ಹಾಸ್ಟೆಲ್ ಹುಡುಗರ ಬಿಲ್ಡಪ್ ನೋಡಿ ಸಿಟ್ಟಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಸ್ಯಾಂಡಲ್ ವುಡ್ ಗೆ ಸಾಕಷ್ಟು ಯುವ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಕೆಲವರು ವಿಭಿನ್ನ, ವಿನೂತನ ಪ್ರಯತ್ನಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಇದೀಗ ಗಾಂಧಿನಗರದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎನ್ನುವ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಈ ಸಿನಿಮಾ ರಿಲೀಸ್ ಗೂ ಮೊದಲೇ ಹಾಸ್ಟೆಲ್ ಹುಡುಗರ ಬಗ್ಗೆ ಎಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇತ್ತೀಚಿಗಷ್ಟೆ ಹಾಸ್ಟೆಲ್ ಹುಡುಗರು ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾತಂಡದ ಮೇಲೆ ಗರಂ ಆಗಿದ್ದಾರೆ.

ಹಾಸ್ಟೆಲ್ ಹುಡುಗರಿಗೆ ಪುನೀತ್ ಸಾಥ್
ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ಅಪ್ಪು, 'ಯುವಕರು, ಚಿಕ್ಕ ಹುಡುಗರು ಎಲ್ಲಾ ಸೇರಿ ಒಂದು ಸಿನಿಮಾ ಮಾಡಿದ್ದಾರೆ. ಯಂಗ್ ಸ್ಟರ್ಸ್ ಮುಂದೆ ಬರಬೇಕು, ಸಿನಿಮಾ ಚೆನ್ನಾಗಿ ಆಗ್ಲಿ, ಒಳ್ಳೆ ಸಕ್ಸಸ್ ಆಗ್ಲಿ ಅಂತ ಕೇಳಿಕೊಳ್ಳುತ್ತೇನೆ ಆಯ್ತಲ್ಲಾ' ಎಂದು ಕ್ಯಾಮರಾ ಮುಂದೆ ಹೇಳಿದ್ದಾರೆ.

ಬಿಲ್ಡಪ್ ನೋಡಿ ಗರಂ ಆದ ಅಪ್ಪು
ಪೋಸ್ಟರ್ ರಿಲೀಸ್ ಮಾಡಿ ಅಪ್ಪು 'ಅಲ್ಲಾ ಇದನ್ನ ಬಿಡುಗಡೆ ಮಾಡಲು ಇಷ್ಟೆಲ್ಲ ಬಿಲ್ಡಪ್ ಬೇಕಾಗಿತ್ತಾ..ಇದು ಕೆಟ್ಟ ಸಿನಿಮಾ ಅಂತ ಕಾಣುತ್ತೆ. ಇದನ್ನೆಲ್ಲಾ ಮಾಡೋದು ಬಿಟ್ಟು, ಬೇರೆ ಏನಾದ್ರೂ ಒಳ್ಳೆ ಕೆಲಸ ಮಾಡಿ' ಎಂದು ಪವರ್ ಸ್ಟಾರ್ ಹಾಸ್ಟೆಲ್ ಹುಡುಗರು ಟೀಂಗೆ ಬೈಯುತ್ತಿರುತ್ತಾರೆ. ನಿರ್ದೇಶಕರು ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತಿದೆ ಸರ್ ಎಂದು ನೆನಪಿಸುತ್ತಾರೆ. ಆಗ ಅಪ್ಪು ಇದನ್ನೆಲ್ಲ ಎಡಿಟ್ ಮಾಡಿ ಎಂದು ಹೇಳಿ, ಮತ್ತೆ ಸಿನಿಮಾ ತಂಡವನ್ನು ಪರಿಚಯ ಮಾಡಿಕೊಡುತ್ತಾರೆ.

ಡೇಟ್ ಕೇಳಿದ್ರೆ ಪುನೀತ್ ನೀಡಿದ್ದೇನು?
ಬಳಿಕ ನಿರ್ದೇಶಕರು ಪವರ್ ಸ್ಟಾರ್ ಬಳಿ ಹೋಗಿ ಡೇಟ್ ಬೇಕಿತ್ತು ಅಂತ ಕೇಳಿದ್ರೆ, ಖರ್ಜೂರ ಕೊಟ್ಟು ಕಳುಹಿಸುತ್ತಾರೆ. ಅಪ್ಪು ನೀಡಿದ ಡೇಟ್ ತಿನ್ನುತ್ತಾ ನಿರ್ದೇಶಕರು ವಾಪಸ್ ಆಗುತ್ತಾರೆ.

ಇದು ಸಿನಿಮಾದ ವಿನೂತನ ಪ್ರಮೋಷನ್
ಅಂದ್ಹಾಗೆ ಪವರ್ ಸ್ಟಾರ್ ನಿಜಕ್ಕೂ ಹೀಗೆ ಮಾಡಿದ್ರಾ ಅಂತ ಅಚ್ಚರಿ ಪಡಬೇಡಿ. ಇದು ಕೂಡ ಸಿನಿಮಾದ ಒಂದು ವಿಭಿನ್ನ ಪ್ರಮೋಷನ್. ಇತ್ತೀಚಿಗೆ ಸಿನಿಮಾತಂಡದವರು ವಿನೂತನ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಗಳನ್ನು ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾತಂಡ ಸಹ ಹೀಗೆ ವಿಭಿನ್ನವಾಗಿ ಚಿತ್ರದ ಪ್ರಮೋಷನ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.

ನಿತಿನ್ ಕೃಷ್ಣಮೂರ್ತಿ ನಿರ್ದೇಶನ
ಅಂದಹಾಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚಿಗೆ ಚಿತ್ರದ ಪೋಸ್ಟರ್ ರಿಲೀಸ್ ಬಗ್ಗೆ ಒಂದು ಪ್ರೋಮೋ ರಿಲೀಸ್ ಮಾಡಿ ಗಮನ ಸೆಳೆದಿದ್ದರು. ಮಾತನಾಡುವ ರವಿಮರ್ಮ ಪೇಂಟಿಂಗ್ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದರು.


Click it and Unblock the Notifications










