ಪುನೀತ್ ಎದೆ ನೋಡಿ ಆಗಲೇ ಭವಿಷ್ಯ ನುಡಿದಿದ್ದೆ: ಮಾವ ಚಿನ್ನೇಗೌಡ
ಪುನೀತ್ ರಾಜ್‌ಕುಮಾರ್ ಹುಟ್ಟುತ್ತಲೇ ಸ್ಟಾರ್. ಆರು ತಿಂಗಳ ಮಗುವಿದ್ದಾಗ ಪುನೀತ್ ರಾಜ್‌ಕುಮಾರ್ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಬಾಲನಟನಾಗಿ ಅವರ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಮಾಸ್ಟರ್ ಲೋಹಿತ್ ಹೆಸರಿನಿಂದ ನಟಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಆಗಲೆ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡಿದ್ದ ಅದ್ಭುತ ಕಲಾವಿದ. ಅಪ್ಪು ಎಳವೆಯಲ್ಲಿಯೇ ಸ್ಟಾರ್. ಕುಟುಂಬದವರು, ಸ್ನೇಹಿತರು ಎಲ್ಲರಿಗೂ ಅಪ್ಪು ಅಚ್ಚು-ಮೆಚ್ಚು.
ಅಪ್ಪುವನ್ನು ಎಳವೆಯಲ್ಲಿ ಆಡಿ ಬೆಳೆಸಿದವರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರ ಚಿನ್ನೇಗೌಡ ಸಹ ಒಬ್ಬರು. ನಿರ್ಮಾಪಕರಾಗಿ ದೊಡ್ಡ ಯಶಸ್ಸು ಗಳಿಸಿದ ಚಿನ್ನೇಗೌಡರು ಅಪ್ಪುವಿನ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಇಂದು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಇಂದು ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಚಿನ್ನೇಗೌಡರು ಭಾಗಿಯಾಗಿದ್ದಾರೆ. ಅಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಚಿನ್ನೇಗೌಡರು, ''ಅಪ್ಪುವನ್ನು ಇದೇ ಕೈಯಿಂದ ಆಡಿ ಬೆಳೆಸಿದ್ದೇನೆ. ಅವನಿಗೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ಹೆಗಲೆ ಮೇಲೆ ಹೊತ್ತು ಓಡಾಡಿದ್ದೇನೆ'' ಎಂದಿದ್ದಾರೆ.
''ಅವನು ಚಿಕ್ಕವನಿದ್ದಾಗ ಅವನಿಗೆ ಸ್ನಾನ ಮಾಡಿಸಬೇಕಾದರೆ ಅವನ ಎದೆಯ ಭಾಗ ನೋಡಿ ನಾನು ಅವನಿಗೆ ಹೇಳಿದ್ದೆ, ನೀನು ದೊಡ್ಡ ಕಲಾವಿದ ಆಗುತ್ತೀಯ ಅಂತ. 'ಅಯ್ಯೋ ನಾನು ನಟ ಆಗಲ್ಲಪ್ಪ' ಅಂತಿದ್ದ ಅಪ್ಪು. ನಾನು ಹೇಳ್ತಿದ್ದೆ, 'ನೀನು ದೊಡ್ಡ ನಟನಾದ ಮೇಲೆ ನನಗೆ ಕಾಲ್‌ಶೀಟ್ ಕೊಡ್ತೀಯ ತಾನೆ ಎಂದು ಕೇಳ್ತಿದ್ದೆ' ಎಂದು ಚಿನ್ನೇಗೌಡರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
''ಹರೀಶ್ಚಂದ್ರನ ಮಗ ಲೋಹಿತ್, ಅದು ಅಲ್ಪಾಯುಷಿ ಹೆಸರು ಎಂಬ ಕಾರಣಕ್ಕೆ ಎಲ್ಲರೂ ಸೇರಿಕೊಂಡು ಆ ಹೆಸರು ಬೇಡವೆಂದು ನಿರ್ಣಯಿಸಿ ದಸರಿಘಟ್ಟ ಚೌಡೇಶ್ವರಿ ದೇವಿಯನ್ನು ಕರೆಸಿ ಪೂಜೆ ಮಾಡಿ ಅವರು ಸೂಚಿಸಿದ ಪುನೀತ್ ಎಂಬ ಹೆಸರು ಇಟ್ಟೆವು. ಅದೇ ದಿನ ಲೋಹಿತ್ ಫಾರ್ಮ್ ಹೆಸರನ್ನು ಪುನೀತ್ ಫಾರ್ಮ್ ಎಂದು ಬದಲಾಯಿಸಿದೆವು. ಆ ಹೆಸರನ್ನು ಸೂಚಿಸಿದ್ದು ಚೌಡೇಶ್ವರಿ ದೇವಿಯೇ'' ಎಂದಿದ್ದಾರೆ ಚಿನ್ನೇಗೌಡರು.
