ತಮಿಳು ಸಿನಿಮಾದಲ್ಲಿ ನಟಿಸಲು ಷರತ್ತು ವಿಧಿಸಿದ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಕನ್ನಡದ ಸ್ಟಾರ್ ನಟ. ಈವರೆಗೆ ಅವರು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿಲ್ಲ. ಹಾಗೆಂದು ಪರರಾಜ್ಯಗಳಲ್ಲಿ ಅವರಿಗೆ ಅಭಿಮಾನಿಗಳು ಇಲ್ಲವೆಂದೆಲ್ಲ. ಸಾಕಷ್ಟು ಮಂದಿ ಅಭಿಮಾನಿಗಳನ್ನು ನೆರೆಯ ರಾಜ್ಯಗಳಲ್ಲಿಯೂ ಹೊಂದಿದ್ದಾರೆ ಪುನೀತ್.
Recommended Video
ಪುನೀತ್ ರಾಜ್‌ಕುಮಾರ್ ಅವರು ಇಂದು ಅಮೆಜಾನ್ ಪ್ರೈಂ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅಲ್ಲಿ 'ನೀವು ತಮಿಳು ಸಿನಿಮಾದಲ್ಲಿ ಯಾವಾಗ ನಟಿಸುತ್ತೀರ?' ಎಂಬ ಪ್ರಶ್ನೆ ಪುನೀತ್‌ಗೆ ಎದುರಾಯಿತು.
ಪ್ರಶ್ನೆಗೆ ಉತ್ತರಿಸಿದ ಪುನೀತ್, 'ನನಗೆ ತಮಿಳಿನ ನಟ, ತಂತ್ರಜ್ಞರೆಂದರೆ ಬಹಳ ಗೌರವ ಇದೆ. ನಾನು ತಮಿಳು ಸಿನಿಮಾದಲ್ಲಿ ನಟಿಸಲು ಇಷ್ಟಪಡುತ್ತೇನೆ, ಆದರೆ ಆ ಸಿನಿಮಾ ಕನ್ನಡ, ತಮಿಳು ಎರಡೂ ಭಾಷೆಯಲ್ಲಿ ಒಟ್ಟಿಗೆ ನಿರ್ಮಾಣವಾದರೆ ಮಾತ್ರ ನಟಿಸುತ್ತೇನೆ' ಎಂದಿದ್ದಾರೆ.

ಮುಖ್ಯ ಪಾತ್ರವೇ ಬೇಕು ಎಂದೇನೂ ಇಲ್ಲ: ಪುನೀತ್ ರಾಜ್‌ಕುಮಾರ್
ಅದೇ ಸುದ್ದಿಗೋಷ್ಠಿಯಲ್ಲಿ, 'ಬಾಲಿವುಡ್ ಸಿನಿಮಾದಲ್ಲಿ ನಟಿಸಿ' ಎಂದು ಒಬ್ಬರು ಬೇಡಿಕೆ ಇಟ್ಟರು, ಇದಕ್ಕೆ ಉತ್ತರಿಸಿದ ಪುನೀತ್, 'ಕಲೆಗೆ ಗಡಿಗಳಿಲ್ಲ. ನಾನು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಸಹ ನನಗೆ ಇಷ್ಟವಿದೆ. ನನಗೆ ಮುಖ್ಯ ಪಾತ್ರವೇ ಬೇಕು ಎಂದೇನೂ ಇಲ್ಲ. ಒಳ್ಳೆಯ ಪಾತ್ರವಾದರೂ ಸಾಕು ನಾನು ನಟಿಸಲು ತಯಾರಾಗಿದ್ದೇನೆ' ಎಂದರು ಪುನೀತ್ ರಾಜ್‌ಕುಮಾರ್.

ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ 'ಯುವರತ್ನ'
ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಸಿನಿಮಾ ಕಳೆದ ವಾರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಿತ್ತು. ಇದೇ ಸಿನಿಮಾ ನಾಳೆ (ಏಪ್ರಿಲ್ 09) ರಿಂದ ಅಮೆಜಾನ್‌ನಲ್ಲಿ ಬಿಡುಗಡೆ ಆಗುತ್ತಿದೆ. 'ಯುವರತ್ನ' ಸಿನಿಮಾದ ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್‌ಗಳು ಸಹ ಮುಂದಿನ ದಿನಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಲಭ್ಯವಾಗಲಿವೆ.

ತೆಲುಗು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರ
ಪುನೀತ್ ರಾಜ್‌ಕುಮಾರ್ ಅವರು ಈವರೆಗೆ ಯಾವುದೇ ಪರಭಾಷೆ ಸಿನಿಮಾಗಳಲ್ಲಿ ನಟಿಸಿಲ್ಲ. ಅವರ ಕೆಲವು ಕನ್ನಡ ಸಿನಿಮಾಗಳು ಪರಭಾಷೆಗೆ ಡಬ್ ಆಗಿ ಬಿಡುಗಡೆ ಆಗಿದ್ದಿದೆ. ಶಿವರಾಜ್ ಕುಮಾರ್ ಅವರು ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ತೆಲುಗು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ ಸುದೀಪ್
ಕನ್ನಡದ ನಟ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪರಭಾಷೆಗಳಲ್ಲಿಯೂ ದೊಡ್ಡ ಅಭಿಮಾನಿವರ್ಗವನ್ನು ಸುದೀಪ್ ಹೊಂದಿದ್ದಾರೆ. ಇದೀಗ ಮೊದಲ ಬಾರಿಗೆ ಮಲಯಾಳಂ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ನಟ ಸುದೀಪ್.


Click it and Unblock the Notifications











