ಬ್ಯಾಟು ಬಾಲು ಇದೆ ಅಂತ ಫೀಲ್ಡ್‌ಗೆ ಇಳಿದವರಲ್ಲ ನಾವು; ಅಪ್ಪು ಡೈಲಾಗ್ ನಿಜವಾಯ್ತು
ಐಪಿಎಲ್ 18ನೇ ಸೀಸನ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿದಿದೆ. 18 ವರ್ಷಗಳ ಅಭಿಮಾನಿಗಳ ಆಸೆ ಈಡೇರಿದೆ. ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂತು. ಈ ನಡುವೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕೂಡ ಕೆಲವರು ನೆನಪು ಮಾಡಿಕೊಂಡಿದ್ದರು. ಈ ಹಿಂದೆ ಆರ್‌ಸಿಬಿ ರಾಯಭಾರಿಯಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ತೊಟ್ಟು ಮೈದಾನದಲ್ಲಿ ಮಿಂಚಿದ್ದರು. ಆ ಫೋಟೊಗಳನ್ನು ಶೇರ್ ಮಾಡಿ ಅಭಿಮಾನಿಗಳು ನೆಚ್ಚಿನ ನಟನನ್ನು ನೆನಪು ಮಾಡಿಕೊಂಡಿದ್ದರು.

'ಯುವರತ್ನ' ಚಿತ್ರದಲ್ಲಿ ಅಪ್ಪು ನಟಿಸಿದ್ದರು. ಆ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಅಬ್ಬರಿಸಿದ್ದರು. ಇಬ್ಬರೂ ಮುಖಾಮುಖಿಯಾಗುವ ಸನ್ನಿವೇಶದಲ್ಲಿ ಒಂದು ಮಾಸ್ ಡೈಲಾಗ್ ಇತ್ತು. ಆರ್‌ಸಿಬಿ ತಂಡ ಕಪ್ ಗೆಲ್ಲುವ ಬಗ್ಗೆ ಪ್ರಸ್ತಾಪಿಸಿ ಸಂತೋಷ್ ಆನಂದ್ ರಾಮ್ ಬರೆದಿದ್ದ ಖಡಕ್ ಡೈಲಾಗ್ ಅದು. ಪುನೀತ್ ರಾಜ್‌ಕುಮಾರ್ ಹೇಳಿದ್ದ ಆ ಡೈಲಾಗ್ ಇದೀಗ ನಿಜವಾಗಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
"ಆರ್‌ಸಿಬಿ ಮ್ಯಾಚ್ ಗೆಲ್ಬೋದು, ಕಪ್ ಗೆಲ್ಲೋಕೆ ಆಗಲ್ಲ" ಎಂದು ಆಂಟೊನಿ ಜೋಸೆಫ್(ಧನಂಜಯ್) ಡೈಲಾಗ್‌ಗೆ "ಆ ನಂಬಿಕೆ ಕಳ್ಕೊಂಡಿಲ್ಲ, ಕಳ್ಕೊಳ್ಳೋದು ಇಲ್ಲ. ಬ್ಯಾಟು ಬಾಲು ಇದೆ ಅಂತ ಫೀಲ್ಡ್‌ಗೆ ಇಳಿದವರಲ್ಲ ನಾವು, ಹೊಡಿತ್ತೀವಿ ಅಂತ ಕಾನ್ಫಿಡೆನ್ಸ್ ಇರೋದಕ್ಕೆ ಫೀಲ್ಡ್ ಅಲ್ಲಿ ಇರೋದು" ಎನ್ನುವ ಯುವರತ್ನ(ಪುನೀತ್) ಕೌಂಟರ್ ಡೈಲಾಗ್ ಸಖತ್ ಆಗಿ ಇತ್ತು. ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಟೀಸರ್‌ನಲ್ಲೇ ಈ ಡೈಲಾಗ್ ಇಟ್ಟು ಸಿನಿಮಾ ಬಗ್ಗೆ ಬಹಳ ಕುತೂಹಲ ಮೂಡುವಂತೆ ಮಾಡಲಾಗಿತ್ತು. ಅಪ್ಪು ಹೇಳಿದಂತೆ ಕೊನೆಗೂ ಆರ್‌ಸಿಬಿ ಕಪ್ ಗೆದ್ದುಬಿಟ್ಟಿದೆ.
ಆರ್‌ಸಿಬಿ ಕಪ್ ಗೆದ್ದಿರೋದು ಹಾಗೂ 'ಯುವರತ್ನ' ಚಿತ್ರದ ಆ ಡೈಲಾಗ್ ಬಗ್ಗೆ ಸಂತೋಷ್ ಆನಂದ್ ರಾಮ್ ಮಾಮಾತನಾಡಿದ್ದಾರೆ. "ಬಹಳ ಖುಷಿಯಾಗುತ್ತಿದೆ. ಅಭಿಮಾನಿಗಳು ಅಂದಮೇಲೆ ಬಹಳ ಹೋಪ್ಸ್ ಇರುತ್ತೆ. ಅದನ್ನು ಅಪ್ಪು ಸರ್ ರೀತಿಯ ದೊಡ್ಡ ನಟ ಹೇಳಿದಾಗ ಜನರಿಗೆ ಮತ್ತಷ್ಟು ಜೋಶ್ ಬರುತ್ತೆ. ಆ ಚಿತ್ರದ ಕಥೆ ಕೂಡ ಸ್ಪೋರ್ಟ್ಸ್ ಬಗ್ಗೆ ಇತ್ತು. ಈಗ ಆ ಡೈಲಾಗ್ ಹೊಂದಿಕೆಯಾಗುತ್ತಿರುವುದು ಸೂಪರ್" ಎಂದು ಹೇಳಿದ್ದಾರೆ.

