»   » ಕೆನಡಾ ಕನ್ನಡಿಗನ ಪೂರ್ವಾಪರ ಯಾತ್ರೆ

ಕೆನಡಾ ಕನ್ನಡಿಗನ ಪೂರ್ವಾಪರ ಯಾತ್ರೆ

Posted By:
Subscribe to Filmibeat Kannada

ಅರುವತ್ತರ ಸಂಪ್ರದಾಯಸ್ಥ ಗೃಹಿಣಿ. ಶೃಂಗೇರಿಯ ತುಂಗೆಯಲ್ಲೇ ಮಿಂದವಳು. ಇಂಥವಳು ಅಮೆರಿಕೆಗೆ ಹೋದರೆ? ಸಂಸ್ಕೃತಿಯ ಮುಖಾಮುಖಿ. ತನ್ನ ಮೂಲಗಳ ಹುಡುಕಾಟ. ಏನೋ ಸತಮತ, ಎಂಥದೋ ಹೊಯ್ದಾಟ. ಇದು 1960ರ ದಶಕದಲ್ಲಿ ಎಂ.ಕೆ.ಇಂದಿರಾ ಬರೆದ ಕಾದಂಬರಿಯ ವಸ್ತು. ಇಂದಿಗೂ ಹಿಡಿದು ನಿಲ್ಲಿಸುವಷ್ಟು ಶಕ್ತ. ಇನ್ನು ಕೆಲವೇ ತಿಂಗಳುಗಳಲ್ಲಿ ಇದನ್ನು ಸಿನಿಮಾ ಆಗಿ ನೋಡುವ ಭಾಗ್ಯ ಕನ್ನಡಿಗರದ್ದು. ಕೃಪೆ- ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಹಳದಿ ಬೈಕ್‌ ಹುಡುಗ ಚಂದ್ರಶೇಖರ್‌ ಉರುಫ್‌ ಚಂದ್ರು. ಕಾದಂಬರಿ ಹಾಗೂ ಚಿತ್ರದ ಹೆಸರು ಪೂರ್ವಾಪರ.

ನಮ್ಮ ಮಕ್ಕಳು ಚಿತ್ರದಲ್ಲಿ ನಿನ್ನೊಲುಮೆ ನಮಗಿರಲಿ ತಂದೆ... ಅಂತ ಕೈಮುಗಿದು ಹಾಡು ಹಾಡಿದ ಬಾಲಕ ಚಂದ್ರು, ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ವಿಲನ್‌ ನೋಟದಿಂದಲೇ ಗೆದ್ದ ಬಿಳಿ ಚಂದ್ರು ಇದೀಗ ಇನ್ನೂ ಬೆಳ್ಳಗಾಗಿದ್ದಾರೆ. ಆದರೆ ಕನ್ನಡದ ಮನಸ್ಸು ಹಾಗೇ ಇದೆ. ಪುಟ್ಟಣ್ಣನವರ ಗರಡಿಯ ವರಸೆಗಳನ್ನು ಹತ್ತಿರದಿಂದ ಬಲ್ಲ ಈತನದು 65 ಚಿತ್ರಗಳ ನಟನೆಯ ಅನುಭವ. ಕೆನೆಡಿಯನ್‌ ಟೆಲಿವಿಷನ್‌ಗೆ ಕಾರ್ಪೊರೇಟ್‌ ವಿಡಿಯೋ ಹಾಗೂ ಟೆಲಿಚಿತ್ರಗಳನ್ನು ತೆಗೆದುಕೊಡುವ ಒಳ್ಳೆಯ ಅವಕಾಶದ ಬೆನ್ನು ಹತ್ತಿ ಈತ ಪಲಾಯನಗೈದರೂ ಅದು ಪ್ರತಿಭಾ ಪಲಾಯನವಲ್ಲ. ಡೆನ್ವರ್‌, ಕೊಲರ್ಯಾಡೋ, ಅಮೆರಿಕೆ ಎಲ್ಲೆಡೆಯೂ ಸುತ್ತಿ , ತಂಗಿ, ಕೆಲಸ ಮಾಡಿದ ಚಂದ್ರು ಕನ್ನಡ ಮರೆಯಲಿಲ್ಲ. ತಮ್ಮ ವಿದೇಶೀ ಟಿವಿ ಕೆಲಸದ ನಡುವೆಯೇ ಹಿಂದಿ ಭಾಷೆಯಲ್ಲಿ ಒಂದು ಧಾರಾವಾಹಿಯನ್ನೂ ಮಾಡಿದವರು ಚಂದ್ರು.


