ಅಣ್ಣಾವ್ರು ಮತ್ತು ಪುನೀತ್ ಒಪ್ಪಿ ಕೊನೆಗೆ ವಿಜಯ್ ನಟಿಸಿ ಗೆದ್ದಿದ್ದ ಚಿತ್ರ ಯಾವುದು?
ಚಿತ್ರರಂಗದಲ್ಲಿ ಯಾರೋ ಮಾಡಬೇಕಿದ್ದ ಸಿನಿಮಾ ಮತ್ಯಾರೋ ಮಾಡಿರುವ ಸಾಕಷ್ಟು ಉದಾಹರಣೆ ಕಣ್ಣ ಮುಂದಿದೆ. ಒಂದು ಕಥೆ ಅಂದಮೇಲೆ ನಾಲ್ಕೈದು ಜನರಿಗೆ ನಿರ್ದೇಶಕರು ಹೇಳುತ್ತಾರೆ. ಎಲ್ಲರೂ ಒಪ್ಪಿ, ನಿರ್ಮಾಪಕರು ಸಿಕ್ಕಿ, ಎಲ್ಲಾ ಕೂಡ ಬಂದರೆ ಸಿನಿಮಾ ನಿರ್ಮಾಣವಾಗುತ್ತದೆ. ಚಿತ್ರೀಕರಣವಾಗಿ ಬಿಡುಗಡೆ ಕೂಡ ಆಗುತ್ತದೆ.
ಕಥೆ ಕೇಳಿ ಒಪ್ಪಿದ ಮಾತ್ರಕ್ಕೆ ಸಿನಿಮಾ ಶುರುವಾಗಿಬಿಡುವುದಿಲ್ಲ. ಇನ್ನು ಶುರುವಾದ ಮಾತ್ರಕ್ಕೆ ಚಿತ್ರೀಕರಣಗೊಂಡು ತೆರೆಗೆ ಬಂದುಬಿಡಲ್ಲ. ಮುಹೂರ್ತ ನಡೆದು ನಿಂತ ಚಿತ್ರಗಳು, ಒಂದೆರಡು ದಿನ ಚಿತ್ರೀಕರಣದ ಬಳಿಕ ನಿಂತಿರುವ ಚಿತ್ರಗಳು ಇವೆ. ನಾಯಕ ನಟರು ಬದಲಾಗಿರುವ ಪ್ರಸಂಗಗಳನ್ನು ನೋಡಿದ್ದೇವೆ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕೇಳಿ ಒಪ್ಪಿದ್ದ ಕಥೆ ಬಳಿಕ ತಮಿಳಿನಲ್ಲಿ ಸಿನಿಮಾ ಆಗಿತ್ತು. ದಳಪತಿ ವಿಜಯ್ ಹೀರೊ ಆಗಿ ನಟಿಸಿದ್ದರು. ಈ ವಿಚಾರವನ್ನು ನಿರ್ಮಾಪಕ ಕಲೈಪುಲಿ ಎಸ್ ತನು ನೆನಪಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವನ್ನು ಕಲೈಪುಲಿ ಎಸ್. ತನು ನಿರ್ಮಿಸಿ ಗೆದ್ದಿದ್ದು ಗೊತ್ತೇಯಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕಲೈಪುಲಿ ಎಸ್ ತನು ಅವರಿಗೆ ಕನ್ನಡ ಚಿತ್ರರಂಗದ ಕೆಲವರ ಜೊತೆ ಒಡನಾಟವಿದೆ. ದಶಕಗಳ ಹಿಂದೆಯೇ ಅವರು ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕೆ ಪ್ರಯತ್ನಿಸಿದ್ದಂತೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಪುನೀತ್ ಹೀರೊ ಆಗಿ ಎರಡು ಸಿನಿಮಾ ನಿರ್ಮಿಸುವ ಬಗ್ಗೆ ಚರ್ಚೆ ನಡೆಸಿದ್ದಾಗಿಯೂ ತಿಳಿಸಿದ್ದಾರೆ.
"ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಒಂದು ಸಿನಿಮಾ ಮಾಡಬೇಕಿತ್ತು. ಆಗ ತಾನೇ ಅಪಹರಣಕ್ಕೊಳಗಾಗಿದ್ದ ರಾಜ್‌ಕುಮಾರ್ ಸರ್ ಕಾಡಿನಿಂದ ಬಿಡುಗಡೆಯಾಗಿ ಬಂದಿದ್ದರು. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಬಳಿಕ ನಮ್ಮ ಜೊತೆ ಚರ್ಚಿಸಿದರು. ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ಮಗ ರಾಘವೇಂದ್ರ ಎಲ್ಲರೂ ಕೂತು ಮಾತನಾಡಿದೆವು. ಆಗ ಸಿನಿಮಾ ಮಾಡುವ ಚರ್ಚೆ ಬಂತು" ಎಂದು The Whistle ಯೂಟ್ಯೂಬ್ ಸಂದರ್ಶನದಲ್ಲಿ ನಿರ್ಮಾಪಕ ಕಲೈಪುಲಿ ಎಸ್. ತನು ನೆನಪಿಸಿಕೊಂಡಿದ್ದಾರೆ.

