ಮಲೆಯಾಳಂ ಇಂಡಸ್ಟ್ರಿಯಲ್ಲಿ ಖಾತೆ ತೆರೆದ ಪುಷ್ಕರ್ ಮಲ್ಲಿಕಾರ್ಜುನಯ್ಯ
ಕನ್ನಡದ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಮಾಲಿವುಡ್ ನಂಟು ಕಡಿಮೆ. ತೆಲುಗು, ತಮಿಳಿಗೆ ಹೋದ ಹಾಗೆ ಮಲೆಯಾಳಂಗೆ ಪ್ರಯಾಣ ಬೆಳೆಸುವವರು ಕಡಿಮೆ. ಆದರೆ, ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೇರಳ ನಾಡಿನಲ್ಲಿ ಖಾತೆ ತೆರೆಯುತ್ತಿದ್ದಾರೆ.
ಕನ್ನಡದಲ್ಲಿ ಭಿನ್ನ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿರುವ ಈ ನಿರ್ಮಾಪಕ ಈಗ ಬೇರೆ ಭಾಷೆಯಲ್ಲಿಯೂ ಪ್ರಯೋಗ ಮುಂದಿವರೆಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮೊದಲ ಸಿನಿಮಾಗೆ 'ತಿಂಗಳಾಯ್ಚ ನಿಶ್ಚಯಂ' ಎಂಬ ಹೆಸರನ್ನು ಇಡಲಾಗಿದೆ.
ಈ ಸಿನಿಮಾವನ್ನು ಸೆನ್ನಾ ಹೆಗ್ಡೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನು ಸೆನ್ನಾ ಹೆಗ್ಡೆ ನಿರ್ದೇಶನ ಮಾಡಿದ್ದರು. ಈ ಹೊಸ ಸಿನಿಮಾಗೆ ಪುಷ್ಕರ್ ನಿರ್ಮಾಣ ಇರುತ್ತದೆ.

ಈಗ ಇದೇ ಜೋಡಿ ಮಾಲಿವುಡ್ ಸಿನಿಮಾವನ್ನು ಶುರು ಮಾಡಿದ್ದಾರೆ. ಕೇರಳದ ಗಡಿ ಭಾಗದವರೇ ಆಗಿರುವ ಸೆನ್ನಾ ಹೆಗ್ಡೆ ಮಲೆಯಾಳಂ ಭಾಷೆಯನ್ನು ಬಲ್ಲವರರಾಗಿದ್ದಾರೆ. ಹೀಗಾಗಿ ಮಾಲಿವುಡ್ ನಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ ಶುರು ಮಾಡುತ್ತಿದ್ದಾರೆ. ಸದ್ಯಕ್ಕೆ, ಚಿತ್ರದ ಕಲಾವಿದರ ಪಟ್ಟಿ ಹೊರಬಂದಿಲ್ಲ.
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದ ಪುಷ್ಕರ್ ಬಳಿಕ 'ಕಿರಿಕ್ ಪಾರ್ಟಿ', 'ಹಂಬಲ್ ಪೊಲಿಟಿಷಿಯನ್ ನೊಗರಾಜ್', 'ಕಥೆಯೊಂದು ಶುರುವಾಗಿದೆ' ಚಿತ್ರಗಳನ್ನು ನಿರ್ಮಾಣ ಮಾಡಿದರು. 'ಅವತಾರ್ ಪುರುಷ', 'ಅವನೇ ಶ್ರೀಮನ್ನಾರಾಯಣ', 'ಭೀಮಸೇನ ನಳಮಹಾರಾಜ', ವಿನಯ್ ರಾಜ್ ಕುಮಾರ್ ಚಿತ್ರ, '777 ಚಾರ್ಲಿ', ಅವರ ಮುಂದಿನ ನಿರ್ಮಾಣದ ಚಿತ್ರಗಳಾಗಿವೆ.
ತಮ್ಮ ನಿರ್ಮಾಣದ ಚಿತ್ರಗಳ ಜೊತೆಗೆ ನಟನೆಯನ್ನು ಕೂಡ ಶುರು ಮಾಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ತಯಾರಿ ನಡೆಸಿದ್ದಾರೆ.


Click it and Unblock the Notifications











