PRK ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಹಾಡಿದ್ದ ಮೊದಲ ಸಿನಿಮಾ ಯಾವುದು? ಆ ಕ್ಷಣ ಹೇಗಿತ್ತು?
'ಹರೀಶ ವಯಸ್ಸು 36.' ವಿಭಿನ್ನ ಟೈಟಲ್‌ನ ಈ ಸಿನಿಮಾ ಮಾರ್ಚ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೂ ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜ್‌ಕುಮಾರ್‌ಗೂ ಒಂದು ನಂಟಿದೆ. ಅದೇನಂದರೆ, ಅಪ್ಪು ಈ ಸಿನಿಮಾಗಾಗಿ ಒಂದು ಹಾಡು ಹಾಡಿದ್ದಾರೆ. ವಿಶೇಷ ಏನೆಂದರೆ, ಪಿಆರ್ ಕೆ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಹಾಡಿದ ಮೊದಲ ಸಿನಿಮಾದ ಹಾಡು ಎಂಬ ಹೆಗ್ಗಳಿಕೆಯಿದೆ.
'ಹರಿಯಣ್ಣಂಗೆ ವಯಸ್ಸು 36, ಮದುವೆ ಆಗಿಲ್ಲಂತ ಬೇಜಾರು.' ಈ ಹಾಡು ಪುನೀತ್ ರಾಜ್‌ಕುಮಾರ್ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಮಾತ್ರವಲ್ಲ, ಯೂಟ್ಯೂಬ್ ಸೇರಿದಂತೆ ಎಲ್ಲೆಡೆ ಈಗ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್‌ರಿಂದ ಹಾಡಿಸಬೇಕು, ಐಟಂ ಸಾಂಗ್ ತರಹ ಇರಬೇಕು ಅನ್ನುವ ಆಲೋಚನೆ ಇತ್ತು. ಆದರೆ, ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು ಈ ಹಾಡನ್ನು ಪುನೀತ್ ರಾಜ್‌ಕುಮಾರ್ ಹಾಡಿದರೆ ಚೆನ್ನಾಗಿರುತ್ತದೆ ಎಂಬ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಒಂದು ಹಾಡು ಅಪ್ಪು ಕಂಠದಲ್ಲಿ ಮೂಡಿ ಬಂದಿದ್ದು, ಈ ಸಾಂಗ್ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ.

ಹೊಸಬರಿಗೆ ಗೌರವ ಕೊಟ್ಟ ಅಪ್ಪು
"ಪುನೀತ್ ರಾಜಕುಮಾರ್ ಹೇಳಿ ಕೇಳಿ ದೊಡ್ಡ ಸ್ಟಾರ್. ನಮ್ಮ ಚಿತ್ರಕ್ಕೆ ಹಾಡು ಹಾಡುತ್ತಾರೆಯೇ? ಅವರನ್ನು ಹೇಗೆ ಕೇಳಬೇಕು ಎಂಬ ಆತಂಕ, ಗೊಂದಲ ನಮ್ಮಲ್ಲಿ ಮೂಡಿತ್ತು. ಆದರೆ, ಪುನೀತ್ ರಾಜಕುಮಾರ್ ಮ್ಯಾನೇಜರ್‌ಗೆ ನಮ್ಮ ಸಿನಿಮಾ ಟೀಂ ಕರೆ ಮಾಡಿತು. ಕೂಡಲೇ ಬನ್ನಿ. ಮಾತಾಡೋಣ ಎಂಬ ಉತ್ತರ ಸಿಕ್ಕಿತು. ಎರಡು ದಿನಗಳ ಬಳಿಕ ಅಲ್ಲಿಗೆ ಹೋದೆವು. ಪುನೀತ್ ರಾಜಕುಮಾರ್ ನಮ್ಮನ್ನು ಭೇಟಿ ಮಾಡಿದಾಕ್ಷಣ ಹೊಸಬರು ಎಂದು ತಾತ್ಸಾರ ಮಾಡಲಿಲ್ಲ. ಒಮ್ಮೆಲೆ ಒಪ್ಪಿಕೊಂಡರು. ಟ್ರ್ಯಾಕ್ ಕಳುಹಿಸಿ ಎಂದರು. 2020ರ ನವೆಂಬರ್ ತಿಂಗಳಿನಲ್ಲಿ ಈ ಹಾಡನ್ನು ಪಿಆರ್ ಕೆ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿತ್ತು." ಎಂದು ನಿರ್ಮಾಪಕ ಲಕ್ಷ್ಮೀಕಾಂತ್ ಹೆಚ್. ವಿ. ರಾವ್ ಹೇಳಿದ್ದಾರೆ.