''ಎಲ್ಲರೂ ಕೇಳುತ್ತಿದ್ದರು, ರಾಜ್‌ಕುಮಾರ್ ನಂತರ ಯಾರು ಎಂದು. ಸ್ವತಃ ರಾಜ್‌ಕುಮಾರ್ ಬಯಸುತ್ತಿದ್ದರು, ನನ್ನನ್ನು ಮೀರಿಸುವ ಕಲಾವಿದರು ಬರಬೇಕು ಎಂದು. ಅದಕ್ಕೆ ತಕ್ಕನಂತೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಎಲ್ಲಕ್ಕಿಂತಲೂ ಮಿಗಿಲಾಗಿ ಪುನೀತ್ ರಾಜ್‌ಕುಮಾರ್ ಬಂದರು. ಆದರೆ ಅಷ್ಟೇ ಬೇಗ ಮರೆಯಾಗಿಬಿಟ್ಟರು'' ಎಂದಿದ್ದಾರೆ.
ಪುನೀತ್ ನಮನ ಕಾರ್ಯಕ್ರಮ, ಅಪ್ಪುವಿನ ಅಂತಿಮ ದರ್ಶನ ಕುರಿತಾಗಿ ಮಾತನಾಡಿದ ಚಿನ್ನೇಗೌಡರು ''ಯಾರಿಗೆ ಸಿಗುತ್ತದೆ ಈ ಪ್ರೀತಿ. ಎಷ್ಟು ಕೋಟಿ ಹಣ ಕೊಟ್ಟರು ಸಿಗದ ಗೌರವ, ಆದರಗಳು ಇವು. ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಏನಿದು ನಮ್ಮ ಅಪ್ಪು, ನಮ್ಮ ಹುಡುಗ ಇಷ್ಟು ದೊಡ್ಡ ಮನುಷ್ಯನಾಗಿದ್ದನೇ ಎಂದು ಆಶ್ಚರ್ಯವಾಗುತ್ತದೆ. ಜೊತೆಗೆ ಹೆಮ್ಮೆಯೂ ಆಗುತ್ತದೆ. ಅವನ ಅಗಲಿಕೆಯ ನೋವನ್ನು ತಾಳಿಕೊಳ್ಳುವ ಶಕ್ತಿಯನ್ನು ದೇವರು ಅವರ ಅಭಿಮಾನಿಗಳಿಗೆ, ಕುಟುಂಬದವರಿಗೆ ಕರುಣಿಸಲಿ'' ಎಂದರು.
ಪಾರ್ವತಮ್ಮ ರಾಜ್‌ಕುಮಾರ್ ಸಹೋದರರಾಗಿರುವ ಚಿನ್ನೇಗೌಡರು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಚಿತ್ರರಂಗದ ಪ್ರತಿಭಾವಂತ ನಾಯಕ ನಟರಾದ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಇವರ ಮಕ್ಕಳು. ಶ್ರೀಮುರಳಿ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂದವ್ಯವಿತ್ತು. ಇಬ್ಬರೂ ಒಟ್ಟಿಗೆ ಜಿಮ್‌ಗೆ ಹೋಗುತ್ತಿದ್ದರು. ಶಿವಣ್ಣನ ಜೊತೆ ಶ್ರೀಮುರಳಿ ಸಿನಿಮಾ ಮಾಡಿದ್ದರು, ಪುನೀತ್ ಜೊತೆಯೂ ಸಿನಿಮಾ ಮಾಡುವ ಆಸೆಯಿತ್ತು. ಆದರೆ ನೆರವೇರಲಿಲ್ಲ.


Click it and Unblock the Notifications