"ಆರ್‌ಸಿಬಿ ಗೆದ್ದ ಬೆನ್ನಲ್ಲೇ ಬಾಸ್(ಅಪ್ಪು) ಈಗ ಇರಬೇಕಿತ್ತು, ಎಂದು ಸಾಕಷ್ಟು ಜನ ನನ್ನ ಬಳಿ ಹೇಳುತ್ತಿದ್ದಾರೆ. ಅಪ್ಪು ಸರ್ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದರು ಎನ್ನುತ್ತಿದ್ದಾರೆ. ಅವರಿಗೆ ಈ ಗೆಲುವನ್ನು ಡೆಡಿಕೇಟ್ ಮಾಡಬೇಕು. ನಾವು ಕೂಡ ಮ್ಯಾಚ್, ಸೆಲೆಬ್ರೇಷನ್ ಎಲ್ಲವನ್ನು ರಾತ್ರಿ 1 ಗಂಟೆಯವರೆಗೂ ನೋಡಿ ಎಂಜಾಯ್ ಮಾಡಿದ್ವಿ. ಫೈನಲ್‌ಗೆ ಪಂಜಾಬ್ ಬಂದಿದ್ದು ಸ್ವಲ್ಪ ಸುಲಭ ಆಯ್ತು. ಮುಂಬೈ ಬಂದಿದ್ದರೆ ಕಷ್ಟ ಆಗುತ್ತಿತ್ತೇನೋ, ಈ ಬಾರಿ ಆರ್‌ಸಿಬಿ ಪ್ರದರ್ಶನ ಬಹಳ ಚೆನ್ನಾಗಿತ್ತು" ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.
ಈ ಬಾರಿ ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಅದೇ ಆರ್‌ಸಿಬಿ ಕಪ್ ಗೆಲ್ಲಲು ಸಹಾಯಕವಾಗಿತು. ಈ ಬಗ್ಗೆ ಪ್ರತಿಕ್ರಿಯಿಸಿ "ಈ ಬಾರಿ ಏಳೆಂಟು ಮಂದಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಬೇರೆ ಬೇರೆ ಆಟಗಾರರಿಗೆ ಅದು ದಕ್ಕಿತ್ತು. ಅಂದರೆ ಎಲ್ಲರೂ ತಂಡಕ್ಕಾಗಿ ಆಡಿದ್ದಾರೆ. ಕೊಹ್ಲಿ 18 ವರ್ಷದ ಶ್ರಮ, ತ್ಯಾಗ, ಬೇರೆ ಎಷ್ಟೇ ಅವಕಾಶ ಸಿಕ್ಕರೂ ಆರ್‌ಸಿಬಿ ತಂಡ ಬಿಟ್ಟು ಹೋಗಲಿಲ್ಲ. ಅವರ ಆ ನಿಷ್ಠೆ, ಅಭಿಮಾನಿಗಳು ಅವರ ಮೇಲಿಟ್ಟಿದ್ದ ನಿಷ್ಠೆ, ಜೊತೆಗೆ ದೇವರ ಆಶೀರ್ವಾದ. ಬಂದ ದಾರಿ ಮರೀಬಾರದು. ಎಬಿಡಿ, ಗೇಲ್ ಬಂದಿದ್ದು ಸಂತೋಷ ತಂದಿತ್ತು. ನಾನು ಮನೆಯಲ್ಲೇ ಮ್ಯಾಚ್ ನೋಡ್ದೆ" ಎಂದು ಸಂತೋಷ್ ಆನಂದ್‌ರಾಮ್ ವಿವರಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವರತ್ನ' ಸಿನಿಮಾ 2021ರಲ್ಲಿ ತೆರೆಗೆ ಬಂದಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸಿನಿಮಾ ಬಿಡುಗಡೆ ಆಗಿದ್ದರಿಂದ ಕೊಂಚ ಹಿನ್ನಡೆಯಾಗಿತ್ತು. ಪ್ರಕಾಶ್ ರಾಜ್, ದಿಗಂತ್, ಸಾಯಿ ಕುಮಾರ್ ಚಿತ್ರದ ತಾರಾಗಣದಲ್ಲಿದ್ದರು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ನಟನೆಯ 'ರಾಜಕುಮಾರ' ಚಿತ್ರಕ್ಕೆ ಸಂತು ಆಕ್ಷನ್ ಕಟ್ ಹೇಳಿದ್ದರು.
ಅಂದಹಾಗೆ ದೀಪಿಕಾ ಪಡುಕೋಣೆ, ಪುನೀತ್ ರಾಜ್‌ಕುಮಾರ್, ರಮ್ಯಾ, ಶಿವ ರಾಜ್‌ಕುಮಾರ್, ಉಪೇಂದ್ರ ಮತ್ತು ಗಣೇಶ್ ಈ ಹಿಂದೆ ಆರ್‌ಸಿಬಿ ತಂಡದ ಅಂಬಾಸಿಡರ್ ಆಗಿ ಮಿಂಚಿದ್ದರು. ಆದರೆ ಇತ್ತೀಚೆಗೆ ಫ್ರಾಂಚೆಸಿ ಯಾರನ್ನು ಕೂಡ ಆಯ್ಕೆ ಮಾಡುತ್ತಿಲ್ಲ. ಒಟ್ಟಾರೆ ಆರ್‌ಜಿಬಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. "ಈ ಸಲ ಕಪ್ ನಮ್ದೇ" ಎನ್ನುತ್ತಿದ್ದವರು, ಈಗ "ಮುಂದಿನ ಸಲ ಕೂಡ ಕಪ್ ನಮ್ದೇ" ಎನ್ನುತ್ತಿದ್ದಾರೆ.


Click it and Unblock the Notifications











