James Success meet: 'ಜೇಮ್ಸ್' ಅದ್ಧೂರಿ ಸಕ್ಸಸ್ ಮೀಟ್: ಯಾವಾಗ? ಎಲ್ಲಿ?
'ಜೇಮ್ಸ್' ಸಿನಿಮಾ ಊಹಿಸಿದ್ದಕ್ಕಿಂತಲೂ ದುಪಟ್ಟು ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಅಪ್ಪು ಅಗಲಿಕೆಯ ನೋವನ್ನು ಮರೆಯಲೇನೋ ಎಂಬಂತೆ ತಂಡೋಪತಂಡವಾಗಿ ಅಭಿಮಾನಿಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದ್ದಾರೆ.
'ಜೇಮ್ಸ್' ಸಿನಿಮಾ ಮೊದಲ ದಿನವೇ ಗೆದ್ದು ಬೀಗಿದೆ. ಕಲೆಕ್ಷನ್ ಲೆಕ್ಕದಲ್ಲಿ ಈ ಹಿಂದಿನ ಎಲ್ಲ ಕನ್ನಡ ಸಿನಿಮಾಗಳ ರೆಕಾರ್ಡ್ ಅನ್ನು ಪುಡಿ ಮಾಡಿ ಮುಂದೆ ಸಾಗುತ್ತಿದೆ.
'ಜೇಮ್ಸ್' ಸಿನಿಮಾ ಚಿತ್ರಮಂದಿರಗಳ ಗಳಿಕೆಯಲ್ಲೇ ನೂರು ಕೋಟಿ ಕಲೆಕ್ಷನ್ ಗುರಿಯನ್ನು ಕೆಲವೇ ದಿನಗಳಲ್ಲಿ ದಾಟಲಿದೆ ಎಂಬ ಲೆಕ್ಕಾಚಾರ ಚಿತ್ರತಂಡದ್ದು, ಸ್ವತಃ ನಿರ್ಮಾಪಕರೇ ಹೇಳಿರುವಂತೆ ಏಳು ಅಥವಾ ಎಂಟನೇ ದಿನದಲ್ಲಿ ಸಿನಿಮಾವು ನೂರು ಕೋಟಿ ಕಲೆಕ್ಷನ್ ದಾಟಲಿದೆ.
ಸಿನಿಮಾ ಬಹುದೊಡ್ಡ ಯಶಸ್ಸಾಗಿರುವ ಕಾರಣ ಸಿನಿಮಾದ ಸಕ್ಸಸ್ ಮೀಟ್ ಅನ್ನು ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಿರ್ಮಾಪಕರು ಸಿನಿಮಾದ ಸಕ್ಸಸ್ ಮೀಟ್ ಅನ್ನು ಆಯೋಜಿಸುವುದಾಗಿ ಹೇಳಿದ್ದಾರೆ.

ಪ್ರೀ ರಿಲೀಸ್ ಇವೆಂಟ್ ಹೊಸಪೇಟೆಯಲ್ಲಿ ನಡೆಯಬೇಕಿತ್ತು
'ಜೇಮ್ಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಆ ಕಾರ್ಯಕ್ರಮ ಅಸಲಿಗೆ ಹೊಸಪೇಟೆಯಲ್ಲಿ ನಡೆಯಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದಾಗಿ ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈಗ 'ಜೇಮ್ಸ್' ಸಿನಿಮಾದ ಸಕ್ಸಸ್ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿಯೆ ನಡೆಸಲು ಚಿತ್ರತಂಡ ಸಜ್ಜಾಗಿದೆ.

