ಯಾವ ಕನ್ನಡ ಸ್ಟಾರ್ ಸಹ ಒಪ್ಪದಿದ್ದ 'ಧೂಮಂ' ಅಪ್ಪುಗೆ ಇಷ್ಟವಾಗಿತ್ತು, ಆದ್ರೆ ಕೆಲವರು ನಟಿಸಬೇಡಿ ಎಂದು ತಡೆದ್ರು: ಪವನ್ ಕುಮಾರ್
ಧೂಮಂ ಇದೇ ಶುಕ್ರವಾರ ( ಜೂನ್ 23 ) ಬಿಡುಗಡೆಯಾಗಲಿರುವ ನಿರೀಕ್ಷಿತ ಚಿತ್ರ. ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಲೂಸಿಯಾ ಹಾಗೂ ಯೂ ಟರ್ನ್ ರೀತಿಯ ವಿಭಿನ್ನ ಕಥಾ ಹಂದರವಿರುವ ಚಿತ್ರಗಳನ್ನು ನಿರ್ದೇಶಿಸಿದ್ದ ಪವನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಚಿತ್ರದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದು, ಜಾಹೀರಾತು ನಿರ್ದೇಶಕನಾಗಿರುವ ನಾಯಕ ದುಡ್ಡು ಮಾಡಿ ಶ್ರೀಮಂತನಾಗುವ ಹಠಕ್ಕೆ ಬಿದ್ದು, ಸಂಕಷ್ಟಕ್ಕೆ ಸಿಲುಕಿಕೊಳ್ಳಲಿರುವ ಕಥೆ ಚಿತ್ರದಲ್ಲಿರಲಿದೆ ಎಂಬುದು ತಿಳಿದುಬಂದಿತ್ತು. ಆದರೆ ಟ್ರೈಲರ್‌ನಲ್ಲಿ ಹೆಚ್ಚೇನೂ ಕಥೆಯನ್ನು ಬಿಟ್ಟುಕೊಟ್ಟಿಲ್ಲ, ವೀಕ್ಷಕರು ಇದು ಯಾವ ರೀತಿಯ ಕಥೆ ಇರಬಹುದು ಎಂಬುದನ್ನು ಊಹಿಸಲಿ ಎನ್ನುವುದು ತನ್ನ ಉದ್ದೇಶ ಎನ್ನುತ್ತಾರೆ ನಿರ್ದೇಶಕ ಪವನ್ ಕುಮಾರ್.

'ದ ಹಿಂದೂ' ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪವನ್ ಕುಮಾರ್ ಧೂಮಂ ಚಿತ್ರ ಹುಟ್ಟಿಕೊಂಡಿದ್ದೇಗೆ, ಚಿತ್ರ ಯಾವಾಗ ಸೆಟ್ಟೇರಬೇಕಿತ್ತು, ಚಿತ್ರದ ಹಿಂದಿನ ಶೀರ್ಷಿಕೆ ಏನಾಗಿತ್ತು, ಚಿತ್ರ ತಡವಾಗಲು ಕಾರಣವೇನು ಹಾಗೂ ಚಿತ್ರ ಶುರುವಾಗಲು ಎದುರಾದ ಕಷ್ಟಗಳೇನು ಎಂಬುದರ ಕುರಿತು ಮಾತನಾಡಿದ್ದಾರೆ.
