ಹುಟ್ಟುಹಬ್ಬದಂದು ಮೂಡಿಗೆರೆಗೆ ಪುನೀತ್ ರಾಜ್‌ಕುಮಾರ್ ಭೇಟಿ
ನಿನ್ನೆ (ಮಾರ್ಚ್ 17) ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಹುಟ್ಟುಹಬ್ಬ. ಕಳೆದ ಬಾರಿ ಕೊರೊನಾ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇದ್ದ ಪುನೀತ್ ಈ ಬಾರಿಯೂ ಅಭಿಮಾನಿಗಳಿಂದ ದೂರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಪುನೀತ್ ರಾಜ್‌ಕುಮಾರ್. ಈ ಬಾರಿಯ ಹುಟ್ಟುಹಬ್ಬಕ್ಕೆ ನಾನು ಮನೆಯಲ್ಲಿರುವುದಿಲ್ಲ ದಯವಿಟ್ಟು ಯಾರೂ ಸಹ ಮನೆಯ ಬಳಿ ಬರಬೇಡಿ. ನಾನು ಕುಟುಂಬದವರೊಂದಿಗೆ ಕೆಲವು ದೇವಸ್ಥಾನಗಳಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದರು.
ಅಂತೆಯೇ ಪುನೀತ್ ರಾಜ್‌ಕುಮಾರ್ ಅವರು ಹುಟ್ಟುಹಬ್ಬದ ದಿನ ಕರಾವಳಿ, ಮಲೆನಾಡು ಭಾಗದ ಕೆಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಮೂಡಿಗೆರೆಯ ನಿಡುವಾಳೆಯ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ಸಮಯ ದೇವಾಲಯದ ಮಂಡಳಿಯವರು ಪುನೀತ್ ಅವರಿಗೆ ಸನ್ಮಾನವನ್ನೂ ಮಾಡಿದ್ದಾರೆ. ಸ್ಥಳೀಯರು ಪುನೀತ್ ಜೊತೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ಅಲ್ಲಿಯೇ ಸಮೀಪದ ಉರ್ವಿಖಾನ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಪುನೀತ್ ರಾಜ್‌ಕುಮಾರ್ ಕುಟುಂಬ ಅಲ್ಲಿನ ಆತಿಥ್ಯ ಸವಿದಿದೆ. ರೆಸಾರ್ಟ್‌ನಲ್ಲಿಯೂ ಅಭಿಮಾನಿಗಳು, ಸಿಬ್ಬಂದಿಗಳು ಪುನೀತ್ ಜೊತೆಗೆ ಫೊಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ನಟ ದರ್ಶನ್, ಸುದೀಪ್, ಜಗ್ಗೇಶ್, ರವಿಚಂದ್ರನ್ ಇನ್ನೂ ಹಲವಾರು ಯುವ ನಟ-ನಟಿಯರು ಪ್ರೀತಿಯಿಂದ ಶುಭಾಶಯ ಹಾರೈಸಿದ್ದಾರೆ. ಪುನೀತ್ ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾದ ಹೊಸ ಪೋಸ್ಟರ್ ಸಹ ಬಿಡುಗಡೆ ಆಗಿದೆ.

ಪುನೀತ್ ನಟಿಸಿರುವ 'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications