ಕನ್ನಡ ಕಡೆಗಣಿಸುತ್ತಿದ್ದ ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲು ಸೆಂಚುರಿ ಬಾರಿಸಿ ಪವರ್ ತೋರಿಸಿದ ಕನ್ನಡದ ನಟ ಪುನೀತ್!
ಮಲ್ಟಿಪ್ಲೆಕ್ಸ್.. ಲಕ್ಸುರಿಯಾಗಿ ಸಿನಿಮಾಗಳನ್ನು ವೀಕ್ಷಿಸುವ ಅನುಭವವನ್ನು ಪ್ರೇಕ್ಷಕರಿಗೆ ನೀಡಿದ ಚಿತ್ರಮಂದಿರಗಳ ಸಮೂಹ. ಹೆಚ್ಚಾಗಿ ಮಾಲ್‌ಗಳಲ್ಲಿ ಇರುವ ಈ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿ ನಾಲ್ಕರಿಂದ ಹತ್ತು, ಹನ್ನೆರಡವರೆಗೂ ಸಹ ಪರದೆಗಳು ಇರುತ್ತವೆ. ಈ ಬಹು ಪರದೆಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಒಂದೇ ಪರದೆಯಲ್ಲಿ ದಿನಕ್ಕೆ ಐದಾರು ಪ್ರದರ್ಶನಗಳು ನಡೆಯಲಿದ್ದು, ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಈ ಬಹು ಪರದೆ ಚಿತ್ರಮಂದಿರಗಳದ್ದೇ ಹವಾ ಆಗಿಬಿಟ್ಟಿದೆ. ಈ ಹಿಂದೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರ ನೋಡಲು ಬಯಸುತ್ತಿದ್ದ ಸಿನಿ ರಸಿಕರು ಈಗ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ನೋಡುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಕಾರಣದಿಂದಾಗಿಯೇ ಈ ಹಿಂದೆ ಹೌಸ್‌ಫುಲ್ ಬೀಳುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಬೀಗ ಬೀಳುತ್ತಿದೆ. ಒಂದೆಡೆ ಸಿಂಗಲ್ ಸ್ಕ್ರೀನ್‌ಗಳನ್ನು ಬಹು ಪರದೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದರೆ, ಇನ್ನೂ ಕೆಲವೆಡೆ ಚಿತ್ರಮಂದಿರಗಳನ್ನೇ ಮುಚ್ಚಲಾಗಿದೆ.

ಒಟ್ಟಿನಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಎಂಬಂತೆ ಇದ್ದ ಮಲ್ಟಿಪ್ಲೆಕ್ಸ್‌ಗಳು ಈಗ ಎಲ್ಲೆಡೆ ಹಬ್ಬಿವೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಕರಾವಳಿಯ ಮಂಗಳೂರು, ಹುಬ್ಬಳ್ಳಿ, ರಾಯಚೂರು ಹಾಗೂ ಕಲಬುರ್ಗಿ ನಗರಗಳಲ್ಲಿಯೂ ಸಹ ಮಲ್ಟಿಪ್ಲೆಕ್ಸ್‌ಗಳು ತಲೆ ಎತ್ತಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೀಗೆ ಹೆಮ್ಮರವಾಗಿ ಬೆಳೆಯುತ್ತಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಹಿಂದೆ ಕನ್ನಡ ಚಿತ್ರಗಳಿಗೆ ಹೆಚ್ಚು ಶೋಗಳನ್ನು ಕೊಡುವುದಿಲ್ಲ ಹಾಗೂ ಕನ್ನಡ ಚಿತ್ರಗಳೆಂದರೆ ಕಡೆಗಣಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದ್ದವು ಹಾಗೂ ಗಲಾಟೆಗಳು ನಡೆದ ಉದಾಹರಣೆಗಳೂ ಸಹ ಇವೆ.
ಈಗ ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರದರ್ಶನ ಸಿಕ್ಕರೂ ಹಿಂದೆ ಈ ರೀತಿಯ ಪ್ರಾತಿನಿದ್ಯತೆ ಸಿಗುತ್ತಿರಲಿಲ್ಲ ಎಂಬುದು ಸತ್ಯಕ್ಕೆ ಹತ್ತಿರವಾದ ಮಾತು. ಈ ರೀತಿ ಕನ್ನಡ ಚಿತ್ರಗಳೆಂದರೆ ಅಸಡ್ಡೆ ಮಾಡುತ್ತಿದ್ದ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಚಿತ್ರವೊಂದು ನೂರು ದಿನಗಳ ಕಾಲ ಪ್ರದರ್ಶನ ಕಂಡು ಕನ್ನಡ ಚಿತ್ರಗಳಿಗೆ ಬೇಡಿಕೆ ಹುಟ್ಟಿಕೊಳ್ಳುವಂತೆ ಮಾಡಿತ್ತು.