"ಮೊದಲಿಗೆ ಧೂಮಂ ಚಿತ್ರವನ್ನೇ ತನ್ನ ಮೊದಲ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ ಆದರೆ ಜನರು ಇದಕ್ಕೆ ನಕ್ಕಿದ್ದರು. ಆದರೆ ಜನರು ನಕ್ಕಿದ್ದಕ್ಕೆ ಖುಷಿ ಇದೆ. ಏಕೆಂದರೆ ಧೂಮಂ ನನ್ನ ಮೊದಲ ಚಿತ್ರ ಆಗಿದ್ರೆ ಮಣ್ಣು ಮುಕ್ಕುತ್ತಿದ್ದೆ, ಬಳಿಕ ಲೂಸಿಯಾ ಬಿಡುಗಡೆಯಾಯಿತು. ನಂತರ ನಾನು ಧೂಮಂ ಚಿತ್ರವನ್ನು 2014ರಲ್ಲಿ ಘೋಷಿಸಿದೆ. ಕ್ರೌಂಡ್ ಫಂಡ್‌ನಿಂದ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದೆ. 70% ಚಿತ್ರಕಥೆ ಸಹ ಮುಗಿದಿತ್ತು. ಚಿತ್ರವನ್ನು 5 ಕೋಟಿ ಬಜೆಟ್‌ನಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಒಬ್ಬ ದೊಡ್ಡ ನಟನಿದ್ದರೆ ಮಾತ್ರ ದೊಡ್ಡ ಬಜೆಟ್ ಬರಲು ಸಾಧ್ಯ. ಆದರೆ ಸ್ಟಾರ್‌ಗಳು ಬೌಂಡರಿ ಇಟ್ಟುಕೊಂಡು ಬರುತ್ತಾರೆ. ಅವರಿಗೆ ವೀಕ್ಷಕರು ತಮ್ಮಿಂದ ಏನು ಬಯಸುತ್ತಾರೆ. ಆ ಸಮಯದಲ್ಲಿ ಗ್ರೇ ಶೇಡ್ ಇರುವ ನಟರು ಇರಲಿಲ್ಲ" ಎಂದು ಪವನ್ ಹೇಳಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಪವನ್ ಕುಮಾರ್ "ನಾನು ತುಂಬಾ ಸ್ಟಾರ್‌ಗಳನ್ನು ಈ ಚಿತ್ರಕ್ಕಾಗಿ ಸಂಪರ್ಕಿಸಲು ಯತ್ನಿಸಿದೆ. 2016ರಲ್ಲಿ ಈ ಕಥೆಯನ್ನು ಮೆಚ್ಚಿ ನನ್ನ ಜತೆ 40 ನಿಮಿಷಗಳ ಕಾಲ ಕಥೆ ಕುರಿತು ಚರ್ಚಿಸಿದ ಏಕೈಕ ಕನ್ನಡ ಸ್ಟಾರ್ ಎಂದರೆ ಅದು ಪುನೀತ್ ರಾಜ್‌ಕುಮಾರ್ ಮಾತ್ರ. ಕೆಲ ಸಮಯದ ನಂತರ ಅವರ ಸುತ್ತಲಿನ ಕೆಲ ಜನರು ಇಂಥಹ ಪಾತ್ರದಲ್ಲಿ ನೀವು ನಟಿಸಬಾರದು ಎಂದು ಹೇಳಿದ್ರು. ಅಪ್ಪು ತಮ್ಮ ಸಿನಿ ಕೆರಿಯರ್‌ನಲ್ಲಿ ಪ್ರಯೋಗಾತ್ಮಕ ಸಿನಿಮಾ ಮಾಡಬೇಕು ಎಂದುಕೊಂಡಾಗ ದ್ವಿತ್ವ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು" ಎಂದು ತಿಳಿಸಿದರು.
ಅಲ್ಲದೇ "ಈ ಸಿನಿಮಾಗೆ ಧೂಮಂ ಎಂದು ಹೆಸರಿಡುವ ಮುನ್ನ 'ನಿಕೋಟಿನ್ C10H14N2' ಎಂದು ಶೀರ್ಷಿಕೆ ಇಟ್ಟಿದ್ದನ್ನು ಸಹ ಪವನ್ ಬಹಿರಂಗಪಡಿಸಿದರು. ಆದರೆ ಓರ್ವ ಸ್ಟಾರ್ ನಟ ಚಿತ್ರದಲ್ಲಿ ನಟಿಸುವಾಗ ನೆನಪಿನಲ್ಲಿ ಉಳಿಯುವಂತಹ ಶೀರ್ಷಿಕೆ ಇಡಬೇಕು ಎಂಬ ಕಾರಣಕ್ಕೆ ಬದಲಿಸಿದೆ" ಎಂದೂ ಸಹ ಪವನ್ ಕುಮಾರ್ ಹೇಳಿಕೊಂಡಿದ್ದಾರೆ.


Click it and Unblock the Notifications











