ಕೊನೆ ಫೋಟೊ ಹಾಕಿ ತಲೆಗೆ ಹುಳ ಬಿಟ್ಟಿದ್ರು ಅಪ್ಪು; 'ಗಂಧದ ಗುಡಿ' ಅಲ್ಲ ಇದು ಪಕ್ಕಾ ಆ ಚಿತ್ರ ಎಂದಿದ್ರು ಫ್ಯಾನ್ಸ್
ಪುನೀತ್ ರಾಜ್ ಕುಮಾರ್ ತಮ್ಮ ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ವರ್ಷ ಸಮೀಪಿಸುತ್ತಿದೆ. ನಾಡಿದ್ದು ( ಅಕ್ಟೋಬರ್ 29 ) ಅಪ್ಪು ಇಹಲೋಕ ತ್ಯಜಿಸಿ ವರ್ಷ ತುಂಬಲಿದೆ. ಹೀಗೆ ಪುನೀತ್ ರಾಜ್ ಕುಮಾರ್ ಒಂದನೇ ವರ್ಷದ ಪುಣ್ಯಸ್ಮರಣೆ ಸಮೀಪಿಸುತ್ತಿರುವುದನ್ನು ನೆನೆದ ಅಪ್ಪು ಅಭಿಮಾನಿಗಳು ವರ್ಷದ ಹಳೆಯ ಕಹಿ ಘಟನೆ ನೆನೆದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಹಾಗೂ ನೆಚ್ಚಿನ ನಟನನ್ನು ಕಳೆದುಕೊಂಡ ಕಿಚ್ಚಿನಲ್ಲಿ ದೇವರಿಗೆ ಶಾಪ ಹಾಕುತ್ತಿದ್ದಾರೆ.
ಅಪ್ಪು ತಮ್ಮಿಂದ ದೂರಾಗಿ ವರ್ಷ ಕಳೆಯಿತು ಎಂಬ ನೋವು ಒಂದೆಡೆಯಾದರೆ, ಅಪ್ಪು ಅಭಿನಯದ ಗಂಧದಗುಡಿ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿ ಮತ್ತೊಂದೆಡೆ. ಗಂಧದಗುಡಿ ಅಪ್ಪು ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡುವುದರ ಜತೆಗೆ ಕೊನೆಯ ಚಿತ್ರ ಎಂಬ ಕಾರಣ ಬೇಸರ ಮತ್ತು ನೋವನ್ನು ದುಪ್ಪಟ್ಟು ಮಾಡಿದೆ.
ಇನ್ನು ಅಪ್ಪು ಅಭಿನಯದ ಹೊಸ ಚಿತ್ರದ ಬಿಡುಗಡೆಯ ಸಂಭ್ರಮಾಚರಣೆ ಆಚರಿಸುವ ಅವಕಾಶ ಮತ್ತೆ ಲಭಿಸುವುದಿಲ್ಲ ಎಂಬ ಕಾರಣಕ್ಕೆ ಪುನೀತ್ ಫ್ಯಾನ್ಸ್ ಗಂಧದ ಗುಡಿ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ದೊಡ್ಡ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ಗಂಧದಗುಡಿ ನಾಳೆ ( ಅಕ್ಟೋಬರ್ 28 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಇಂದಿಗೆ ವರ್ಷದ ಹಿಂದೆ ಅಪ್ಪು ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ. ಇದು ಅಪ್ಪು ಮಾಡಿದ್ದ ಕೊನೆಯ 'ಫೋಟೋ ಟ್ವೀಟ್'. ಅದೂ ಸಹ ತಮ್ಮ ಕನಸಿನ ಗಂಧದಗುಡಿ ಡಾಕ್ಯು ಚಿತ್ರದ ಬಗ್ಗೆಯೇ.