ಹೊಸಪೇಟೆಯಲ್ಲಿ ಸಕ್ಸಸ್ ಮೀಟ್: ಕಿಶೋರ್
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ''ಜೇಮ್ಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಹೇಳಿಬಿಟ್ಟಿದ್ದಾರೆ ಸಕ್ಸಸ್ ಮೀಟ್ ಅನ್ನು ಹೊಸಪೇಟೆಯಲ್ಲಿ ಮಾಡುತ್ತೇವೆ ಎಂದು. ಅಂತೆಯೇ ನಾವು ಸಿನಿಮಾ 25ನೇ ದಿನ ಪೂರೈಸಿದ ಬಳಿಕ ನಾವು ಹೊಸಪೇಟೆಯಲ್ಲಿಯೇ ಸಕ್ಸಸ್ ಮೀಟ್ ಮಾಡುತ್ತೇವೆ. ಶಿವಣ್ಣನವರು ಈಗ ಚಿತ್ರೀಕರಣದಲ್ಲಿದ್ದಾರೆ ಅವರು ಚಿತ್ರೀಕರಣ ಮುಗಿಸಿ ಬಂದ ಬಳಿಕ ಅವರೊಟ್ಟಿಗೆ ಮಾತನಾಡಿ ಒಂದು ದಿನಾಂಕ ಘೋಷಿಸುತ್ತೇವೆ'' ಎಂದಿದ್ದಾರೆ.

ಅಭಿಮಾನಿಗಳಿಗೆ ತೃಪ್ತಿ ಆಗಿದೆ: ಕಿಶೋರ್
ಸಿನಿಮಾಕ್ಕೆ ಬರುತ್ತಿರುವ ಅದ್ಭುತ ರೆಸ್ಪಾನ್ಸ್ ಬಗ್ಗೆ ಮಾತನಾಡಿರುವ ಕಿಶೋರ್ ಪತ್ತಿಕೊಂಡ, ''ಸಿನಿಮಾಕ್ಕೆ ಭಾರಿ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ದ್ವಿತೀಯಾರ್ಧದಲ್ಲಿ ಒಂದು ಹಾಡು ಇರಬೇಕಿತ್ತು ಎಂದು ಕೆಲವರು ಹೇಳಿದ್ದಾರೆ ಆದರೆ ಪುನೀತ್ ಅವರು ಅಗಲಿದ ಸಮಯದಲ್ಲಿಯೇ ನಾವು ಹೇಳಿದ್ದೆವು, ಸಿನಿಮಾದ ಹಾಡು ಬಾಕಿ ಇತ್ತು ಅದನ್ನು ಕೈ ಬಿಡುತ್ತಿದ್ದೇವೆ ಎಂದು. ಆದರೂ ಸಿನಿಮಾ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿಲ್ಲ. ಅವರಿಗೆ ಸಿನಿಮಾ ಇಷ್ಟವಾಗಿದೆ. ಸಿನಿಮಾದಲ್ಲಿ ಅಪ್ಪು ಅವರು ಹಿಂದೆಂದಿಗಿಂತಲೂ ಸುಂದರವಾಗಿ ಕಾಣ್ತಿದ್ದಾರೆ. ಗ್ಲಾಮರಸ್ ಆಗಿ ಕಾಣ್ತಿದ್ದಾರೆ, ಫಿಟ್ ಆಗಿಯೂ ಕಾಣ್ತಿದ್ದಾರೆ ಎಂದು ಹೇಳುತ್ತಿದ್ದಾರೆ'' ಎಂದಿದ್ದಾರೆ.

ಭರ್ಜರಿ ಕಲೆಕ್ಷನ್ ಮಾಡಿರುವ 'ಜೇಮ್ಸ್'
'ಜೇಮ್ಸ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಎರಡನೇ ದಿನಕ್ಕೆ 50 ಕೋಟಿ ರುಪಾಯಿಗೂ ಹೆಚ್ಚು ಕಲೆಕ್ಷನ್ ಅನ್ನು ಕರ್ನಾಟಕ ಒಂದರಲ್ಲಿಯೇ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂಬ ಲೆಕ್ಕಾಚಾರ ನಿರ್ಮಾಪಕರದ್ದು. ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕು ಇತರೆ ಹಕ್ಕುಗಳಿಂದ ಬಂದಿರುವ ಮೊತ್ತ ಜೋಡಿಸಿದರೆ ಈಗಾಗಲೇ 'ಜೇಮ್ಸ್' ಸಿನಿಮಾ ನೂರು ಕೋಟಿ ಗಳಿಕೆಯನ್ನು ದಾಟಿದೆ. ಸಿನಿಮಾದಲ್ಲಿ ಪುನೀತ್ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಚೇತನ್ ನಿರ್ದೇಶನದ ಈ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ.


Click it and Unblock the Notifications