ಕಾದಂಬರಿ ಬಲವಾಗಿದೆ. ಚಿತ್ರಕತೆಗೆ ಹೊಂದಿಸಿಕೊಳ್ಳಲು ಪರದಾಡುವ ಅಗತ್ಯವೇ ಇರಲಿಲ್ಲ. ಅರುವತ್ತರ ದಶಕದಲ್ಲಿ ಎಂ.ಕೆ.ಇಂದಿರಾ ಅವರು ಬರೆದದ್ದು ಇಂದಿಗೂ ಪ್ರಸ್ತುತ. ಸಾಮಾಜಿಕ ಬದಲಾವಣೆಗಳು ಕಾಲಕಾಲಕ್ಕೆ ಆಗುತ್ತಲೇ ಇದ್ದರೂ, ಅದಕ್ಕೆ ಒಳಗಾಗುವ ಮನಸ್ಸುಗಳಲ್ಲಿ ಹಳೆಯ ಬೇರುಗಳು ಹಾಗೇ ಇರುತ್ತವೆ. ಅರ್ಧ ಶೂಟಿಂಗ್‌ ಮುಗಿದಿದೆ; ಭಾರತದ ಪೋರ್ಷನ್‌. ಇನ್ನುಳಿದಿರುವುದು ಡೆನ್ವರ್‌ನಲ್ಲಿ ಶೂಟ್‌ ಮಾಡಬೇಕು. ಉತ್ಸಾಹ, ಭಯ, ತವಕ, ಆತಂಕ, ನಿರೀಕ್ಷೆ ಎಲ್ಲಾ ಭಾವಗಳನ್ನು ಹೊತ್ತು ಈ ಕೆಲಸ ಮಾಡುತ್ತಿದ್ದೇನೆ. ಇದು ಪ್ರೇಮ ಕತೆಯಲ್ಲ. ಯಾವುದೋ ಜಡ್ಜ್‌ಮೆಂಟೂ ಅಲ್ಲ. ಭಿನ್ನವಾಗಿದೆ. ರಿಸ್ಕ್‌ ಕೂಡ ಹೌದು ಎನ್ನುವ ಚಂದ್ರು ಸಿಕ್ಕಾಪಟ್ಟೆ ಡೆಡಿಕೇಟ್‌ ಆಗಿದ್ದಾರೆ.

ಮಗ ನೆಲೆ ನಿಂತ ಅಮೆರಿಕೆಗೆ ತುಂಗೆಯ ತೀರದ ಹೆಂಗಸು ಹೋದಾಗ.. ಅಂತ ಒಂದೇ ಸಾಲಲ್ಲಿ ಕತೆಯ ಸಾರ ಹೇಳಿಬಿಡಬಹುದು. ಈ ಹೆಂಗಸಿನ ಪಾತ್ರ ವಹಿಸುತ್ತಿರುವುದು ಸ್ಯಾಂಡಲ್‌ವುಡ್‌ನಿಂದ ವರ್ಷಗಳ ಹಿಂದೆಯೇ ಮರೆಯಾಗಿರುವ ಗೀತಾ. ಈಚೀಚೆಗೆ ನಖರಾ- ಕಿರಿಕ್ಕುಗಳಿಂದಲೇ ಸುದ್ದಿ ಮಾಡುತ್ತಿರುವ ಸ್ಫುರದ್ರೂಪಿ ಉದಯೋನ್ಮುಖ ನಟ ನವೀನ್‌ ಮಯೂರ್‌ ಇನ್ನೊಬ್ಬ ನಟ. ಬೀಡಾಗೆ ಚುಚ್ಚುವ ಲವಂಗದಲ್ಲಿ ಸ್ಕೂೃ ಕಾಣುವ ಚುರುಕು ಕತೆಗಾರ ಜಯಂತ ಕಾಯ್ಕಿಣಿ ಸಂಭಾಷಣೆ. ವಿಜಯಭಾಸ್ಕರ್‌ ಸಂಗೀತ. ಬಲ್ಲಾಳರ ಹೆಜ್ಜೆಯ ಪ್ರೊಜೆಕ್ಟು ನೆನೆಗುದಿಗೆ ಬಿದ್ದಿರುವ ಈ ಹೊತ್ತಲ್ಲಿ ರೀಮೇಕು ಎಂಬ ಬೊಂಬಡಾದ ನಡುವೆ ಚಂದ್ರು ಅಲ್ಲಿಂದ ಇಲ್ಲಿಗೆ ಓಡೋಡಿ ಬಂದು ಮಾಡುತ್ತಿರುವ ಕೆಲಸ ಆಸಕ್ತಿ ಹುಟ್ಟಿಸುವಂತಿದೆ, ಅಲ್ಲವೇ?

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X