'ಜೇಮ್ಸ್' ಪೋಸ್ಟರ್ ರಿಲೀಸ್: 5 ಭಾಷೆಗಳಲ್ಲಿ ಸಿನಿಮಾ ರಿಲೀಸ್!
ನಟ ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳು ಮತ್ತು ಕನ್ನಡಿಗರ ಮನಸ್ಸಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಜೇಮ್ಸ್ ಸಿನಿಮಾದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದು, ಹೊಸ ಪೋಸ್ಟರ್ ರಿಲೀಸ್ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಗಣರಾಜ್ಯೋತ್ಸವದ ಪ್ರಯುಕ್ತ 'ಜೇಮ್ಸ್' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. ಪುನೀತ್ ರಾಜ್‌ಕುಮಾರ್ ಅವರ ಲುಕ್‌ಗೆ ಅಭಿಮಾನಿಗಳು, ಪ್ರೇಕ್ಷಕ ವರ್ಗ, ಸಿನಿಮಾ ಮಂದಿ ಮನಸೋತಿದ್ದಾರೆ.
ಈ ಪೋಸ್ಟರ್ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾತ್ರ ಹೇಗೆ ಇರಲಿದೆ ಎನ್ನುವುದನ್ನು ಪರಿಚಯ ಮಾಡಿಕೊಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಸೈನಿಕನ ರೂಪದಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಜೇಮ್ಸ್ ಅಬ್ಬರ!
ಸದ್ಯ 'ಜೇಮ್ಸ್' ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾದ ರಿಲೀಸ್ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಅವರು ಪ್ರಮುಖ ಅಂಶವನ್ನು ಹಂಚಿಕೊಂಡಿದ್ದಾರೆ. 'ಜೇಮ್ಸ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಭಾರತದಾದ್ಯಂತ ಈ ಚಿತ್ರ ಒಟ್ಟಿಗೆ 5 ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ನಿರ್ದೇಶಕ ಚೇತನ್ ಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ. ಆದರೆ ಸಿನಿಮಾ ರಿಲೀಸ್ ದಿನಾಂಕವನ್ನು ಮಾತ್ರ ರಿವೀಲ್ ಮಾಡಿಲ್ಲ.

ಗಮನ ಸೆಳೆದ 'ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್' ಎನ್ನುವ ಸಾಲು!
ನಟ ಪುನೀತ್ ರಾಜ್‌ಕುಮಾರ್ ಅವರ ಲುಕ್, ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾದಲ್ಲಿ ನಟ ಪುನೀತ್ ರಾಜ್‌ಕುಮಾರ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಎನ್ನುವ ಚರ್ಚೆ ಶುರುವಾಗಿದೆ. ಯಾಕೆಂದರೆ ಚಿತ್ರದ ಹೊಸ ಪೋಸ್ಟರ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರು ಸೈನಿಕನ ಸಮವಸ್ತ್ರ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಸ್ಟರ್‌ನಲ್ಲಿ "ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್" ಎನ್ನುವ ಟ್ಯಾಗ್ ಲೈನ್ ಕಾಣಿಸುತ್ತದೆ. ಹಾಗಾಗಿ 'ಜೇಮ್ಸ್' ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಪೋಸ್ಟರ್ ಹಂಚಿಕೊಂಡ ಅಶ್ವಿನಿ ಪುನೀತ್ ಮತ್ತು ಶಿವಣ್ಣ!
'ಜೇಮ್ಸ್' ಸಿನಿಮಾದ ಹೊಸ ಪೋಸ್ಟರನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಹಂಚಿಕೊಂಡಿದ್ದಾರೆ. ಪೋಸ್ಟರ್ ಹಂಚಿಕೊಂಡು "ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಹಾಗೆ ನಟ ಶಿವರಾಜ್ ಕುಮಾರ್ ಅವರು 'ಜೇಮ್ಸ್' ಪೋಸ್ಟರ್ ಹಂಚಿಕೊಂಡು "ಜೇಮ್ಸ್ ರೂಪದಲ್ಲಿ ಅಪ್ಪು, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಹಾಗೆ ಈ ಪೋಸ್ಟರನ್ನು ಸಾಕಷ್ಟು ಸಿನಿಮಾ ತಾರೆಯರು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ಕೂಡ ಪೋಸ್ಟರನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈ ಪೋಸ್ಟರ್ ವೈರಲ್ ಲಿಸ್ಟ್ ಸೇರಿದೆ.

ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್?
'ಜೇಮ್ಸ್' ಸಿನಿಮಾ ಇದೆ ವರ್ಷ ಮಾರ್ಚ್ 17ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಸಿನಿಮಾ ತಂಡ ಕೂಡ ಮಾರ್ಚ್ 17ಕ್ಕೆ ಸಿನಿಮಾವನ್ನು ರಿಲೀಸ್ ಮಾಡಲು ಚಿಂತನೆ ನಡೆಸಿದೆ. ಆದರೆ ಇನ್ನೂ ಕೂಡ ಸಿನಿಮಾ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟ ಮಾಡಿಲ್ಲ. ಒಂದು ವೇಳೆ ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಆದರೆ, ಕರ್ನಾಟಕದಲ್ಲಿ ಒಂದು ವಾರ ಬೇರೆ ಯಾವುದೇ ಸಿನಿಮಾವನ್ನು ರಿಲೀಸ್ ಮಾಡದೇ ಇರಲು ನಿರ್ಧಾರ ಮಾಡಲಾಗಿದೆ. ವಿತರಕ ಮತ್ತು ಪ್ರದರ್ಶಕರ ಬಳಗದಲ್ಲಿ ಈ ರೀತಿಯ ಒಂದು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.


Click it and Unblock the Notifications











