ಪಾಪ ತುಂಬಾ ನೋವಾಗಿರಬೇಕು ; ತಮ್ಮ ವಿರುದ್ಧ ಬಂಧನ ವಾರಂಟ್ ಜಾರಿ ಕುರಿತು ನಟ ಪ್ರಕಾಶ್ ರಾಜ್ ಸ್ಪಷ್ಟನೆ
ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಆ ಸುದ್ದಿಗಳು ವೈರಲ್ ಆಗಿರುತ್ತಾವೆ. ಸದ್ಯ ಪ್ರಕಾಶ್ ರಾಜ್ ವಿಚಾರದಲ್ಲಿ ಕೂಡ ಇದೇ ಆಗಿದೆ.

ಹೌದು, ಅಸಲಿಗೆ ಕೆಲ ದಿನಗಳ ಹಿಂದೆ ಧರ್ಮಸ್ಥಳದ ತಲೆ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆ ಪ್ರಕಾಶ್ ರಾಜ್ ಮಾಧ್ಯಮದವರ ಎದುರು ಸ್ಪಷ್ಟೀಕರಣ ನೀಡಲು ಬಂದಿದ್ದರು. ಆದರೆ ವಿವಾದದ ಕಿಡಿಯೊಂದನ್ನು ಗೀರಿದ್ದರು. ಮಾರಿಕೊಂಡ ಮಾಧ್ಯಮದವರು ಎನ್ನುವ ಕಿಡಿ ಅದು. ಇದರಿಂದ ಪ್ರಕಾಶ್ ರಾಜ್ ಮತ್ತು ಪತ್ರಕರ್ತರ ನಡುವೆ ವಾಗ್ಯುದ್ದ ನಡೆದಿತ್ತು.
ಇದಾದ ಬೆನ್ನಲ್ಲೇ ಒಂದೇ ಹೆಸರಿನಲ್ಲಿ ನಾಲ್ಕು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂಬ ಆರೋಪ ಪ್ರಕಾಶ್ ರಾಜ್ ವಿರುದ್ದ ಕೇಳಿ ಬಂತು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ಪ್ರಕಾಶ್ ರಾಜ್ ವಿರುದ್ಧ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟೊಂಕ ಕಟ್ಟಿ ನಿಂತಿತು. ಭಾರೀ ಚರ್ಚೆಯಾಯ್ತು.
ದಿಲೀಪ್ ಕುಮಾರ್ ಸಲ್ಲಿಸಿದ್ದ ದೂರಿನ ಮೇರೆಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕಾಶ್ ರಾಜ್ ವಿರುದ್ದ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ ಎಂದು ಮಾಧ್ಯಮಗಳಲ್ಲಿಯೂ ವರದಿಯನ್ನು ಕೂಡ ಮಾಡಲಾಯ್ತು.
ಇಷ್ಟೇ ಅಲ್ಲ ಈ ಹಿಂದೆ ಪ್ರಕಾಶ್ ರಾಜ್ ವಿರುದ್ಧ ಎರಡು ಬಾರಿ ಜಾಮೀನು ರಹಿತ ವಾರಂಟ್ ಗಳನ್ನು ಹೊರಡಿಸಲಾಗಿದ್ದರೂ ಕೂಡ, ಪ್ರಕಾಶ್ ರಾಜ್ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮತ್ತೊಮ್ಮೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ ಎಂದು ಕೂಡ ಹೇಳಲಾಗಿತ್ತು.

ಆದರೆ, ವಾಸ್ತವದಲ್ಲಿ ಸುಳ್ಳು. ಖುದ್ದು ಪ್ರಕಾಶ್ ರಾಜ್ ಈ ಮಾತನ್ನು ಹೇಳಿದ್ದಾರೆ. ತಮ್ಮ ಬಗ್ಗೆ ಕೇಳಿ ಬರುತ್ತಿರುವ ಈ ಸುದ್ದಿಗಳನ್ನೆಲ್ಲಾ ತಳ್ಳಿಹಾಕಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಕಾಶ್ ರಾಜ್, ತಮ್ಮ ಬಗ್ಗೆ ಹಬ್ಬಿಸಲಾದ ಸುದ್ದಿಗಳೆಲ್ಲವೂ ಫೇಕ್ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ವಾರಂಟ್ ಹೊರಡಿಸಿರುವ ಬಗ್ಗೆ ವರದಿಗಳನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್, ಸುಳ್ಳುಸುದ್ದಿ ಸ್ರಷ್ಟಿಸುವುದರಲ್ಲಿ ಕಾರ್ಯನಿರತರಾದ ಮಾರಿಕೊಂಡವರು. ಪಾಪ ತುಂಬಾ ನೋವಾಗಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ತಮ್ಮನ್ನು ತಾವು ಮಾರಿಕೊಂಡವರು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಹರಡುತ್ತಿದ್ದಾರೆ.. ಅವರಿಗೆ ತುಂಬಾ ನೋವಾಗಿರಬೇಕು. ಆದರೆ, ಅವರನ್ನು ಬ್ಯುಸಿಯಾಗಿಟ್ಟಿದ್ದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ ಎಂದಿದ್ದಾರೆ. ಈ ಮೂಲಕ ಎಲ್ಲವೂ ಸುಳ್ಳು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಇನ್ನುಳಿದಂತೆ ವಿವಾದಗಳ ಹೊರತಾಗಿ ಪ್ರಕಾಶ್ ರಾಜ್ ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಅಜಯ್ ದೇವಗನ್ ಅಭಿನಯದ ''ದೃಶ್ಯಂ 3'' ಚಿತ್ರದಲ್ಲಿ ಅಭಿನಯಿಸಿರುವ ಪ್ರಕಾಶ್ ರಾಜ್ ಕನ್ನಡದಲ್ಲಿ ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಅಭಿನಯದ ''ಫಾದರ್'' ಚಿತ್ರದಲ್ಲಿಯೂ ಕೂಡ ಆಕ್ಟ್ ಮಾಡಿದ್ದಾರೆ. ಇನ್ನು ಪ್ರಭಾಸ್ ಅಭಿನಯದ ''ಸ್ಪಿರಿಟ್'' ಚಿತ್ರದಲ್ಲಿ ಕೂಡ ಪ್ರಕಾಶ್ ರಾಜ್ ಇದ್ದಾರೆ ಎಂದು ಹೇಳಲಾಗಿತ್ತು.
ಆದರೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಸೃಜನಾತ್ಮಕವಾದ ಭಿನ್ನಾಭಿಪ್ರಾಯಗಳಿಂದ ಪ್ರಕಾಶ್ ರಾಜ್ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿವೆ.


Click it and Unblock the Notifications