'ವೀರ ಕನ್ನಡಿಗ'ನಿಗೆ 17 ವರ್ಷ ತುಂಬಿದ ಸಂತಸ: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ
'ವೀರ ಕನ್ನಡಿಗ' ಕನ್ನಡಿಗರು ಈ ಸಿನಿಮಾ ಮರೆಯಲು ಸಾಧ್ಯಾನೆ ಇಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಈ ಸಿನಿಮಾ 2004ರಲ್ಲಿ ರಿಲೀಸ್ ಆಗಿದೆ. ಪವರ್ ಸ್ಟಾರ್ ನಟನೆಯ 3ನೇ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಪುನೀತ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದರು.
'ವೀರ ಕನ್ನಡಿಗ' ತೆಲುಗಿನ ಖ್ಯಾತ ನಿರ್ದೇಶಕ ಮೆಹರ್ ರಮೇಶ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಮೆಹರ್ ರಮೇಶ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಈ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದೆ. ತೆಲುಗಿನಲ್ಲಿ ಜೂ.ಎನ್ ಟಿ ಆರ್ ನಾಯಕನಾಗಿ ಮಿಂಚಿದ್ದಾರೆ.
ಅಂದಹಾಗೆ ಈಗ ಯಾಕೆ ಈ ಸಿನಿಮಾದ ಬಗ್ಗೆ ಮಾತು ಅಂತೀರ? ಕನ್ನಡ ಪ್ರೇಕ್ಷಕರು ಮೆಚ್ಚಿದ ವೀರ ಕನ್ನಡಿಗ ಸಿನಿಮಾ ರಿಲೀಸ್ ಆಗಿ 17 ವರ್ಷಗಳು ಕಳೆದಿವೆ. ಹೌದು, 17 ವರ್ಷಗಳ ಹಿಂದೆ ಇದೇ ದಿನ ವೀರ ಕನ್ನಡಿಗ ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬಂದಿತ್ತು.

ಅಪ್ಪು ಮತ್ತು ಅಭಿ ಸಿನಿಮಾಗಳ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದ ಅಣ್ಣವ್ರಾ ಮಗನ ವೀರ ಕನ್ನಡಿಗ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರಕ್ಕೆ ಟಾಲಿವುಡ್ ಸಂಗೀತ ನಿರ್ದೇಶಕ ಚಕ್ರಿ ಸಂಗೀತ ಸಂಯೋಜನೆ ಮಾಡಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿರ್ದೇಶಕ ಮೆಹರ್ ರಮೇಶ್, 'ನನ್ನ ಮೊದಲ ಸಿನಿಮಾಗೆ 17 ವರ್ಷ ತುಂಬಿದೆ. ಪುನೀತ್ ರಾಜ್ ಕುಮಾರ್ ಜೊತೆ ಕೆಲಸ ಮಾಡಿರುವ ಅನುಭವ ಇನ್ನು ಹಸಿರಾಗೆ ಇದೆ' ಎಂದು ಹೇಳಿದ್ದಾರೆ.
ಅಪ್ಪು ಅಭಿಮಾನಿಗಳು ಚಿತ್ರದ ಪೋಸ್ಟರ್ ಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಮತ್ತೊಮ್ಮೆ ಈ ಕಾಂಬಿನೇಷನ್ ಒಂದಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗುವ ಜೊತೆಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಶತಮಾನೋತ್ಸವ ಆಚರಿಸಿಕೊಂಡಿತ್ತು.


Click it and Unblock the Notifications










