈಶೋ ಅಪ್ಲಿಕೇಶನ್‌ನಲ್ಲಿ ಪಡೆದುಕೊಂಡಿತ್ತು ಹಾಗೂ 10ಕ್ಕೆ 10 ಅಂಕಗಳನ್ನು ಪಡೆದುಕೊಂಡಿದೆ. ಹೀಗೆ ಮೊದಲನೇ ದಿನ ಮುಕ್ತಾಯದ ಹಂತಕ್ಕೆ ಔಟ್ ಆಫ್ ಔಟ್ ರೇಟಿಂಗ್ ಪಡೆದುಕೊಂಡಿರುವ ಗಂಧದ ಗುಡಿ ಕಾಂತಾರ ಚಿತ್ರ ನಿರ್ಮಿಸಿದ್ದ ಬುಕ್ ಮೈ ಶೋ ರೇಟಿಂಗ್ ವಿಶ್ವದಾಖಲೆಯನ್ನು ಮುರಿದು ಹಾಕುವ ಸಾಧ್ಯತೆಗಳಿವೆ. ಕಾಂತಾರ ಚಿತ್ರ 18000 ಮತಗಳ ನಂತರ 10ಕ್ಕೆ 9 ಅಂಕಗಳನ್ನು ಪಡೆದುಕೊಂಡ ವಿಶ್ವದ ಪ್ರಥಮ ಚಿತ್ರ ಎಂಬ ದಾಖಲೆ ಬರೆದಿತ್ತು. ಸದ್ಯ 4 ಸಾವಿರ ಮತಗಳ ನಂತರವೂ ಔಟ್ ಆಫ್ ಔಟ್ ರೇಟಿಂಗ್ ಪಡೆದುಕೊಂಡಿರುವ ಗಂಧದ ಗುಡಿ 18000 ವೋಟಿಂಗ್ ನಂತರವೂ ಔಟ್ ಆಫ್ ಔಟ್ ಕಾಪಾಡಿಕೊಂಡರೆ ಕಾಂತಾರ ದಾಖಲೆಯನ್ನು ಮುರಿಯಲಿದೆ. ಸದ್ಯ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಸಹ ಹತ್ತಕ್ಕೆ ಹತ್ತು ಅಂಕ ನೀಡುತ್ತಿದ್ದು ಗಂಧದ ಗುಡಿ ಕಾಂತಾರ ರೆಕಾರ್ಡ್ ಮುರಿಯಲಿದೆಯಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











