'ಕೆಡಿ' ಟ್ರೈಲರ್ ರಿಲೀಸ್ ಬೆನ್ನಲ್ಲೇ ಪುನೀತ್ ಸಿನಿಮಾ ಡೈಲಾಗ್ ವೈರಲ್ ಆಗಿದ್ದೇಕೆ?
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಆಕ್ಷನ್ ಪ್ಯಾಕ್ಡ್ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಧ್ರುವ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಜಬರ್ದಸ್ತ್ ಪರ್ಫಾರ್ಮನ್ಸ್, ಕೊನೆಗೆ ಕಿಚ್ಚನ ಎಂಟ್ರಿ ನೋಡಿ ಹುಬ್ಬೇರಿಸಿದ್ದಾರೆ. ಟ್ರೈಲರ್ ನೋಡಿ ಕೊನೆಗೂ ಸಿನಿಮಾ ಬಗ್ಗೆ ಕೊಂಚ ನಿರೀಕ್ಷೆ ಮೂಡಿದೆ.
4 ವರ್ಷಗಳ ಹಿಂದೆ ಶುರುವಾಗಿದ್ದ 'ಕೆಡಿ' ಸಿನಿಮಾ ಅಂತೂ ಇಂತೂ ಮುಂದಿನ ವಾರ ತೆರೆಗೆ ಬರ್ತಿದೆ. ಸೋಲಿನ ಸುಳಿಗೆ ಸಿಲುಕಿರುವ ಹಲವರಿಗೆ ಈ ಸಿನಿಮಾ ಗೆಲುವಿನ ಟಾನಿಕ್ ನೀಡುವ ಲೆಕ್ಕಾಚಾರ ಶುರುವಾಗಿದೆ. ಪ್ರೇಮ್ ಸಿನಿಮಾ ಅಂದ್ಮೇಲೆ ಡೈಲಾಗ್ಸ್ ಹಾಗೂ ಸಾಂಗ್ಸ್ ಬಗ್ಗೆ ಬಹಳ ನಿರೀಕ್ಷೆ ಇರುತ್ತದೆ. ಈಗಾಗಲೇ ಚಿತ್ರದ ಆಲ್ಬಮ್ ಹಿಟ್ ಆಗಿದೆ. ಸದ್ಯ ಟ್ರೈಲರ್ ಅಲ್ಲಿ ಇರುವ ಒಂದು ಡೈಲಾಗ್ ಪುನೀತ್ ರಾಜ್‌ಕುಮಾರ್ ಡೈಲಾಗ್ ಅನ್ನು ನೆನಪಿಸ್ತಿದೆ.

'ಕೆಡಿ' ಟ್ರೈಲರ್ ರಿಲೀಸ್ ಬೆನ್ನಲ್ಲೇ ಅಪ್ಪು ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದು ಕೂಡ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಡೈಲಾಗ್. ಹಾಗಾಗಿ ಬೇಕೆಂದೇ ಪ್ರೇಮ್ ಅದನ್ನು ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇನ್ನು ಟ್ರೈಲರ್‌ನಲ್ಲಿ ಕಾಳಿ(ಧ್ರುವ), ಧಕ್ ದೇವ(ಸಂಜಯ್ ದತ್), ಸತ್ಯವತಿ(ಶಿಲ್ಪಾ ಶೆಟ್ಟಿ) ದರ್ಬಾರ್ ಕೊಂಚ ಜೋರಾಗಿಯೇ ಇದೆ. ವೈಲೆನ್ಸ್ ಕೂಡ ಅತಿಯಾಗಿರುವುದು ಗೊತ್ತಾಗುತ್ತಿದೆ.
ಆರ್ಮುಗ ರವಿಶಂಕರ್ ಖಡಕ್ ಡೈಲಾಗ್ ಹಿನ್ನೆಲೆಯಲ್ಲಿ 'ಕೆಡಿ' ಟ್ರೈಲರ್ ಶುರುವಾಗುತ್ತದೆ. ಲಾಂಗ್ ಹಿಡಿದ ಕಾಳಿಯ ಆರ್ಭಟ, ಮಚ್ಚ್‌ಲಕ್ಷ್ಮಿ ಜೊತೆ ಲವ್, ಮತ್ತೆ ಅವನ ಬಾಳಿನಲ್ಲಿ ಬಿರುಗಾಳಿ ಎದ್ದ ಬಳಿಕ ಮತ್ತಷ್ಟು ವೈಲೆಂಟ್ ಆಗುವ ಕಾಳಿಯ ಅಬ್ಬರ ನೋಡಬಹುದು. "ಮೊದಲನೆ ಕಿತ ಮಚ್ಚ್ ಹಿಡ್ದಿವ್ನಿ, ಅಪ್ಪಿ ತಪ್ಪಿ ಕೈಕಾಲ್ ಹೋಗಿ ಜೀವಂತವಾಗಿ ಉಳ್ಕಂಬಿಟ್ರೆ, ನಿಮ್ಮ್ ಹಿತ್ತವರಿಗೆ ತೆಪ್ಪಾಯ್ತು ಅಂದುಬಿಡ್ರಣ್ಣ" ಎಂದು ಧ್ರುವ ರುದ್ರ ನರ್ತನ ಮಾಡಿದ್ದಾರೆ.
'ರಾಜ್ ದಿ ಶೋ ಮ್ಯಾನ್' ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳಿದ್ದರು. ಆ ಚಿತ್ರದ ಆಕ್ಷನ್ ಸನ್ನಿವೇಶವೊಂದರಲ್ಲಿ ಲಾಂಗ್ ಹಿಡ್ದು ಅಪ್ಪು ಇದೇ ರೀತಿ ಡೈಲಾಗ್ ಹೊಡೆದಿದ್ರು. "ಅಣ್ಣ, ಲೈಫಲ್ಲಿ ಇದೇ ಮೊದಲನೇ ಸಲ ಮಚ್ಚು ಹಿಡಿತಾ ಇರೋದು, ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕೊಬೇಡ್ರಣ್ಣೋ" ಎನ್ನುವ ಡೈಲಾಗ್ ಹಿಟ್ ಆಗಿತ್ತು. ಈಗ ಈ ವಿಡಿಯೋ ತುಣುಕನ್ನು ಅಭಿಮಾನಿಗಳು ವೈರಲ್ ಮಾಡ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗಿದೆ. 60-70ರ ದಶಕದ ಬೆಂಗಳೂರು ಭೂಗತ ಲೋಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ರೆಟ್ರೋ ಸ್ಟೈಲ್‌ನಲ್ಲಿ ಪ್ರೇಮ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಕೂಡ ವಿಭಿನ್ನ ಅವತಾರಗಳಲ್ಲಿ ಮಿಂಚಿದ್ದಾರೆ. ಐಟಂ ಸಾಂಗ್‌ನಲ್ಲಿ ನೋರಾ ಫತೇಹಿ ಕುಣಿದಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ 'ಕೆಡಿ' ಚಿತ್ರಕ್ಕಿದೆ. ಪ್ರೇಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಸಿನಿಮಾಗಳು ಒಂದಿಲ್ಲೊಂದು ಸಮಸ್ಯೆಗೆ ಸಿಲುಕುತ್ತಿದೆ. 'ಕೆಡಿ' ಚಿತ್ರಕ್ಕೂ ಸಮಸ್ಯೆ ತಪ್ಪಲಿಲ್ಲ. ಎಲ್ಲವನ್ನು ಮೀರಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ. ಐಪಿಎಲ್ ನಡುವೆ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತದೆ ಕಾದು ನೋಡಬೇಕಿದೆ.


Click it and Unblock the Notifications