ಪಿಆರ್‌ಕೆ ಸ್ಟುಡಿಯೋದಲ್ಲಿ ಹಾಡಿದ ಮೊದಲ ಹಾಡು
ಮೊದಲು "ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ ಹಾಡನ್ನು ಪುನೀತ್ ರಾಜಕುಮಾರ್ ಹಾಡಿದರು. ಅವರದ್ದೇ ಸ್ಟುಡಿಯೋ ಆದ ಕಾರಣ ಮತ್ತಷ್ಟು ಉಲ್ಲಾಸಗೊಂಡು ನಮ್ಮ ಚಿತ್ರದ ಹಾಡು ಹಾಡಿದರು. ಅದು ಅವರಿಗೆ ಸಮಾಧಾನ ಆಗಲಿಲ್ಲ. ಮತ್ತೆರಡು ಬಾರಿ ಹಾಡು ಹಾಡಿದರು. ಸ್ವಲ್ಪ ಸರಿಯಿಲ್ಲ ಎಂದರೂ ಅವರೇ ನಾನೇ ಸರಿ ಮಾಡಿ ಹಾಡಿ ಕಳುಹಿಸುತ್ತೇನೆ ಎನ್ನುತ್ತಿದ್ದರು. ಅವರ ಸ್ಟುಡಿಯೋದಲ್ಲಿ ನಮ್ಮ ಚಿತ್ರದ ಮೊದಲ ಹಾಡು ಹಾಡಿದ್ದಾರೆ ಎಂಬುದು ನಮಗೆ ಖುಷಿ ತಂದಿದೆ. ಆದರೆ, ಅಂಥ ದೊಡ್ಡ ಮೇರು ಪರ್ವತ ಇಲ್ಲದಿರುವುದು ಬೇಸರದ ವಿಷಯ." ಅವರ ಆಶೀರ್ವಾದ ನಮ್ಮ ಚಿತ್ರದ ಮೇಲಿದೆ ಎನ್ನುತ್ತಾರೆ ನಿರ್ಮಾಪಕರು.

PRKಯಿಂದಲೇ ಸಿನಿಮಾ ರಿಲೀಸ್ ಮಾಡುವ ಭರವಸೆ
"ಕೆಲಸಕ್ಕೆ ಪುನೀತ್ ಅವರು ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದರು. ದೊಡ್ಡ ಸ್ಟಾರ್ ಎಂಬ ಅಹಂಕಾರ ಇರಲಿಲ್ಲ. ಹೊಸಬರಿಗೆ ಸದಾ ಪ್ರೋತ್ಸಾಹ ನೀಡುವ ಮೂಲಕ ಹುರಿದುಂಬಿಸುತ್ತಿದ್ದರು. ಮಾತನಾಡುವ ರೀತಿ, ಸೌಜನ್ಯ, ಹೃದಯವಂತಿಕೆ ಹೊಂದಿದ್ದ ಪುನೀತ್ ಅವರನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಸಿನಿಮಾ ರಂಗ ದೊಡ್ಡ ಆಸ್ತಿಯೇ ಇಲ್ಲವಾಗಿದೆ. ಔದಾರ್ಯತೆ, ಸರಳತೆ, ನಡವಳಿಕೆ ಈಗಲೂ ನೆನಪಿದೆ. ನಮ್ಮ ಜೊತೆಗೆ ಸೆಲ್ಪಿ, ಗ್ರೂಪ್ ಫೋಟೋ ತೆಗೆದುಕೊಂಡರು. ಅವರ ಆಶೀರ್ವಾದ ನಮ್ಮ ಚಿತ್ರದ ಮೇಲಿದೆ. ಸಿನಿಮಾ ಮುಗಿದ ಬಳಿಕ ಬನ್ನಿ. ಪಿಆರ್‌ಕೆಯಿಂದಲೇ ಚಿತ್ರ ವಿತರಣೆ ಮಾಡೋಣ ಎಂದಿದ್ದರು. ಅವರೇ ಇಲ್ಲ ಈಗ. ಆದರೆ, ಪುನೀತ್ ಅವರು ಪ್ರೋತ್ಸಾಹ ಕೊಟ್ಟಿದ್ದೇ ನಮಗೆ ಹುಮ್ಮಸ್ಸು" ಎಂದು ನೆನಪು ಮಾಡಿಕೊಂಡರು.

