»   » ಹ್ಯಾಪಿ ಬರ್ತಡೇ ಅಪ್ಪು ಅನ್ನುತ್ತಿದೆ ಸ್ಯಾಂಡಲ್‌ವುಡ್‌

ಹ್ಯಾಪಿ ಬರ್ತಡೇ ಅಪ್ಪು ಅನ್ನುತ್ತಿದೆ ಸ್ಯಾಂಡಲ್‌ವುಡ್‌

Posted By: Staff
Subscribe to Filmibeat Kannada

ರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಹೊರತುಪಡಿಸಿದರೆ, ರಾಜ್‌ ಕುಟುಂಬದ ಇತರ ಸದಸ್ಯರ ಹುಟ್ಟುಹಬ್ಬ ಸುದ್ದಿಯಾಗುವುದು ಕಡಿಮೆ. ಅಂದರೆ ಉಳಿದವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಲ್ಲ ; ಆ ಆಚರಣೆ ಮನೆ ಮಟ್ಟಿಗೆ ಸೀಮಿತವಾಗಿರುತ್ತದೆ. ಈ ಮುನ್ನ ಪುನೀತ್‌ ಹುಟ್ಟುಹಬ್ಬದ ಆಚರಣೆ ಕೂಡ ಗದ್ದಲವಿಲ್ಲದೇ ಸರಿದುಹೋಗುತ್ತಿತ್ತು . ಈ ಸಾರಿ ಹಾಗಲ್ಲ - ಅಪ್ಪು ನಾಯಕನಾಗಿದ್ದಾನೆ. ಅದಮೇಲೆ ಬರ್ತಡೇ ಆಚರಿಸಿಕೊಳ್ಳದಿದ್ದರೇ ಹೇಗೆ! ಮಾರ್ಚ್‌- 17 ಪುನೀತ್‌ ಹುಟ್ಟುಹಬ್ಬ.

ಪುನೀತ್‌ ಹುಟ್ಟುಹಬ್ಬ ರಾಜ್‌ ಅಭಿಮಾನಿಗಳ ಪಾಲಿಗೆ ಸಂಭ್ರಮದ ಆಚರಣೆಯಾಗಿದೆ. ಇನ್ನೇನು ಪುನೀತ್‌ ಅವರ ಹೀರೋ ಇನಿಂಗ್ಸ್‌ನ ಮೊದಲನೆ ಚಿತ್ರ ಅಪ್ಪು ಬಿಡುಗಡೆಯ ದಿನ ಹತ್ತಿರವಾಗುತ್ತಿದೆ. ಅಪ್ಪಾಜಿ ಹುಟ್ಟು ಹಬ್ಬಕ್ಕೆ ಅಪ್ಪು- ಎಂದು ಮುಹೂರ್ತದ ದಿನವೇ ಪ್ರಕಟಿಸಲಾಗಿತ್ತು . ಏಪ್ರಿಲ್‌ 24 ರಾಜ್‌ ಹುಟ್ಟುಹಬ್ಬ. ಅಪ್ಪು , ಅಣ್ಣಾವ್ರಿಗೆ ಬರ್ತಡೇ ಗಿಫ್ಟ್‌ !

ಅಪ್ಪು ಬಗೆಗೆ ಉದ್ಯಮ ಭಾರೀ ಭರವಸೆ ಇರಿಸಿಕೊಂಡಿದೆ. ಹೇಳಿಕೇಳಿ ಇದು ಹೊಸಬರ ಜಮಾನ. ಹೊಸಮುಖಗಳು ಯಶಸ್ಸು ಕಾಣುತ್ತಿರುವ ಈ ಹೊತ್ತು , ರಾಜ್‌ ಬಳಗದ ರಕ್ಷಾ ವರ್ಚಸ್ಸಿನೊಂದಿಗೆ ಕಣಕ್ಕಿಳಿಯುತ್ತಿರುವ ಅಪ್ಪುಗೆ ಯಶಸ್ಸು ಖಂಡಿತ ಅನ್ನುವುದು ಉದ್ಯಮದ ಲೆಕ್ಕಾಚಾರ.

ಪುನೀತ್‌ ಮೊದಲ ಸಿನಿಮಾದ ಬಗೆಗೆ ಖುದ್ದು ಪಾರ್ವತಮ್ಮ ಅವರೇ ಮುತುವರ್ಜಿ ವಹಿಸಿದ್ದಾರೆ. ಚಿತ್ರದ ಪ್ರತಿಹಂತವನ್ನೂ ಗಮನಿಸುತ್ತಿರುವ ಅವರಿಗೆ ಕಿರಿಮಗನ ಪ್ರವೇಶ ಭರ್ಜರಿಯಾಗಿರಬೇಕೆಂಬ ಆಸೆ. ಆ ಕಾರಣದಿಂದಾಗಿಯೇ ಈಗಾಗಲೇ ಚಿತ್ರೀಕರಣ ಮುಗಿದಿರುವ ಕೆಲ ದೃಶ್ಯಗಳನ್ನು ಮತ್ತೆ ಶೂಟ್‌ ಮಾಡಲು ಪಾರ್ವತಮ್ಮ ಸೂಚಿಸಿದ್ದಾರೆ ಎನ್ನುವ ಸುದ್ದಿಯೂ ಉದ್ಯಮದಲ್ಲಿ ಚಲಾವಣೆಯಲ್ಲಿದೆ.

ರಾಜ್‌ಕುಮಾರ್‌ ಅವರು ಅಪ್ಪುವಿಗಾಗಿ ಒಂದು ಗೀತೆಯನ್ನು ಹಾಡಿರುವುದು ಲೇಟೆಸ್ಟ್‌ ಸುದ್ದಿ . ಇತ್ತೀಚಿನ ದಿನಗಳಲ್ಲಿ ಉದ್ಯಮದ ಚಟುವಟಿಕೆಗಳಿಂದ ಸಂಪೂರ್ಣ ದೂರವಿದ್ದ ರಾಜ್‌, ಅಪ್ಪುಗಾಗಿ ಮೈಕ್‌ ಕೈಗೆತ್ತಿಕೊಂಡಿರುವುದು ವಿಶೇಷ. ಒಟ್ಟಿನಲ್ಲಿ ಅಪ್ಪು ಯಶಸ್ಸಿಗಾಗಿ ಇಡೀ ರಾಜ್‌ ಕುಟುಂಬ ಟೊಂಕ ಕಟ್ಟಿದೆ.

English summary
Appu celebrates his birthday : This time its public and special
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada