ಬೆಂಗಳೂರು-ಮಂಗಳೂರು ಎಲ್ಲೆಲ್ಲೂ 'ಪುರುಷೋತ್ತಮನ ಪ್ರಸಂಗ' ಹವಾ ; ಇಲ್ಲಿದೆ ಮನಸ್ಸಿಗೆ ಹತ್ತಿರವಾಗುವ ಕಥೆ..!
ಕರಾವಳಿ ಪ್ರಾಂತ್ಯ ಹಾಗೂ ಕೇರಳದ ಮನೆ ಮನೆಯಲ್ಲೂ ದುಬೈಗೆ ಹೋದವರು ಒಬ್ಬರಾದರೂ ಸಿಗುತ್ತಾರೆ ಎನ್ನುತ್ತಿದ್ದ ಕಾಲವೊಂದಿತ್ತು. ಹೈಸ್ಕೂಲೋ, ಪಿಯುಸಿಯೋ ಓದಿ ಪಾಸಾಗಿರಲಿ, ಇಲ್ಲದಿರಲಿ ದುಬೈಗೆ ಹೋಗಿ ಬಿಟ್ಟರೆ ಲೈಫ್ ಸೆಟಲ್ ಆದಂತೆ ಎನ್ನುತ್ತಿದ್ದ ಕಾಲವದು. ಇವತ್ತು ಕೂಡ ಪರಿಸ್ಥಿತಿ ಭಿನ್ನವೇನಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ವಾರ ಬಿಡುಗಡೆಯಾದ ಪುರುಷೋತ್ತಮನ ಪ್ರಸಂಗ ಹೆಚ್ಚೆಚ್ಚು ಜನರನ್ನ ಆಕರ್ಷಿಸುತ್ತಿದೆ. ದಿನ ಕಳೆದಂತೆ ಬೆಂಗಳೂರು, ಮಂಗಳೂರು ಎನ್ನದೇ ಎಲ್ಲೆಡೆ ಮನೆ ಮಾತಾಗ್ತಿದೆ. ನೋಡಿದ ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ಯಾಕೆಂದರೆ ಪುರುಷೋತ್ತಮನ ಪ್ರಸಂಗದಲ್ಲಿ ಇಂಥಹದ್ದೇ ದುಬೈ ಮೋಹದ ಕಥೆ ಇದೆ.
ಹೌದು, ತುಳುವಿನಲ್ಲಿ ಹತ್ತಾರು ನಾಟಕಗಳನ್ನ ಹಾಗೂ ಒಂಬತ್ತು ಸಿನಿಮಾಗಳನ್ನ ನಿರ್ದೇಶಿಸಿರುವ ದೇವದಾಸ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಕನ್ನಡ ಸಿನಿಮಾ ಪುರುಷೋತ್ತಮನ ಪ್ರಸಂಗ . ಇವರ ತುಳು ಸಿನಿಮಾಗಳನ್ನ ನೋಡಿದವರಿಗೆ ಹಾಸ್ಯವೇ ಇವರ ಪ್ರಧಾನ ಅಸ್ತ್ರ ಅನ್ನುವ ವಿಚಾರ ಗೊತ್ತೇ ಇರುತ್ತೆ. ಪುರುಷೋತ್ತಮನ ಪ್ರಸಂಗ ಚಿತ್ರದ ಮೂಲಕವೂ ಈ ಅಸ್ತ್ರವನ್ನ ಯಶಸ್ವೀಯಾಗಿ ಪ್ರಯೋಗಿಸಿದ್ದಾರೆ ನಿರ್ದೇಶಕ ದೇವದಾಸ್ ಕಾಪಿಕಾಡ್ . ಹೀಗಾಗಿಯೇ ಚಿತ್ರಮಂದಿರದಲ್ಲಿ ನಕ್ಕು ನಲಿಯುತ್ತಿರುವ ಪ್ರೇಕ್ಷಕರು ಚಿತ್ರವನ್ನ ಮೆಚ್ಚಿ ಮನಸಾರೆ ಮಾತನಾಡುತ್ತಿದ್ದಾರೆ.

