ಪುನೀತ್ ಹೊಸ ಸಿನಿಮಾದ ಹೆಸರು ಘೋಷಣೆ, ಕುತೂಹಲ 'ದುಪ್ಪಟ್ಟು'
ನಟ ಪುನೀತ್ ರಾಜ್‌ಕುಮಾರ್ ನಿರ್ದೇಶಕ ಪವನ್ ಕುಮಾರ್ ಒಂದಾಗಿ ಸಿನಿಮಾ ಮಾಡುವುದು ಖಾತ್ರಿಯಾಗಿದೆ. ಈ ಸಿನಿಮಾದ ಹೆಸರು ಇಂದು ಘೋಷಣೆ ಆಗಿದ್ದು, ಸಿನಿಮಾದ ಹೆಸರು ಭಾರಿ ಕುತೂಹಲ ಕೆರಳಿಸಿದೆ.
ಚಿತ್ರತಂಡವು ನಿನ್ನಯೇ ಹೇಳಿದ್ದಂತೆ ಇಂದು 11:46 ಕ್ಕೆ ಸಿನಿಮಾದ ಹೆಸರು ಘೋಷಣೆ ಮಾಡಿದ್ದಾರೆ. ಸಿನಿಮಾದ ಹೆಸರು 'ದ್ವಿತ್ವ' ಎಂದಾಗಿದ್ದು, ಹೆಸರು ಬಹಳ ಭಿನ್ನವಾಗಿದೆ. ಪೋಸ್ಟರ್‌ನಲ್ಲಿ ಪುನೀತ್ ಮುಖ ಒಡೆದ ಸ್ಥಿತಿಯಲ್ಲಿದ್ದು ಈ ಸಿನಿಮಾವು ಸೈಕಲಾಜಿಕಲ್ ಥ್ರಿಲ್ಲರ್ ಆಗಿರಲಿದೆ ಎಂದಿದ್ದಾರೆ ನಟ ಪುನೀತ್ ರಾಜ್‌ಕುಮಾರ್.
'ದ್ವಿತ್ವ' ಎಂದರೆ ಎರಡು ರೀತಿಯ ವ್ಯಕ್ತಿತ್ವ ಎಂದು ಈ ಸಿನಿಮಾದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಬ್ಬನೇ ವ್ಯಕ್ತಿಯ ಎರಡು ಮುಖ ಅಥವಾ ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿ ಹೀಗೆ ಭಿನ್ನ ಅರ್ಥಗಳನ್ನು ಸೂಸುತ್ತಿದೆ ಈ ಹೆಸರು.

ಸಿನಿಮಾದ ಬಗ್ಗೆ ಎಫ್‌ಯುಸಿ ಪೇಜ್‌ನಲ್ಲಿ ಪವನ್ ಕುಮಾರ್ ಕಿರು ಮಾಹಿತಿ ಹಂಚಿಕೊಂಡಿದ್ದು ಸಿನಿಮಾವು 2022 ಕ್ಕೆ ಬಿಡುಗಡೆ ಆಗಲಿದೆ ಎಂದಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಪೂರ್ಣಚಂದ್ರ ತೇಜಸ್ವಿ ನೀಡುತ್ತಿದ್ದಾರೆ. ನಿರ್ಮಾಣ ಜವಾಬ್ದಾರಿ ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಅವರದ್ದು.
Recommended Video
ಪವನ್ ಕುಮಾರ್ ಈ ಹಿಂದೆ ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ನೀಡಿದ್ದಾರೆ. ಈ ಬಾರಿಯೂ ಪುನೀತ್ ಅವರನ್ನಿಟ್ಟುಕೊಂಡು ಅದೇ ಮಾದರಿಯ ಕತೆ ಹೇಳಲು ಹೊರಟಿದ್ದಾರೆ. ಪುನೀತ್ ಸಹ ತಮ್ಮ ಮಾಮೂಲಿ ಕಮರ್ಷಿಯಲ್ ಸಿನಿಮಾ ಗಡಿಯಿಂದ ಹೊರಗೆ ಬಂದು ಪವನ್ ಅಂಥಹಾ ತಾಂತ್ರಿಕ ನಿರ್ದೇಶಕರೊಟ್ಟಿಗೆ ಕೈ ಜೋಡಿಸುವುದು ಉತ್ತಮ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾಕ್ಕಾಗಿ ಪುನೀತ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಎಲ್ಲ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ.


Click it and Unblock the Notifications











