ಇದಪ್ಪಾ ಅಪ್ಪು ಕ್ರೇಜ್ ಅಂದ್ರೆ; 'ಜಾಕಿ' ರೀ-ರಿಲೀಸ್ ಅಡ್ವಾನ್ಸ್ ಬುಕ್ಕಿಂಗ್‌ಗೆ ಸಖತ್ ರೆಸ್ಪಾನ್ಸ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ಇದೇ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ. 12 ವರ್ಷಗಳ ಹಿಂದೆ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದೆ.
ದುನಿಯಾ ಸೂರಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಜಾಕಿ' ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಇದೀಗ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ಹೊಸ ರೂಪದಲ್ಲಿ ಮತ್ತೆ ರಿಲೀಸ್ ಮಾಡುತ್ತಿದೆ. 4K ವರ್ಷನ್‌ನಲ್ಲಿ ಸಿನಿಮಾ ಹೊಸ ಅನುಭವ ನೀಡಲಿದೆ. ಅಭಿಮಾನಿಗಳು ಮತ್ತೊಮ್ಮೆ ತೆರೆಮೇಲೆ ಜಾನಕಿರಾಮ ಅಲಿಯಾಸ್ 'ಜಾಕಿ' ಖದರ್ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿ ಎರಡೂವರೆ ವರ್ಷ ಕಳೆದಿದೆ. ನಗುವಿನ ಒಡೆಯನ ಅಗಲಿಕೆಯ ನೋನು ಇನ್ನು ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ಭಾನುವಾರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಅದಕ್ಕಿಂತ 2 ದಿನ ಮೊದಲೇ ಥಿಯೇಟರ್‌ಗಳಲ್ಲಿ ಅಪ್ಪು 'ಜಾಕಿ' ಆಗಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ರಾಜ್ಯಾದ್ಯಂತ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಸದ್ಯ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಇತ್ತೀಚೆಗೆ ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ರೀ- ರಿಲೀಸ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಹಳೇ ಹಿಟ್ ಸಿನಿಮಾಗಳನ್ನು ವಿಶೇಷ ಸಂದರ್ಭಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಕನ್ನಡದಲ್ಲಿ ಈಗ 'ಜಾಕಿ'ಯನ್ನು ಮತ್ತೆ ಬೆಳ್ಳಿಪರದೆಯಲ್ಲಿ ಕಣ್ತುಂಬಿಕೊಳ್ಳುವ ಸಮಯ ಬರ್ತಿದೆ.
ಕೆ. ಜಿ ರಸ್ತೆ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ, ಸ್ಯಾಂಕಿ ರಸ್ತೆಯ ಕಾವೇರಿ, ಬನಶಂಕರಿಯ ಕಾಮಾಕ್ಯ ಸೇರಿದಂತೆ ನಗರದ ಹಲವು ಥಿಯೇಟರ್‌ಗಳಲ್ಲಿ ಮೊದಲ ದಿನ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ 7.30ಕ್ಕೆ ಮೊದಲ ಪ್ರದರ್ಶನ ಇದೆ. ಈಗಾಗಲೇ ಆ ಶೋ ಟಿಕೆಟ್ ಸೋಲ್ಡೌಟ್ ಆಗಿದೆ. ನರ್ತಕಿಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಫ್ಯಾನ್ಸ್ ಶೋ ಕೂಡ ಆಯೋಜಿಸಲಾಗುತ್ತಿದೆ. ಬೆಳಗ್ಗೆ 10.30ರ ಶೋ ಟಿಕೆಟ್ ಹಾಟ್ ಕೇಕ್ ರೀತಿ ಮಾರಾಟವಾಗಿದೆ.

ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಅರ್ಧ ಗಂಟೆಯಲ್ಲಿ 2 ಶೋಗಳ ಸೋಲ್ಡೌಟ್ ಆಗಿದೆ. ಶೀಘ್ರದಲ್ಲೇ ರಾಜ್ಯದ ಇನ್ನು ಹಲವು ಭಾಗಗಳಲ್ಲಿ ಬುಕ್ಕಿಂಗ್ ಓಪನ್ ಆಗಲಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ನಮ್ಮ ಊರಲ್ಲಿ ಶೋ ಕೊಡಿ ಬೇಗ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಿ ಎಂದು ವಿತರಕರನ್ನು ಕೇಳುತ್ತಿದ್ದಾರೆ. ದುನಿಯಾ ಸೂರಿ ತಮ್ಮದೇ ಶೈಲಿಯಲ್ಲಿ 'ಜಾಕಿ' ಸಿನಿಮಾ ಕಥೆ ಕಟ್ಟಿಕೊಟ್ಟಿದ್ದರು. ರಗಡ್ ಹೈದನ ಪಾತ್ರದಲ್ಲಿ ಅಪ್ಪು ಕಮಾಲ್ ಮಾಡಿದ್ದರು.
ಬೆಳ್ಳಿಗೆರೆಯ ಜಾನಕಿರಾಮನ ಏಳುಬೀಳಿನ ಕಥೆಯ ಜೊತೆಗೆ ಮಾನವ ಕಳ್ಳಸಾಗಣೆಯ ವಿಚಾರವನ್ನು ಸೇರಿಸಿ ಸೂರಿ ಪಕ್ಕಾ ಮಾಸ್ ಮಾಸಾಲ ಸಿನಿಮಾ ಮಾಡಿದ್ದರು. ಅಪ್ಪುಗೆ ನಾಯಕಿಯಾಗಿ ಭಾವನಾ ಮೆನನ್ ಸಾಥ್ ಕೊಟ್ಟಿದ್ದರು. ವಿ. ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು. ಎಲ್ಲಾ ಸೇರಿ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು.
ಪುನೀತ್ ರಾಜ್‌ಕುಮಾರ್, ಭಾವನಾ ಜೊತೆಗೆ ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ಶೋಭರಾಜ್, ಸುಮಿತ್ರಾ ಜಾಕಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 7 ಕೋಟಿ ರೂ. ಬಜೆಟ್ ಸಿನಿಮಾ 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎನ್ನುವ ಅಂದಾಜಿದೆ. ಇದೀಗ ಮತ್ತೆ ಸಿನಿಮಾ ತೆರೆಗರ ಬರುತ್ತಿದ್ದು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.


Click it and Unblock the Notifications











