'ರಾಮಾ ರಾಮಾ ರೇ' ಸತ್ಯ ಪ್ರಕಾಶ್ ಸಿನಿಮಾಗೆ ಪವರ್ ಸ್ಟಾರ್ ನಾಯಕ?
Recommended Video
'ರಾಮಾ ರಾಮಾ ರೇ' ಮತ್ತು 'ಒಂದಲ್ಲ ಎರಡಲ್ಲ' ಸಿನಿಮಾಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನ ಸೆಳೆದ ನಿರ್ದೇಶಕ ಸತ್ಯ ಪ್ರಕಾಶ್ ಈಗ ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿ ಇತ್ತು. 'ಒಂದಲ್ಲ ಎರಡಲ್ಲ' ಚಿತ್ರಕ್ಕಾಗಿ ಇತ್ತೀಚಿಗಷ್ಟೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡು ಸದ್ದು ಮಾಡಿದ್ದ ಸತ್ಯ ಪ್ರಕಾಶ್ ಕಡೆಯಿಂದ ಮತ್ತೊಂದು ಬಿಗ್ ನ್ಯೂಸ್ ಕೇಳಿ ಬರುತ್ತಿದೆ.
ಸತ್ಯ ಪ್ರಕಾಶ್ ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ಸೇರಿಕೊಂಡಿದ್ದರು. ಕಥೆ ಬರೆಯುವಲ್ಲಿ ಬ್ಯುಸಿಯಾಗಿದ್ದ ಪ್ರಕಾಶ್ ಈಗ ಸ್ಟಾರ್ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹೌದು, ಪಿ ಆರ್ ಕೆ ಬ್ಯಾನರ್ ನಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದ ಸತ್ಯ ಪ್ರಕಾಶ್ ಈಗ ತನ್ನ ಕಥೆಗೆ ಪುನೀತ್ ಅವರನ್ನೆ ಹೀರೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಿ ಆರ್ ಕೆ ಬ್ಯಾನರ್ ನಲ್ಲಿ ಸಾಕಷ್ಟು ಸಿನಿಮಾಗಳು ತಯಾರಾಗುತ್ತಿವೆ. ತಂತ್ರಜ್ಞಾನ, ಕಲಾವಿದರು, ನಿರ್ದೇಶಕರು, ಕಥೆ ಹೀಗೆ ಸಾಕಷ್ಟು ವಿಚಾರಗಲ್ಲಿ ಹೊಸತನ ಮತ್ತು ವಿಭಿನ್ನತೆ ಮೂಲಕ ಗಮನ ಸಳೆಯುತ್ತಿರುವ ಪಿ ಆರ್ ಕೆ ಬ್ಯಾನರ್ ನಲ್ಲಿ ಪುನೀತ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಪುನೀತ್ ಬ್ಯಾನರ್ ನಲ್ಲಿ 'ಕವಲುದಾರಿ' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದರ ಬೆನ್ನಲ್ಲೆ ಈಗ 'ಮಾಯಾ ಬಜಾರ್' ಮತ್ತು 'ಲಾ' ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿವೆ. ಇದಲ್ಲದೆ ನಿರ್ದೇಶಕರಾದ ಪನ್ನಗಾಭರಣ ಮತ್ತು ಸತ್ಯಾ ಪ್ರಕಾಶ್ ಕೂಡ ಪಿ ಆರ್ ಕೆ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸತ್ಯ ಪ್ರಕಾಶ್ ಕಥೆಗೆ ಅಪ್ಪು ನಾಯಕನಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಬಹಿರಂಗ ಪಡಿಸಿಲ್ಲ.
ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟಾಕಿ ಭಾಗದ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಚಿತ್ರತಂಡ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. 'ಯುವರತ್ನ' ಮುಗಿಯುತ್ತಿದ್ದಂತೆ ಪುನೀತ್ ಭರ್ಜರಿ ಚೇತನ್ ನಿರ್ದೇಶನದ 'ಜೇಮ್ಸ್' ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಸತ್ಯ ಪ್ರಕಾಶ್ ಮತ್ತು ಪುನೀತ್ ಕಾಂಬಿನೇಶನ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.


Click it and Unblock the Notifications