ಹೌದು, 2005ರಲ್ಲಿ ಬಿಡುಗಡೆಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ಕಾಂಬಿನೇಶನ್‌ನ ಆಕಾಶ್ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಸತತ ನೂರು ದಿನಗಳ ಕಾಲ ಪ್ರದರ್ಶನಗೊಂಡಿತ್ತು. ಈ ಚಿತ್ರ ಮಲ್ಟಿಪ್ಲೆಕ್ಸ್‌ನಲ್ಲಿ ಶತದಿನ ಪೂರೈಸಿದ ನಂತರ ಬಹು ಪರದೆಗಳಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹುಟ್ಟಿಕೊಂಡಿತು, ಕನ್ನಡ ಚಿತ್ರಗಳಿಗೆ ಹೆಚ್ಚು ಪ್ರದರ್ಶನಗಳನ್ನು ನೀಡಲಾರಂಭಿಸಲಾಯಿತು.
ಈ ವಿಷಯವನ್ನು ಆಕಾಶ್ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಮಹೇಶ್ ಬಾಬು ಅವರೇ ಕಳೆದ ವರ್ಷ 'ಕನ್ನಡ ಫಿಲ್ಮಿಬೀಟ್' ನಡೆಸಿದ್ದ ನಾ ಕಂಡ ಅಪ್ಪು ಎಂಬ ವಿಶೇಷ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದರು. ಆಕಾಶ್ ಚಿತ್ರ ಮಲ್ಟಿಪ್ಲೆಕ್ಸ್‌ಗಳಲ್ಲಿ ಶತದಿನ ಪೂರೈಸಿದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಇನ್ನೂರು ದಿನಗಳ ಪ್ರದರ್ಶನವನ್ನು ಕಂಡಿತ್ತು. ಹೀಗೆ ಮಲ್ಟಿಪ್ಲೆಕ್ಸ್‌ನಲ್ಲಿ ಅತಿ ಅಪರೂಪದ ಹಾಗೂ ಬೃಹತ್ ದಾಖಲೆ ಬರೆದ ಕಾರಣದಿಂದಲೇ ಪುನೀತ್ ರಾಜ್‌ಕುಮಾರ್ ಅವರನ್ನು ಮಲ್ಟಿಪ್ಲೆಕ್ಸ್ ಕಿಂಗ್ ಎಂದು ಕರೆಯುತ್ತಾರೆ.
ಸದ್ಯ ಇಂದು ( ಮಾರ್ಚ್ 17 ) ಕರ್ನಾಟಕ ರಾಜರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅಪ್ಪು ಮಾಡಿದ ದಾಖಲೆ ಹಾಗೂ ಸಾಧನೆಗಳನ್ನು ಮೆಲುಕಿ ಹಾಕಲಾಗುತ್ತಿದ್ದು, ಆ ಬೃಹತ್ ದಾಖಲೆಗಳ ಪೈಕಿ ಇದೂ ಸಹ ಒಂದು ಬೃಹತ್ ದಾಖಲೆ ಎನಿಸಿಕೊಂಡಿದೆ. ಅಲ್ಲದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ಬಾರಿಗೆ ಸತತವಾಗಿ ಒಂದು ವರ್ಷದ ಪ್ರದರ್ಶನವನ್ನು ಕಂಡ ಕನ್ನಡ ಚಿತ್ರ ಎಂಬ ದಾಖಲೆ ಇದೇ ಪುನೀತ್ ನಟನೆಯ ಮಿಲನ ಚಿತ್ರದ ಹೆಸರಿನಲ್ಲಿದ್ದರೆ, ಮೈಸೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಚಲನಚಿತ್ರ ಎಂಬ ದಾಖಲೆ ಸಹ ಇದೇ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಹೆಸರಿನಲ್ಲಿದೆ.


Click it and Unblock the Notifications