ದಾವಣಗೆರೆಯಲ್ಲಿ ಹಿರಿಯ ನಟ ಉಮೇಶ್
"ನನಗೆ ದಾವಣಗೆರೆಗೆ ಬಂದಿದ್ದುಖುಷಿ ತಂದಿದೆ. ದಾವಣಗೆರೆಗೆ ಹೊಸಬನಲ್ಲ. ವೃತ್ತಿ ರಂಗಭೂಮಿಯಲ್ಲಿದ್ದವನು. ಗುಬ್ಬಿ ಸೇರಿದಂತೆ ದೊಡ್ಡ ದೊಡ್ಡ ನಾಟಕ ಕಂಪೆನಿಗಳಲ್ಲಿ ನಟಿಸಿದ್ದೇನೆ. ಪುಟ್ಟ ಬಾಲಕನಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೆ ಹಲವು ಬಾರಿ ಬಂದು ಹೋಗಿದ್ದೇನೆ. ದಾವಣಗೆರೆ ನನಗೆ ತವರು ಮನೆ ಇದ್ದ ಹಾಗೆ" ಎಂದು ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಉಮೇಶ್ ಹೇಳಿದರು. ಹರೀಶ ವಯಸ್ಸು 36 ಸಿನಿಮಾ ಪ್ರಮೋಷನ್ ಗೆ ದಾವಣಗೆರೆಗೆ ಆಗಮಿಸಿದ್ದರು. ದಾವಣಗೆರೆ ಜೊತೆಗಿನ ಒಡನಾಟ ಹಂಚಿಕೊಂಡರು.

'ಹರೀಶ ವಯಸ್ಸು 36' ಕಥೆಯೇನು?
ಕಥಾ ನಾಯಕ ಹಗಲುಕನಸು ಕಾಣೋ ಕನಸು ಕಂಗಳ ಹುಡುಗ. ಉಂಡಾಡಿ ಗುಂಡ. ಚಿತ್ರದ ನಾಯಕನ ಹೆಸರು ಹರೀಶ. ಹುಡುಗಿಯ ಅನ್ವೇಷಣೆಯಲ್ಲಿ ಇರುತ್ತಾನೆ. ಅವನ ಜೀವನದಲ್ಲಿ ನಡೆಯುವ ತಿರುವುಗಳನ್ನು ಕಥೆಯಾಗಿ ಹೆಣೆದು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರವೇ ಹರೀಶ ವಯಸ್ಸು 36. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಮಂಗಳೂರು ಕನ್ನಡದ ಕಂಪು ಸಾಥ್ ನೀಡಿದೆ. ಚಿತ್ರದ ನಾಯಕ ನಟರಾಗಿ ಯೋಗೀಶ್ ಶೆಟ್ಟಿ, ಶ್ವೇತ ಅರಹೊಳೆ, ರೋಹಿಣಿ ಜಗರಾಮ್, ಪ್ರಕಾಶ್, ಸೌಮ್ಯ ಸುಧೀಂದ್ರ ಮತ್ತಿತರರು ನಟಿಸಿದ್ದಾರೆ.


Click it and Unblock the Notifications











