ಚಿತ್ರದುರ್ಗದ ಜನರ ಅಭಿಮಾನದ ಹೊಳೆಯಲ್ಲಿ ತೇಲಿದ ಪುನೀತ್ ರಾಜ್‌ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದರು. ಯುವರತ್ನ ಚಿತ್ರ ತಂಡದ ಪ್ರಚಾರಕ್ಕಾಗಿ ಆಗಿಮಿಸಿದ್ದರು.
ನಗರದ ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ ಚಿತ್ರ ತಂಡದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಚಿತ್ರದುರ್ಗ ನಗರಕ್ಕೆ ಅಪ್ಪು ಬರುತ್ತಿದ್ದಂತೆ ಕ್ರೇನ್‌ಗಳ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸೇಬಿನ ಹಾರದ ಮೂಲಕ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗದ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು. ಚಿತ್ರ ತಂಡಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು ಅಪ್ಪು.

ಇನ್ನು ಕೊರೊನಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ಸರ್ಕಾರದ ನಿರ್ಧಾರಕ್ಕೆ ನಾವು ಬದ್ದರಾಗಬೇಕು. ಕೊವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಲಸಿಕೆಯನ್ನು ಪಡೆದುಕೊಂಡು ಕೊರೊನಾದಿಂದ ದೂರ ಇರೋಣ' ಎಂದು ಹೇಳಿದರು.
ಇದೇ ದಿನ ಪುನೀತ್ ರಾಜ್‌ಕುಮಾರ್ ಅವರು, ಬಳ್ಳಾರಿ, ತುಮಕೂರು ಗಳಲ್ಲಿಯೂ ವಿವಿಧೆಡೆ ಸಿನಿಮಾ ಪ್ರಚಾರ ಮಾಡಿದರು. ನಾಳೆ (ಮಾರ್ಚ್ 23) ಮೈಸೂರು ಹಾಗೂ ಮಂಡ್ಯಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಪುನೀತ್.
ನಿನ್ನೆ (ಮಾರ್ಚ್ 21) ಬೆಳಗಾವಿ, ಕಲಬುರ್ಗಿ ಇನ್ನೂ ಹಲವಾರು ಕಡೆ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದರು. 'ಯುವರತ್ನ' ಸಿನಿಮಾದ ಪ್ರಚಾರಕ್ಕಾಗಿ ಪುನೀತ್, ಡಾಲಿ ಧನಂಜಯ್, ರವಿಶಂಕರ್, ನಿರ್ದೇಶಕ ಸಂತೋಶ್ ಆನಂದ್ ರಾಮ್ ಇನ್ನೂ ಕೆಲವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
Recommended Video
'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಸಂತೋಶ್ ಆನಂದ್ ರಾಮ್ ನಿರ್ದೇಶನ ಮಾಡಿದ್ದು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯೆಷಾ ನಾಯಕಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಅವಿನಾಶ್ ಸೋನು ಗೌಡ, ರಂಗಾಯಣ ರಘು ಇನ್ನೂ ಹಲವರು ಅಭಿನಯಿಸಿದ್ದಾರೆ.


Click it and Unblock the Notifications











