ಪುನೀತ್ 'ಜೇಮ್ಸ್' ಚಿತ್ರದಿಂದ ನಿಶಾ ಗಾಯಕವಾಡ್‌ನನ್ನು ಪರಿಚಯಿಸಿದ ಚಿತ್ರತಂಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕರ್ನಾಟಕದ ನಾನಾಭಾಗಗಳಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾತಂಡ ಈಗಾಗಲೇ ಸಾಕಷ್ಟು ಮೇಕಿಂಗ್ ಫೋಟೋಗಳು ವೈರಲ್ ಆಗಿವೆ.
ಅಂದಹಾಗೆ ಚಿತ್ರದಲ್ಲಿ ಪವರ್ ಸ್ಟಾರ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್ ಮತ್ತು ಪುನೀತ್ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಿದೆ. ಸೂಪರ್ ಹಿಟ್ ರಾಜಕುಮಾರ ಸಿನಿಮಾ ಬಳಿಕ ಪ್ರಿಯಾ ಆನಂದ್ ಎರಡನೇ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸುತ್ತಿದ್ದಾರೆ.
ಅಂದಹಾಗೆ ಚಿತ್ರದಿಂದ ಇಂದು ವಿಶೇಷ ಪಾತ್ರವನ್ನು ಪರಿಚಯಿಸಿದೆ ಸಿನಿಮಾತಂಡ. ಚಿತ್ರದ ಪ್ರಮುಖ ಪಾತ್ರಧಾರಿ ನಿಶಾ ಗಾಯಕವಾಡ್ ಅವರನ್ನು ಸಿನಿಮಾತಂಡ ಪರಿಚಯ ಮಾಡಿದೆ. ಅಂದಹಾಗೆ ನಿಶಾ ಗಾಯಕವಾಡ್ ಮತ್ಯಾರು ಅಲ್ಲ ಚಿತ್ರದ ನಾಯಕಿ ಪ್ರಿಯಾ ಆನಂದ್. ಇಂದು ನಟಿ ಪ್ರಿಯಾ ಆನಂದ್ ಅವರಿಗೆ ಹುಟ್ಟುಹಬ್ಬ ಸಂಭ್ರಮ. ವಿಶೇಷ ದಿನದ ಅಂಗವಾಗಿ ಜೇಮ್ಸ್ ಸಿನಿಮಾತಂಡ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಸರ್ಪ್ರೈಸ್ ನೀಡಿದೆ.

ಜೇಮ್ಸ್ ಸಿನಿಮಾದಲ್ಲಿ ಪ್ರಿಯಾ ನಿಶಾ ಗಾಯಕವಾಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ನಲ್ಲಿ ಪ್ರಿಯಾ ವಯೋಲಿನ್ ನುಡಿಸುವುದರಲ್ಲಿ ತನ್ಮಯರಾಗಿದ್ದಾರೆ. ಕೂಲ್ ಆಗಿರುವ ಈ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಅಂದ ಹಾಗೆ ಪ್ರಿಯಾ ನಟನೆಯ ಮೂರನೇ ಸಿನಿಮಾ ಇದಾಗಿದೆ. ಸೂಪರ್ ಹಿಟ್ ರಾಜಕುಮಾರ ಬಳಿಕ ಪ್ರಿಯಾ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಇದೀಗ ಜೇಮ್ಸ್ ಮೂಲಕ ಮತ್ತೆ ಕನ್ನಡಗರ ಮುಂದೆ ಬರಲು ಸಜ್ಜಾಗಿದ್ದಾರೆ.
ಕನ್ನಡದ ಜೇಮ್ಸ್ ಸಿನಿಮಾ ಜೊತೆಗೆ ನಟಿ ಪ್ರಿಯಾ, ತಮಿಳಿನ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಶಾ ಗಾಯಕವಾಡ್ ಆಗಿ ಕನ್ನಡ ಅಭಿಮಾನಿಗಳ ಮುಂದೆ ಬರಲು ಪ್ರಿಯಾ ಕೂಡ ಉತ್ಸುಕರಾಗಿದ್ದಾರೆ. ಅಂದಹಾಗೆ ಎಲ್ಲವೂ ಅಂದುಕೊಂಡಂತೆ ಆದರೆ ಜೇಮ್ಸ್ ಈ ವರ್ಷವೇ ತೆರೆಗೆ ಬಂದರೂ ಅಚ್ಚರಿ ಇಲ್ಲ.
ಜೇಮ್ಸ್ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ತಮಿಳಿನ ಸ್ಟಾರ್ ನಟ ಶರತ್ ಕುಮಾರ್, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು, ಚಿಕ್ಕಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಶರತ್ ನೆಗಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಶರತ್ ಮೊದಲ ಬಾರಿಗೆ ಕನ್ನಡದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಪುನೀತ್ ಎದುರು ತೊಡೆತಟ್ಟಿದ್ದಾರೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಶರತ್ ಕುಮಾರ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೂಪರ್ ಹಿಟ್ 'ರಾಜಕುಮಾರ' ಸಿನಿಮಾದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಇದೀಗ ಮತ್ತೆ 'ಜೇಮ್ಸ್' ಮೂಲಕ ಮತ್ತೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪವರ್ ಸ್ಟಾರ್ ಈ ಸಿನಿಮಾ ಮುಗಿಸುತ್ತಿದ್ದಂತೆ ಲೂಸಿಯ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ದ್ವಿತ್ವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