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು ಎಂದು ಹುಳ ಬಿಟ್ಟಿದ್ದ ಅಪ್ಪು
ಕಳೆದ ವರ್ಷ ಅಕ್ಟೋಬರ್ 27ರ ಸಂಜೆ 6.02ಕ್ಕೆ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ತಮ್ಮ ಮುಂದಿನ ಚಿತ್ರವೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅಂಡರ್ ವಾಟರ್‌ನಲ್ಲಿ ಅಮೋಘವರ್ಷ ಜತೆ ತಾವಿದ್ದ ಪೋಸ್ಟರ್ ಹಂಚಿಕೊಂಡಿದ್ದ ಅಪ್ಪು "ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ." ಎಂದು ಬರೆದುಕೊಂಡು ಶೀರ್ಷಿಕೆ ತಿಳಿಸದೇ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ರು. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರದ ಶೀರ್ಷಿಕೆ ಅನಾವರಣಗೊಳಿಸುವುದಾಗಿಯೂ ಅಪ್ಪು ತಿಳಿಸಿದ್ರು. ಹೀಗೆ ಶೀರ್ಷಿಕೆ ಇಲ್ಲದ ಪೋಸ್ಟರ್ ಕಂಡು ಚಿತ್ರ ಯಾವುದಿರಬಹುದು ಎಂದು ಸಿನಿರಸಿಕರು ಹಾಗೂ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.

ಗಂಧದ ಗುಡಿ ಬದಲು ಹೆಚ್ಚಾಗಿ ಊಹಿಸಿದ್ದು ಈ ಚಿತ್ರವನ್ನು!
ಹೀಗೆ ಅಪ್ಪು ದಶಕಗಳ ಹಿಂದೆ ಕತೆಯೊಂದು ಹುಟ್ಟಿತ್ತು ಎಂದು ಬರೆದುಕೊಂಡಿದ್ದನ್ನು ಕಂಡ ನೆಟ್ಟಿಗರು ಈ ಹಿಂದೆ ಬಂದಿದ್ದ ಚಿತ್ರವೊಂದರ ಆಧಾರದ ಮೇಲೆ ಅಪ್ಪು ಹೊಸ ಚಿತ್ರ ಮಾಡುತ್ತಿರುವುದು ಖಚಿತವೆಂದು ಚಿತ್ರದ ಶೀರ್ಷಿಕೆ ಊಹಿಸಲು ಆರಂಭಿಸಿದ್ದರು. ಹೀಗೆ ಶೀರ್ಷಿಕೆ ಊಹಿಸಿದ್ದವರ ಪೈಕಿ ಅನೇಕರು ಕಾಮೆಂಟ್ ಮಾಡಿ ಉಲ್ಲೇಖಿಸಿದ್ದು ಅಣ್ಣಾವ್ರ ಅಭಿನಯದ ಒಂದು ಮುತ್ತಿನ ಕಥೆ ಚಿತ್ರವನ್ನು. ಹೌದು, ಅಪ್ಪು ಒಂದು ಮುತ್ತಿನ ಕಥೆ ರೀತಿಯ ಚಿತ್ರ ಮಾಡಿದ್ದಾರೆ ಎಂದು ಅಂಡರ್ ವಾಟರ್ ಚಿತ್ರ ನೋಡಿದ ಪ್ರೇಕ್ಷಕರು ಊಹಿಸಿದ್ದರು. ಇನ್ನೂ ಕೆಲ ನೆಟ್ಟಿಗರು ಇದು ಗಂಧದ ಗುಡಿ ಎಂದು ಸರಿಯಾಗಿ ಊಹಿಸಿದ್ದರು.

ಕನಸಿನ ಕೂಸಿನ ಹೆಸರು ತಿಳಿಸುವ ಮುನ್ನವೇ ಮರೆಯಾದ್ರು ಅಪ್ಪು
ಇನ್ನು ಅಪ್ಪು ತುಂಬಾ ಇಷ್ಟಪಟ್ಟು ಮಾಡಿದ್ದ ಈ ಚಿತ್ರದ ಶೀರ್ಷಿಕೆಯನ್ನು ಕನ್ನಡ ರಾಜ್ಯೋತ್ಸವದ ದಿನ ಘೋಷಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಕನ್ನಡ ರಾಜ್ಯೋತ್ಸವಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಅಪ್ಪು ನಿಧನ ಹೊಂದಿದರು. ತಮ್ಮ ಕನಸಿನ ಕೂಸಿನ ಹೆಸರೇನೆಂದು ಅಭಿಮಾನಿಗಳಿಗೆ ತಿಳಿಸುವ ಮುನ್ನವೇ ಅಪ್ಪು ಮರೆಯಾದರು.


Click it and Unblock the Notifications