"ಕರ್ನಾಟಕದಲ್ಲಿ ನೀರಿನ ಸಮಸ್ಯೆ ಕಾರಣಕ್ಕೆ ಗಲಾಟೆ ನಡೆಯುತ್ತಿದೆ. ನಿಮ್ಮನ್ನು ಇಲ್ಲಿನ ಜನ ದೇವರಂತೆ ಆರಾಧಿಸುತ್ತಾರೆ. ನಮಗೆ ಸಿನ್ಮಾ ಮಾಡುವ ಅವಕಾಶ ಕೊಟ್ಟರೆ ನಿಮಗೆ ಕೆಟ್ಟ ಹೆಸರು ಬರುತ್ತಲ್ಲ ಎಂದು ಕೇಳಿದೆ. ಅದಕ್ಕವರು, "ಅಯ್ಯಾ, ನೀವು ನಮ್ಮ ಊರಿಗೆ ಬರ್ತೀರಾ. ಇಲ್ಲಿ ಬಂದು ನನ್ನ ಮಗನನ್ನು ಇಟ್ಟುಕೊಂಡು ಸಿನ್ಮಾ ಮಾಡ್ತೀರಾ. ನೀವು ಮಾಡುವುದು ಕನ್ನಡ ಸಿನಿಮಾ ಅಲ್ವೇ? ನಮ್ಮ ಜನ ಸಂತೋಷ ಪಡುತ್ತಾರೆ. ನೀವು ತಮಿಳು ಸಿನ್ಮಾ ಮಾಡ್ತೀವಿ ಅಂದ್ರೆ, ಯಾರಾದರೂ ಪ್ರಶ್ನಿಸಬಹುದು. ಕನ್ನಡ ಸಿನ್ಮಾ ಮಾಡಿದ್ರೆ ಏನಾಗಲ್ಲ. ನಮ್ಮ ಜನ ಒಳ್ಳೆಯವರು, ನೀವು ಭಯ ಪಡಬೇಡಿ ಸಿನ್ಮಾ ಮಾಡಿ ಎಂದ್ರು" ಅಂತ ಅಣ್ಣಾವ್ರ ಮಾತುಗಳನ್ನು ಕಲೈಪುಲಿ ಎಸ್. ತನು ಯಥಾವತ್ತಾಗಿ ಹೇಳಿದ್ದಾರೆ.
ಪುನೀತ್ ಶೂಟಿಂಗ್‌ನಲ್ಲಿ ಇದ್ದಾನೆ. ಅಲ್ಲಿಗೆ ಹೋಗಿ ಕಥೆ ಹೇಳಿ ಅವನು ಒಪ್ಪಿದರೆ ಖಂಡಿತ ಸಿನಿಮಾ ಮಾಡಿ ಎಂದು ಅಣ್ಣಾವ್ರು ನನಗೆ ಹೇಳಿದರು. ಸರ್, ಕಥೆಯನ್ನು ತಮಿಳು ನಟ ವಿಜಯ್‌ಗೆ ಹೇಳಿದ್ದೀನಿ. ಅವ್ರು ಒಪ್ಪದೇ ಇದ್ದರೆ ಖಂಡಿತ ಕನ್ನಡದಲ್ಲಿ ಮಾಡ್ತೀನಿ ಎಂದೆ. ಅಯ್ಯೋ ಪರವಾಗಿಲ್ಲ, ಅವ್ರು ಮಾಡಿದ್ರೆ, ಮಾಡ್ಲಿ ಇಲ್ಲದಿದ್ದರೆ ಕನ್ನಡದಲ್ಲಿ ಮಾಡಿ ಎಂದು ರಾಜ್‌ಕುಮಾರ್ ಹೇಳಿ ಬೀಳ್ಕೊಟ್ಟರು ಎಂದು ತಮಿಳು ನಿರ್ಮಾಪಕ ಹೇಳಿದ್ದಾರೆ.
"ಬಳಿಕ ರಾಕ್‌ಲೈನ್ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರೀಕರಣದಲ್ಲಿದ್ದರು. ಅಲ್ಲಿಗೆ ಹೋದೆ. ಬೇಡ ಎಂದರೂ ಬಿಡದೇ ಊಟ ಮಾಡಿಸಿದರು. ಮಗುವಿನ ಮನಸ್ಸಿನ ವ್ಯಕ್ತಿತ್ವದವರು ಪುನೀತ್. ಮುಂದೆ 'ತೇರಿ' ಚಿತ್ರವನ್ನು ಮಾಡುವ ಬಗ್ಗೆಯೂ ಚರ್ಚೆ ಆಗಿತ್ತು. ಪಾರ್ಟ್ನರ್‌ಶಿಪ್‌ನಲ್ಲಿ ಮಾಡೋಣ ಅಂದ್ರು. ಬೇಡ ಸುಖಾಸುಮ್ಮನೆ ಭಿನ್ನಾಭಿಪ್ರಾಯ ಮೂಡಬಹುದು. ನೀವು ನನಗೆ ಕಾಲ್‌ಶೀಟ್ ಕೊಡಿ ಸಿನಿಮಾ ಮಾಡೋಣ ಎಂದು ನಾನು ಅವರ ಬಳಿ ಚರ್ಚಿಸಿದ್ದೆ" ಎಂದು ಕಲೈಪುಲಿ ಎಸ್ ತನು ವಿವರಿಸಿದ್ದಾರೆ.
ಅಂದಹಾಗೆ ಅಂದು ಅಣ್ಣಾವ್ರು, ಪುನೀತ್ ಕೇಳಿದ್ದು 'ಸಚಿನ್' ಚಿತ್ರದ ಕಥೆ. 2005ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಜಾನ್ ಮಹೇಂದ್ರ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮೆಡಿ ಚಿತ್ರದಲ್ಲಿ ವಿಜಯ್ ಜೋಡಿಯಾಗಿ ಜೆನಿಲಿಯಾ ನಟಿಸಿದ್ದರು. ಕಳೆದ ತಿಂಗಳು 'ಸಚಿನ್' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡಿತ್ತು.


Click it and Unblock the Notifications











