ಯುವರತ್ನನ ಎಂಟ್ರಿ ಒಟಿಟಿನಾ ಅಥವಾ ಚಿತ್ರಮಂದಿರನಾ? ಸ್ಪಷ್ಟನೆ ನೀಡಿದ ಚಿತ್ರತಂಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಯುವರತ್ನನ ಎಂಟ್ರಿ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಮಾಡಲಾಗಿದೆ. ಅದಕ್ಕೆ ಈಗ ತಯಾರಿ ನಡೆಯುತ್ತಿದೆ. ಈ ನಡುವೆ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಲಾಭ ಹಂಚಿಕೆ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು, ಸ್ಟಾರ್ ನಟರ ಬಿಡುಗಡೆಗಳ ಬಗ್ಗೆ ಗೊಂದಲ ಉಂಟಾಗಿತ್ತು.
ಪ್ರದರ್ಶಕರ ಬೇಡಿಕೆ ಈಡೇರಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಒಂದು ವೇಳೆ ನಿರ್ಮಾಪಕರಿಗೆ ಸಹಾಯವಾಗುವಂತೆ ಪ್ರದರ್ಶಕರು ನಿರ್ಧಾರ ತೆಗೆದುಕೊಂಡಿಲ್ಲ ಅಂದ್ರೆ ಸ್ಟಾರ್ ನಟರ ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೊಂಬಾಳೆ ಫಿಲಂಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದರು. ಈ ಬೆಳವಣಿಗೆ ಬಳಿಕ ಯುವರತ್ನ ಸಿನಿಮಾ ಒಟಿಟಿ ಕಡೆ ಮುಖ ಮಾಡಿದೆ ಎನ್ನುವುದು ಚರ್ಚೆಗೆ ಕಾರಣವಾಯಿತು. ಅದಕ್ಕೆ ಸ್ವತಃ ಕಾರ್ತಿಕ್ ಗೌಡ ಅವರೇ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಚಿತ್ರಮಂದಿರದಲ್ಲೇ ಯುವರತ್ನ ರಿಲೀಸ್
ನಿರ್ಮಾಪಕರು-ಪ್ರದರ್ಶಕರ ನಡುವಿನ ಗುದ್ದಾಟದ ಪರಿಣಾಮ ಯುವರತ್ನ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಚಿತ್ರಮಂದಿರದಿಂದ ಹಿಂದೆ ಸರಿದಿದೆ ಎಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದು, ''ಇದೆಲ್ಲ ಸುಳ್ಳು ಸುದ್ದಿ, ಯುವರತ್ನ ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ'' ಎಂದಿದ್ದಾರೆ.

ಒಟಿಟಿ ರಿಲೀಸ್‌ಗೆ ಮುಂದಾದರೆ ಅಷ್ಟೇ......ಫ್ಯಾನ್ಸ್ ಆಕ್ರೋಶ
ನಿರ್ಮಾಪಕರ ಪ್ರತಿಷ್ಠೆಯಿಂದ ಯುವರತ್ನ ಸಿನಿಮಾ ಏನಾದರೂ ಚಿತ್ರಮಂದಿರ ಬಿಟ್ಟು ಒಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾದರೆ ಪರಿಣಾಮ ಚೆನ್ನಾಗಿರಲ್ಲ ಎಂದು ಪುನೀತ್ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯುವರತ್ನ ಸಿನಿಮಾ ಥಿಯೇಟರ್‌ನಲ್ಲೇ ರಿಲೀಸ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಬರ್ಟ್ ಚಿತ್ರಮಂದಿರಕ್ಕೆ ಫಿಕ್ಸ್
ನಿರ್ಮಾಪಕರು ಮತ್ತು ಪ್ರದರ್ಶಕರ ನಡುವಿನ ಮನಸ್ತಾಪದ ಪರಿಣಾಮ ರಾಬರ್ಟ್ ಚಿತ್ರವೂ ಒಟಿಟಿಗೆ ಹೋಗಲಿದೆ ಎಂದು ಹೇಳಲಾಯಿತು. ಆದ್ರೆ, ಇದನ್ನು ನಟ ದರ್ಶನ್ ನಿರಾಕರಿಸಿದ್ದಾರೆ. 50 ಪರ್ಸೆಂಟ್ ಅಲ್ಲ, 25 ಪರ್ಸೆಂಟ್‌ಗೆ ಅವಕಾಶ ಕೊಟ್ಟರೂ ನಾವು ಥಿಯೇಟರ್‌ನಲ್ಲೇ ಬರೋದು'' ಎಂದಿದ್ದಾರೆ. ಒಟಿಟಿ ನಮ್ಮ ಆಯ್ಕೆಯೇ ಅಲ್ಲ ಎಂದು ಗುಡುಗಿದ್ದಾರೆ.

ಕಾರ್ತಿಕ್ ಗೌಡ ಟ್ವೀಟ್ ಮರ್ಮವೇನು?
ಸ್ಟಾರ್ ನಟರ ಚಿತ್ರಗಳ ನಿರ್ಮಾಪಕರ ಸಭೆ ಸೇರಿದ ಬಳಿಕ ಕಾರ್ತಿಕ್ ಗೌಡ ಮಾಡಿದ ಟ್ವೀಟ್ ಇಂತಹದೊಂದು ಚರ್ಚೆಗೆ ಕಾರಣವಾಗಿತ್ತು. ''ಪ್ರದರ್ಶಕರ ಹೊಸ ಬೇಡಿಕೆಗಳು ಸಾಕಷ್ಟು ಕಷ್ಟಕರವಾಗಿದೆ. ಎಲ್ಲವೂ ಸರಿಯಾಗಿ ನಡೆದರೆ, ಮುಂದಿನ ವಾರದಲ್ಲಿ, ಒಟಿಟಿಯಲ್ಲಿ ನೇರವಾಗಿ ಬರಲಿರುವ ದೊಡ್ಡ ಚಿತ್ರದ ಪ್ರಕಟಣೆ ಮಾಡಲಾಗುತ್ತದೆ. ಇನ್ನೂ ಅನೇಕರು ಇದನ್ನು ಅನುಸರಿಸಬಹುದು'' ಎಂದು ಟ್ವೀಟ್ ಮಾಡಿದ್ದರು. ಇದು ಯುವರತ್ನ, ಕೆಜಿಎಫ್, ರಾಬರ್ಟ್ ಹಾಗೂ ಇನ್ನಿತರ ಚಿತ್ರಗಳ ಬಿಡುಗಡೆ ಕುರಿತು ಗೊಂದಲಕ್ಕೆ ಕಾರಣ ಆಗಿತ್ತು.


Click it and Unblock the Notifications











