ಹೇಳ್ದೆ ಕೇಳ್ದೆ ಹೀಗ್ ಮಾಡ್ಬೋದಾ, ಎಷ್ಟು ಚೀಪ್ ಇದು ನಾನಿ?
ಪ್ಯಾನ್ ಇಂಡಿಯಾ ಹಾಗೂ ಓಟಿಟಿ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಚಿತ್ರಗಳ ಹಾವಳಿ ಕಮ್ಮಿ ಆಗಿದೆ. ಒಂದು ಸಿನಿಮಾ 5 ಭಾಷೆಗಳಿಗೆ ಡಬ್ ಆಗಿ ಬರ್ತಿದೆ. ಓಟಿಟಿಯಲ್ಲಿ ಎಲ್ಲರೂ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವಂತಾಗಿದೆ. ಹಾಗಾಗಿ ರೀಮೇಕ್ ಬೆಲೆ ಕಳೆದುಕೊಂಡಿದೆ. ಆದರೂ ಆಗೊಮ್ಮೆ ಈಗೊಮ್ಮೆ ರೀಮೆಕ್ ಸಿನಿಮಾಗಳು ಬರುತ್ತವೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ರೀಮೆಕ್ ಮಾಡಬೇಕು ಅಂದ್ರೆ ಹಣ ಕೊಟ್ಟು ರೈಟ್ಸ್ ಖರೀದಿಸಬೇಕು. ಇಲ್ಲದೇ ಇದ್ದರೆ ಕಾಪಿರೈಟ್ ಸಮಸ್ಯೆ ಆಗುತ್ತದೆ. ಆದರೆ ಕೆಲವೊಮ್ಮೆ ಹೇಳದೇ ಕೇಳದೇ ಒಂದು ಚಿತ್ರದ ಕಥೆಯನ್ನು ಕದ್ದು ಸಿನಿಮಾ ಮಾಡುವವರು ಇರುತ್ತಾರೆ. ಅಥವಾ ಒಂದು ಚಿತ್ರದ ಕಥೆಯಿಂದ ಪ್ರೇರಣೆಗೊಂಡು ಸಿನಿಮಾ ಮಾಡುತ್ತಾರೆ. ಸಣ್ಣದಾಗಿ ಪ್ರೇರಣೆಗೊಂಡಿದ್ದರೆ ಪರವಾಗಿಲ್ಲ. ಆದರೆ ಏಕಾಏಕಿ ಕಾಪಿ ಪೇಸ್ಟ್ ಮಾಡಿದರೆ ಕಷ್ಟ.

ಸದ್ಯ ಕನ್ನಡ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತೆಲುಗು ನಟ ನಾನಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಷದ ಹಿಂದೆ ನಾನಿ ನಟನೆಯ 'ಹಾಯ್ ನಾನ್ನ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಸದ್ದು ಮಾಡಿತ್ತು. ಆದರೆ ಈ ಚಿತ್ರದ ಕಥೆಯನ್ನು ನಮ್ಮ 'ಭೀಮಸೇನ ನಳಮಹಾರಾಜ' ಚಿತ್ರದಿಂದ ಕದ್ದಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
"ರೀಮೆಕ್ ರೈಟ್ಸ್ ಪಡೆಯದೇ ನಮ್ಮ 'ಭೀಮಸೇನ ನಳಮಹಾರಾಜ' ಸಿನಿಮಾ ನೋಡಿ 'ಹಾಯ್ ನಾನ್ನ' ಸಿನಿಮಾ ಮಾಡಲಾಗಿದೆ. ಇದು ಎಷ್ಟು ಚೀಪ್ ನಾನಿ" ಎಂದು ಪುಷ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಎರಡೂ ಸಿನಿಮಾಗಳಲ್ಲಿ ತಂದೆ, ಮಗಳ ಬಾಂಧವ್ಯದ ಕತೆಯಿದೆ.
'ಭೀಮಸೇನ ನಳಮಹಾರಾಜ' ಹಾಗೂ 'ಹಾಯ್ ನಾನ್ನ' ಸಿನಿಮಾಗಳ ಕಥೆ ಸೇಮ್ ಟು ಸೇಮ್ ಇಲ್ಲದೇ ಇದ್ದರೂ ಕೊಂಚ ಸಾಮ್ಯತೆಯಿದೆ. ಇದೇ ಕಾರಣಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 5 ವರ್ಷಗಳ ಹಿಂದೆ ಕಾರ್ತಿಕ್ ಸರಗೂರ್ ನಿರ್ದೇಶನದ 'ಭೀಮಸೇನ ನಳಮಹಾರಾಜ' ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು. ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು.
ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕ ತಿಮ್ಮೇಶ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಪುಷ್ಕರ್ ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಚಿತ್ರಕ್ಕೆ ಹಣ ಹೂಡಿದ್ದರು. ಚರಣ್ ರಾಜ್ ಸಂಗೀತವಿತ್ತು. ಕೋವಿಡ್ ಸಂಕಷ್ಟ ಸಮಯದಲ್ಲಿ ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು.
ಸದ್ಯ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಅನುಮತಿ ಇಲ್ಲದೇ ಸಿನಿಮಾ ರೀಮೇಕ್ ಮಾಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ತೆಲುಗು ಪ್ರೇಕ್ಷಕರು ಇದನ್ನು ನೋಡಿ ಹುಬ್ಬೇರಿಸುತ್ತಿದ್ದಾರೆ. ಅರೇ 'ಹಾಯ್ ನಾನ್ನ' ಕಥೆ ಕದ್ದಿರೋದಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡವರು ಪ್ರತಿಕ್ರಿಯಿಸಿಲ್ಲ. ಮತ್ತೆ ಕೆಲವರು ಇಷ್ಟು ದಿನ ಪುಷ್ಕರ್ ಏನು ಮಾಡುತ್ತಿದ್ದರು? ಈಗ ಯಾಕೆ? ಕೇಳುತ್ತಿದ್ದಾರೆ? ಎಂದು ಕಾಮೆಂಟ್ ಮಾಡಿದ್ದಾರೆ.
ಶೌರ್ಯುವ್ ನಿರ್ದೇಶನದ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ 'ಹಾಯ್ ನಾನ್ನ' ಕನ್ನಡಕ್ಕೂ ಡಬ್ ಆಗಿ ಬಂದಿತ್ತು. ಆದರೆ ತೆಲುಗಿನಲ್ಲಿ ಮಾತ್ರ ಸಿನಿಮಾ ಗೆದ್ದಿತ್ತು. ಮೃಣಾಲ್ ಠಾಕೂರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಸೈಮಾ ಸೇರಿ ಕೆಲ ಪ್ರಶಸ್ತಿಗಳನ್ನು ಕೂಡ ಸಿನಿಮಾ ಬಾಚಿಕೊಂಡಿತ್ತು.


Click it and Unblock the Notifications











