ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ದೊಡ್ಮನೆಯಿಂದ ಸಿದ್ಧವಾಗ್ತಿದೆ ಸರ್‌ಪ್ರೈಸ್ ಗಿಫ್ಟ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಆಗಮಿಸಿ ನಮಿಸಲಿದ್ದಾರೆ.
ಅಪ್ಪು ಜಯಂತೋತ್ಸವಕ್ಕೆ ಅಭಿಮಾನಿಗಳು ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ರಕ್ತದಾನ, ಅನ್ನದಾನದಂತಹ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಇನ್ನು ಈ ಬಾರಿ ದೊಡ್ಮನೆ ಹುಡುಗನ ಹುಟ್ಟುಹಬ್ಬ ಸಂಭ್ರಮ ಹೆಚ್ಚಿಸಲು ಅಭಿಮಾನಿಗಳಿಗೆ ವಿಶೇಷವಾದ ಉಡುಗೊರೆ ಸಿದ್ಧವಾಗುತ್ತಿದೆ.

ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾಗಳಲ್ಲಿ 'ಜಾಕಿ' ಅಭಿಮಾನಿಗಳಿಗೆ ಬಹಳ ಅಚ್ಚುಮೆಚ್ಚು. ಈ ಬಾರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ರೂಪದಲ್ಲಿ 'ಜಾಕಿ' ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದ್ದಾನೆ. ಹೌದು. ಸೂರಿ ನಿರ್ದೇಶನದ 'ಜಾಕಿ' ಚಿತ್ರವನ್ನು 4K ವರ್ಷನ್‌ನಲ್ಲಿ ರೀ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ.
14 ವರ್ಷಗಳ ಹಿಂದೆ ತೆರೆಕಂಡಿದ್ದ 'ಜಾಕಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಿಸಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಲೋಕಲ್ ಹುಡುಗನಾಗಿ ಅಪ್ಪು ಪರ್ಫಾರ್ಮೆನ್ಸ್, ಡ್ಯಾನ್ಸ್, ಫೈಟ್ಸ್ ಎಲ್ಲಾ ಸೇರಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.
ಅವತ್ತಿನ ಕಾಲಕ್ಕೆ ಅಂದಾಜು 7 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣವಾಗಿದ್ದ 'ಜಾಕಿ' ಸಿನಿಮಾ 30 ಕೋಟಿ ರೂ.ಗೂ ಗಳಿಕೆ ಕಂಡಿತ್ತು. ಶತದಿನೋತ್ಸವ ಆಚರಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಶತದಿನೋತ್ಸವ ಆಚರಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಮಲಯಾಳಂ ನಟಿ ಭಾವನಾ ಮೆನನ್ ನಾಯಕಿಯಾಗಿ ನಟಿಸಿದ್ದರು. ಇನ್ನುಳಿದಂತೆ ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ಶೋಭರಾಜ್ ಸೇರಿದಂತೆ ಅನುಭವಿ ಕಲಾವಿದ್ದರು.
ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಟಾಲಿವುಡ್‌ನಲ್ಲಿ ಈ ಟ್ರೆಂಡ್ ಜೋರಾಗಿ ನಡೀತಿದೆ. ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅವರ ಬ್ಲಾಕ್‌ಬಸ್ಟರ್ ಸಿನಿಮಾಗಳು ಮತ್ತೆ ತೆರೆಗಪ್ಪಳಿಸುತ್ತಿವೆ. ಕನ್ನಡದಲ್ಲೂ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತಿರುತ್ತದೆ. ಇದೀಗ 'ಜಾಕಿ' ಸಿನಿಮಾ ಅಪ್ಪು ಹುಟ್ಟುಹಬ್ಬಕ್ಕೆ ಬರುತ್ತಿರುವುದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳಲ್ಲೇ ಬಹಳ ವಿಭಿನ್ನವಾದ ಸಿನಿಮಾ 'ಜಾಕಿ'. ಬೆಳ್ಳಿಗೆರೆ ಎನ್ನುವ ಹಳ್ಳಿಯ ಹೈದ ಜಾನಕಿರಾಮ್ ಆಗಿ ರಗಡ್ ಪಾತ್ರದಲ್ಲಿ ಅಪ್ಪು ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಮಾಡದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಂತು ತಪ್ಪುನ್ನು ಸರಿ ಮಾಡಿಕೊಳ್ಳು ಊರು ಬಿಡುವ ಜಾಕಿ ಬಂದು ಬೆಂಗಳೂರು ಸೇರುತ್ತಾನೆ. ಈ ಹಾದಿಯಲ್ಲಿ ನಾಯಕಿ ಲಕ್ಷ್ಮಿ ಜೊತೆಯಾಗುತ್ತಾಳೆ.
ಪೊಲೀಸರು ಅಂದರೆ ಹೆದರಿ ಓಡುವ ಜಾಕಿ ಕೊನೆಗೆ ಪೊಲೀಸ್ ಇಲಾಖೆಗೆ ಸಹಾಯ ಮಾಡುತ್ತಾ ಹೋಗುತ್ತಾನೆ. ಇನ್ನು ಯುವತಿಯರನ್ನು ಅಕ್ರಮ ಕಳ್ಳ ಸಾಗಾಣಿಕೆ ಮಾಡುವ ಜಾಲವನ್ನು ಭೇದಿಸಿ ಜಾಕಿ ಗೆಲ್ಲುತ್ತಾನೆ. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿ ಗೆದ್ದಿದ್ದು ಸೂರಿ.

ಸೂರಿ ರಾ ಮೇಕಿಂಗ್ 'ಜಾಕಿ' ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಎಲ್ಲಾ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದರು. ಆಸ್ಟ್ರೇಲಿಯಾ, ಯುಕೆ, ಯುಎಸ್, ಜರ್ಮನಿ ಹಾಗು ಸಿಂಗಪುರದಲ್ಲಿ ಸಿನಿಮಾ ತೆರೆಕಂಡು ಸಕ್ಸಸ್ ಕಂಡಿತ್ತು. ತೆಲುಗಿಗೂ 'ಜಾಕಿ' ಸಿನಿಮಾ ಡಬ್ ಆಗಿ ತೆರೆ ಕಂಡಿತ್ತು. 2010ರಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಮತ್ತೆ ತೆರೆಗೆ ಬರುತ್ತಿರುವುದು ವಿಶೇಷ.


Click it and Unblock the Notifications











