ಗಂಧದ ಗುಡಿ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ: ನರ್ತಕಿಯಲ್ಲಿ ಫ್ಯಾನ್ಸ್‌ಗಾಗಿ ವಿಶೇಷ ಪ್ರದರ್ಶನ
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷ ಸಮೀಪಿಸುತ್ತಿದೆ. ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕವೂ ಅವರು ಅಭಿನಯಯಿಸಿರುವ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಚಿತ್ರಗಳು ತೆರೆಕಂಡಿದ್ದು, ತೆರೆ ಮೇಲೆ ಅಪ್ಪು ನೋಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದರು.
ಇದೀಗ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್ ಅವರನ್ನು ಬೆಳ್ಳಿ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುವ ಕ್ಷಣಗಳು ಸಮೀಪಿಸುತ್ತಿದೆ. ಪುನೀತ್ ರಾಜ್‌ಕುಮಾರ್ ತಾವೇ ಸ್ವತಃ ಮುತುವರ್ಜಿ ವಹಿಸಿ ಮಾಡಿರುವ 'ಗಂಧದ ಗುಡಿ' ಡಾಕ್ಯುಮೆಂಟರಿ ತೆರೆ ಕಾಣಲು ಸಜ್ಜಾಗಿದೆ.
ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಲು ಚಿತ್ರತಂಡ 'ಗಂಧದ ಗುಡಿ' ಟ್ರೈಲರ್ ನಾಳೆ(ಅಕ್ಟೋಬರ್‌೯)ರಂದು ಬಿಡುಗಡೆ ಮಾಡುವುದುದಾಗಿ ಈಗಾಗಲೇ ತಿಳಿಸಿದೆ. ನಾಳೆ(ಅಕ್ಟೋಬರ್ 9)ರಂದು ಬೆಳಗ್ಗೆ 10:19ಕ್ಕೆ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ 'ಗಂಧದ ಗುಡಿ' ಡಾಕ್ಯುಮೆಂಟರಿಯ ಟ್ರೈಲರ್ ಬಿಡುಗಡೆಯಾಗಲಿದೆ.

ಎಲ್ಲೆಲ್ಲೂ ರಾರಾಜಿಸಿದ 'ಗಂಧದ ಗುಡಿ' ಟ್ರೈಲರ್ ಪೋಸ್ಟರ್
'ಗಂಧದ ಗುಡಿ' ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ 'ಗಂಧದ ಗುಡಿ' ಉತ್ಸವ ಆರಂಭವಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಲಕ್ಷಾಂತರ ಅಭಿಮಾನಿಗಳ ಸೋಶಿಯಲ್ ಮೀಡಿಯಾದಲ್ಲಿ 'ಗಂಧದ ಗುಡಿ' ಟ್ರೈಲರ್ ಬಿಡುಗಡೆಯ ಪೋಸ್ಟರ್ ರಾರಾಜಿಸುತ್ತಿದೆ. ಈ ವಿಷಯವನ್ನು ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೆ ಅಪ್ಪು ಅವರನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದೇವೆ ಎಂದು ಬರೆದುಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಡಾ.ರಾಜ್ ಕುಟುಂಬಸ್ಥರು
ಇನ್ನು ನಾಳೆ (ಅಕ್ಟೋಬರ್ 9)ರಂದು ಬೆಳಗ್ಗೆ 9:45ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್‌ಕುಮಾರ್ ಅವರ 'ಗಂಧದ ಗುಡಿ' ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ನರ್ತಕಿಯಲ್ಲಿ 'ಗಂಧದ ಗುಡಿ' ಟ್ರೈಲರ್ ವಿಶೇಷ ಪ್ರದರ್ಶನ
ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಾಳೆ (ಅಕ್ಟೋಬರ್9)ರಂದು ನರ್ತಕಿ ಚಿತ್ರಮಂದಿರದಲ್ಲಿ 'ಗಂಧದ ಗುಡಿ' ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. 'ಗಂಧದ ಗುಡಿ' ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೃಹತ್ ಮಟ್ಟದಲ್ಲಿ ನಡೆಯಲಿದ್ದು, ಪುನೀತ್ ರಾಜ್‌ಕುಮಾರ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇನ್ನು 'ಗಂಧದ ಗುಡಿ' ಟ್ರೈಲರ್ ಬಿಡುಗಡೆ ಬಳಿಕ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ 'ಗಂಧದ ಗುಡಿ' ಟ್ರೈಲರ್ ವಿಶೇಷ ಪ್ರದರ್ಶನ ನಡೆಯಲಿದೆ.

ಅಪ್ಪು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತುರ
'ಗಂಧದ ಗುಡಿ' ಹೆಸರಿಗೂ ಡಾ.ರಾಜ್‌ಕುಮಾರ್ ಅವರ ಕುಟುಂಬಕ್ಕೂ ಅಭಿನಾಭಾವ ನಂಟಿದೆ. ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್ ಬಳಿಕ ಪುನೀತ್ ರಾಜ್‌ಕುಮಾರ್ ಸಹ ಇದೇ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅಪ್ಪು ಅವರ 'ಗಂಧದ ಗುಡಿ', ಸಿನಿಮಾ ರೂಪದ ಬದಲಾಗಿ ಡಾಕ್ಯುಮೆಂಟರಿ ರೂಪದಲ್ಲಿ ತೆರೆ ಕಾಣಲಿದೆ. ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ತೆರೆ ಮೇಲೆ ತೋರಿಸಲು 'ಗಂಧದ ಗುಡಿ' ತಂಡ ಮುಂದಾಗಿದೆ. ಈಗಾಗಲೇ ಟೀಸರ್ ಹಾಗೂ ಪೋಸ್ಟರ್‌ಗಳ ಮೂಲಕ ಗಂಧದ ಗುಡಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಪುನೀತ್ ರಾಜ್‌ಕುಮಾರ್ ಅವರು ನಟಿಸಿದೇ ನೈಜವಾಗಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.


Click it and Unblock the Notifications