ಇನ್ನೂ ನಿಮಗೆ ಗೊತ್ತು, ವಾರಕ್ಕೆ ಅರ್ಧ ಡಜನ್ ಸಿನಿಮಾಗಳು ತೆರೆಗೆ ಬರುವ ಕಾಲ ಇದು. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಥೇಟರಿಗೆ ಎಳೆದು ತರಲು ಸಿನಿಮಾ ತಂಡಗಳು ಹರಸಾಹಸ ಮಾಡುತ್ತಿವೆ. ಇಂಥಹ ಕಾಲಘಟ್ಟದಲ್ಲಿ ಯಾವುದೇ ಪಬ್ಲಿಸಿಟಿ ಗಿಮಿಕ್ ಇಲ್ಲದೆ, ಅಬ್ಬರದ ಪ್ರಚಾರ ಮಾಡಿ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸದೆ, ನೋಡಿದವರ ಮನಸ್ಸಿಗೆ ಪುರುಷೋತ್ತಮನ ಪ್ರಸಂಗ ಹತ್ತಿರವಾಗುತ್ತಿದೆ.
ಅಂದ್ಹಾಗೇ ಪುರುಷೋತ್ತಮನ ಪ್ರಸಂಗ ಚಿತ್ರದ ಮೂಲಕ ಚಿತ್ರದ ನಾಯಕ ಕನ್ನಡ ಚಿತ್ರರಂಗದ ಭವಿಷ್ಯದ ಭರವಸೆಯನ್ನೂ ಮೂಡಿಸಿದ್ದಾರೆ. ಯಾವುದೇ ಕಮರ್ಷಿಯಲ್ ಅಂಶಗಳಿಗೆ ಜೋತು ಬೀಳದೇ ಶ್ರದ್ದೆ ಹಾಗೂ ಭಕ್ತಿಯಿಂದ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಕಾರಣಕ್ಕೋ ಏನೋ ಅಜಯ್ ಪ್ರೇಕ್ಷಕರಿಗೆ ಚಿತ್ರದ ಮೂಲಕ ಇನ್ನಷ್ಟು ಹತ್ತಿರವಾಗಿದ್ದಾರೆ. ಇನ್ನೂ ರಿಷಿಕಾ ನಾಯಕ್ ಸೀದಾ ಸಾದಾ ಹುಡುಗಿಯಾಗಿ ಇಷ್ಟವಾಗ್ತಾರೆ. ಪಾತ್ರವನ್ನ ಜೀವಿಸಿದ್ದಾರೆ. ಅರವಿಂದ್ ಬೋಳಾರ್ , ಭೋಜರಾಜ ವಾಮಂಜೂರು, ನವೀನ್ ಡಿ ಪಡೀಲ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿಯೇ ದುಬೈಯನ್ನ ಅದ್ಭುತವಾಗಿ ಸೃಷ್ಟಿಸಿದ ಸಿನಿಮಾದ ಆರಂಭಿಕ ದೃಶ್ಯ ನಿರ್ಮಾಪಕರಾದ ವಿ. ರವಿ ಕುಮಾರ್ , ಶಂಶುದ್ದೀನ್ ಮತ್ತು ನಿರ್ದೇಶಕರ ಸಿನಿಮಾ ಉತ್ಸಾಹಕ್ಕೆ ಒಂದು ಕೈಗನ್ನಡಿ. ಉಳಿದಂತೆ ನಕುಲ್ ಅಭಯಂಕರ್ ಸಂಗೀತ ಕೂಡ ಇಂಪಾಗಿದೆ.

ಒಟ್ಟಿನಲ್ಲಿ ಪುರುಷೋತ್ತಮನ ಪ್ರಸಂಗ ಮನೆ ಮಂದಿಯೆಲ್ಲ ಕುಳಿತು ಆರಾಮಾಗಿ ನೋಡಬಹುದಾದ ಸಿನಿಮಾ. ಸಿಕ್ಕ ಹಾಗೂ ಸಿಕ್ತಿರುವ ಪ್ರಶಂಸೆ ಈ ಮಾತನ್ನೇ ಸಾರಿ ಹೇಳಿವೆ.ಪುರುಷೋತ್ತಮನ ಪ್ರಸಂಗವನ್ನ ಸಾಧ್ಯವಾದರೆ ನೀವು ಒಮ್ಮೆ ನೋಡಿ.


Click it and Unblock the Notifications











