'ಜೇಮ್ಸ್' ಸಿನಿಮಾ: ಪುನೀತ್ ಚಿತ್ರಕ್ಕೆ ಇಬ್ಬರು ಸ್ಟಾರ್ ಕಲಾವಿದರ ಎಂಟ್ರಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಸಿನಿಮಾದ ಚಿತ್ರೀಕರಣ ಮುಗಿಸಿ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಮೊನ್ನೆ ಮೊನ್ನೆಯಷ್ಟೆ 'ಯುವರತ್ನ' ಸಿನಿಮಾದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಅಪ್ಪು ಇದೀಗ 'ಜೇಮ್ಸ್' ಸಿನಿಮಾದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.
ಭರ್ಜರಿ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್, ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿದೆ. ಇದೀಗ ಅಧಿಕೃತವಾಗಿ ಸಿನಿಮಾ ಪ್ರಾರಂಭವಾಗಿದ್ದು, ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ನಡುವೆ ಸಿನಿಮಾದಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ. ಜೇಮ್ಸ್ ಸಿನಿಮಾಗೆ ಕನ್ನಡ ಸ್ಟಾರ್ ನಟಿ ಮತ್ತು ದಕ್ಷಿಣ ಭಾರತೀಯ ಸಿನಿಮಾದಲ್ಲಿ ಮಿಂಚುತ್ತಿರುವ ಸ್ಟಾರ್ ನಟನ ಎಂಟ್ರಿಯಾಗಿದೆ. ಇತ್ತೀಚಿಗಷ್ಟೆ ತೆಲುಗು ನಟ ಶ್ರೀಕಾಂತ್ ಜೇಮ್ಸ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಮತ್ತಿಬ್ಬರು ಕಲಾವಿದರ ಎಂಟ್ರಿಯಾಗಿದೆ. ಮುಂದೆ ಓದಿ...

ಪುನೀತ್ ಜೇಮ್ಸ್ ಸಿನಿಮಾದಲ್ಲಿ ಅನು ಪ್ರಭಾಕರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದಲ್ಲಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನು ಪ್ರಭಾಕರ್ ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅನು ಪ್ರಭಾಕರ್ ಇದೀಗ ಕಮರ್ಶಿಯಲ್ ಸಿನಿಮಾ ಕಡೆ ಮುಖಮಾಡಿದ್ದಾರೆ. ಚಿತ್ರದಲ್ಲಿ ಅನು ಪ್ರಭಾಕರ್ ಪಾತ್ರ ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಜೇಮ್ಸ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಆದಿತ್ಯ ಮೆನನ್
ಪವರ್ ಸ್ಟಾರ್ ಜೇಮ್ಸ್ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಆದಿತ್ಯ ಮೆನನ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕನ್ನಡದಲ್ಲಿ ಜಾಗ್ವಾರ್, ಸೀತರಾಮ ಕಲ್ಯಾಣ ಸಿನಿಮಾಗಳಲ್ಲಿ ನಟಿಸಿರುವ ಆದಿತ್ಯ ಮೆನನ್ ಈಗ ಪುನೀತ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂನ ಸಾಕಷ್ಟು ಸಿನಿಮಾಗಳಲ್ಲಿ ಆದಿತ್ಯ ಮೆನನ್ ನಟಿಸಿದ್ದಾರೆ.

ತೆಲುಗು ನಟ ಶ್ರೀಕಾಂತ್ ಅಭಿನಯ
ಜೇಮ್ಸ್ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ ಶ್ರೀಕಾಂತ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮೊದಲು ಕನ್ನಡದ ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದ ಶ್ರೀಕಾಂತ್ ಈಗ ಪುನೀತ್ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಬರ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.
Recommended Video

ರಾಮ್-ಲಕ್ಷ್ಮಣ್ ಸ್ಟಂಟ್ ಮಾಸ್ಟರ್ಸ್
ಜೇಮ್ಸ್ ಚಿತ್ರಕ್ಕೆ ತೆಲುಗಿನ ಖ್ಯಾತ ಫೈಟ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಸಹ ಎಂಟ್ರಿಯಾಗಿದ್ದಾರೆ. ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಲಿದ್ದಾರೆ. ಈ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚಿತ್ರದಲ್ಲಿ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿದ್ದು ರಾಮ್ ಲಕ್ಷ್ಮಮ್ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











